ಬೆಂಗಳೂರು: ಶಾಸಕರ ದೂರವಾಣಿ ಹಾಗೂ ವೈದ್ಯಕೀಯ ಭತ್ಯೆಗೆ ಕೋಟ್ಯಾಂತರ ರೂ. ಹಣ ಅಪವ್ಯಯ ಆಗುತ್ತಿರುವುದನ್ನು ತಪ್ಪಿಸಲು ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಈ ಕುರಿತು ವಕೀಲ ಕೆ.ಬಿ. ವಿಜಯಕುಮಾರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾ.ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆ ಬಂದಿತ್ತು.
ಪ್ರಾಥಮಿಕ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಮನವಿಯು “ಕರ್ನಾಟಕ ಶಾಸಕಾಂಗ ವೇತನ, ಪಿಂಚಣಿ ಮತ್ತು ಭತ್ಯೆಗಳ ಕಾಯ್ದೆ-1956ರ ಸೆಕ್ಷನ್ 12, ಕರ್ನಾಟಕ ಶಾಸಕಾಂಗ ವೇತನ, ಪಿಂಚಣಿ ಮತ್ತು ಭತ್ಯೆ ಕಾಯ್ದೆ – 1956ರ ಸೆಕ್ಷನ್ 12 (ಐ) (ಎಚ್)’ ಗೆ ತದ್ವಿರುದ್ಧವಾಗಿದೆ. ಹಾಗಾಗಿ, ಅರ್ಜಿ ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ವಜಾಗೊಳಿಸಿತು.
ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಸದಸ್ಯರಿಗೆ (ಶಾಸಕರು) ಸ್ಥಿರ ದೂರವಾಣಿ ಹಾಗೂ ಮೊಬೈಲ್ ಬಳಕೆಗೆ ಮಾಸಿಕ 20 ಸಾವಿರ ರೂ. ನೀಡಲಾಗುತ್ತಿದೆ. ರಾಜ್ಯದ 225 ವಿಧಾನಸಭೆ ಸದಸ್ಯರು ಹಾಗೂ 75 ವಿಧಾನಪರಿಷತ್ತಿನ ಸದಸ್ಯರು ಸೇರಿ ಒಟ್ಟು 300 ಮಂದಿಗೆ ವಾರ್ಷಿಕ 7.20 ಕೋಟಿ ರೂ.ವೆಚ್ಚವಾಗುತ್ತಿದೆ. ಹೀಗಿರುವಾಗ ಸರ್ಕಾರಿ ಹಾಗೂ ಅನೇಕ ಖಾಸಗಿ ದೂರವಾಣಿ ಸಂಸ್ಥೆಗಳು ಕಡಿಮೆ ದರದಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅದೇ ಸೌಲಭ್ಯಗಳನ್ನು ಶಾಸಕರಿಗೆ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಅಲ್ಲದೇ, ಮಾಜಿ ಹಾಗೂ ಹಾಲಿ ಎಂಎಲ್‌ಎ ಮತ್ತು ಎಂಎಲ್‌ಸಿಗಳು ಮತ್ತವರ ಕುಟುಂಬದವರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದ್ದು, ಆ ವೆಚ್ಚಕ್ಕೆ ಯಾವುದೇ ಮಿತಿ ಇಲ್ಲದ ಕಾರಣ, ಕೋಟ್ಯಂತರ ರೂ.ಹಣ ಖರ್ಚಾಗುತ್ತಿದೆ. ಅದರ ಬದಲಿಗೆ ಸರ್ಕಾರಿ ಹಾಗೂ ಖಾಸಗಿ ವಿಮಾ ಸಂಸ್ಥೆಗಳಲ್ಲಿ ಕಡಿಮೆ ದರಕ್ಕೆ 1 ಕೋಟಿ ರೂ. ವರೆಗೆ ವೈದ್ಯಕೀಯ ಸೌಲಭ್ಯ ಸಿಗುತ್ತಿದೆ. ಹೀಗಾಗಿ ಪ್ರತಿ ಸದಸ್ಯರಿಗೂ ಸರ್ಕಾರದ ವತಿಯಿಂದಲೇ ಆರೋಗ್ಯ ವಿಮೆ ವಿತರಿಸಲು ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
6.79 ಕೋಟಿ ರೂ. ಉಳಿತಾಯ: ಈಗ ಮೊಬೈಲ್ ಸಂಸ್ಥೆಗಳು ಕೇವಲ 1,500 ರೂ.ಗೆ ಒಂದು ವರ್ಷದ ಅವಧಿಗೆ ಅನಿಯಮಿತ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್ ಹಾಗೂ 1.2 ಜಿಬಿ ಇಂಟರ್‌ನೆಟ್ ಡೇಟಾ ಸೌಲಭ್ಯ ನೀಡುತ್ತಿವೆ. ಇದಲ್ಲದೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಹ ಮಾಸಿಕ ಕೇವಲ 777 ರೂ.ಗೆ ಉಚಿತ ಕರೆಗಳು, ಇಂಟರ್‌ನೆಟ್ ಹಾಗೂ ವೈ-ಫೈ ವ್ಯವಸ್ಥೆ ಕಲ್ಪಿಸುತ್ತಿದೆ. ಅದರಂತೆ, ಪ್ರತಿ ಸದಸ್ಯರಿಗೂ ಸ್ಥಿರ ದೂರವಾಣಿಗೆ ಹೆಚ್ಚೆಂದರೆ ವಾರ್ಷಿಕ 12 ಸಾವಿರ ರೂ. ಹಾಗೂ ಮೊಬೈಲ್ ಬಿಲ್‌ಗಾಗಿ ವಾರ್ಷಿಕ 1,500 ರೂ. ನಿಗದಿಪಡಿಸಿದರೆ ವಾರ್ಷಿಕ ಕೇವಲ 40.50 ಲಕ್ಷ ರೂ. ವೆಚ್ಚವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 6.79 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.