Advertisement

ವಿಶ್ವಾಸಮತ ಯಾಚನೆಗೆ ನಿರ್ದೇಶನ ಕೋರಿ ಹೈಕೋರ್ಟ್‌ಗೆ ಅರ್ಜಿ

11:52 PM Jul 22, 2019 | Lakshmi GovindaRaj |

ಬೆಂಗಳೂರು: ನಿರ್ದಿಷ್ಟ ಕಾಲಮಿತಿಯೊಳಗೆ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ವಿಧಾನಸಭೆ ಸ್ಪೀಕರ್‌ ಅವರಿಗೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ವಕೀಲ ಆರ್‌.ಆನಂದಮೂರ್ತಿ ಈ ಅರ್ಜಿ ಸಲ್ಲಿಸಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ವಿಧಾನಸಭೆ ಸ್ಪೀಕರ್‌ ಅವರನ್ನು ಪ್ರತಿವಾದಿ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

Advertisement

ಮೈತ್ರಿ ಸರ್ಕಾರದ ಹಲವು ಶಾಸಕರು ರಾಜೀನಾಮೆ ಸಲ್ಲಿಸಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದಿದ್ದಾರೆ. ಈ ಮಧ್ಯೆ ಸಚಿವರು ಸಹ ರಾಜೀನಾಮೆ ನೀಡಿದ್ದಾರೆ. ಖುದ್ದು ಮುಖ್ಯಮಂತ್ರಿಯವರು ವಿಶ್ವಾಸಮತ ಯಾಚನೆ ಪ್ರಸ್ತಾವನೆ ಮಂಡಿಸಿದ್ದಾರೆ. ಈ ಬಗ್ಗೆ ಜು.18ರಂದು ಸ್ಪೀಕರ್‌ ಅವರು ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ. ವಿಶ್ವಾಸಮತ ಯಾಚನೆ ಪೂರ್ಣಗೊಳಿಸುವಂತೆ ರಾಜ್ಯಪಾಲರು ಎರಡು ಬಾರಿ ಸೂಚನೆ ಕೊಟ್ಟಿದ್ದಾರೆ.

ಆದರೆ, ಸ್ಪೀಕರ್‌ ಹಾಗೂ ಮುಖ್ಯಮಂತ್ರಿಯವರು ರಾಜ್ಯಪಾಲರ ಸೂಚನೆಯನ್ನು ಪಾಲಿಸುತ್ತಿಲ್ಲ. ಬಹುಮತ ಇಲ್ಲದಿದ್ದರೂ, ವಿಶ್ವಾಸಮತ ಯಾಚನೆ ಪೂರ್ಣಗೊಳ್ಳದಿದ್ದರೂ ಮುಖ್ಯಮಂತ್ರಿಯವರು ಅನೇಕ ಆಡಳಿತಾತ್ಮಕ ಹಾಗೂ ಹಣಕಾಸು ಸಂಬಂಧಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗಾಗಿ ಕಾಲಮಿತಿಯೊಳಗೆ ವಿಶ್ವಾಸಮತ ಯಾಚನೆ ಪೂರ್ಣಗೊಳಿಸುವಂತೆ ಹಾಗೂ ಅಲ್ಲಿಯವರೆಗೆ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಂತೆ ಮುಖ್ಯಮಂತ್ರಿಯವರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿದಾರರ ಪರ ವಕೀಲ ಅರುಣ್‌ ಶ್ಯಾಮ್‌ ವಕಾಲತ್ತು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next