Advertisement

ಕಂಬಳಕ್ಕೆ ಮತ್ತೆ ಅಪಸ್ವರ; ಸುಪ್ರೀಂ ಮೆಟ್ಟಿಲೇರಿದ ಪೆಟಾ

09:51 AM Nov 29, 2019 | mahesh |

ಕಾಪು: ಕಂಬಳ ಋತು ಆರಂಭಗೊಳ್ಳುತ್ತಿರು ವಂತೆ ಪ್ರಾಣಿ ದಯಾ ಸಂಘ(ಪೆಟಾ)ದವರು ಮತ್ತೆ ಕೋರ್ಟ್‌ ಮೆಟ್ಟಿಲೇರಿದ್ದು ಕಂಬಳ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

Advertisement

ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡುತ್ತಾರೆ ಎನ್ನುವುದು ಪೆಟಾದ ಆರೋಪ. 2014ರಿಂದ ಪೆಟಾ ನ್ಯಾಯಾಲಯದಲ್ಲಿ ಹೋರಾಟ ನಿರತವಾಗಿದ್ದು, ಕೆಲವು ವರ್ಷಗಳ ಕಾಲ ತಡೆ ತರುವಲ್ಲಿ ಯಶಸ್ವಿಯಾಗಿತ್ತು. ಕಂಬಳ ಸಮಿತಿ, ಆಯೋಜಕರು, ಕೋಣಗಳ ಯಜಮಾನರು, ಓಟಗಾರರು ಮತ್ತು ಅಭಿಮಾನಿಗಳು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ಹೋರಾಟದ ಮೂಲಕ ನಾಲ್ಕು ವರ್ಷಗಳ ಬಳಿಕ ಅಡೆತಡೆಗಳನ್ನು ನಿವಾರಿಸಿಕೊಂಡಿದ್ದರು. ಸರಕಾರದ ನಿಯಮಗಳಂತೆಯೇ ಕಳೆದ ವರ್ಷ ಎಲ್ಲೆಡೆ ಕಂಬಳ ಕೂಟ ಯಶಸ್ವಿಯಾಗಿತ್ತು.

ನಿಯಮಗಳೇನು?
ಕೋಣಗಳಿಗೆ ಹೊಡೆಯಬಾರದು, ಬೆತ್ತ ಬಳಸಬಾರದು, ಮೂಗಿಗೆ ಹಗ್ಗ ಹಾಕಬಾರದು, 100 ಮೀಟರ್‌ಗಿಂತ ಹೆಚ್ಚು ಓಡಿಸುವಂತಿಲ್ಲ, ಹೆಚ್ಚಿನ ಉಷ್ಣಾಂಶವಿರುವಾಗ ಓಡಿಸಬಾರದು ಎಂಬಿತ್ಯಾದಿ ಅನೇಕ ನಿಯಮಾವಳಿಗಳನ್ನು ಸುಪ್ರೀಂ ಕೋರ್ಟ್‌ ರೂಪಿಸಿತ್ತು. ಅವುಗಳನ್ನು ಉಲ್ಲಂಘಿಸಿ ನಡೆಸಿದ ಕಂಬಳಗಳ ವೀಡಿಯೋ ಚಿತ್ರೀಕರಣ ಮಾಡಿಕೊಂಡ ಪೇಟಾದವರು ಕಂಬಳಕ್ಕೆ ಮತ್ತೂಮ್ಮೆ ತಡೆಯಾಜ್ಞೆ ಕೋರಿ ಸುಪ್ರೀಂ ಮೊರೆ ಹೋಗಿದ್ದಾರೆ.

ಉಲ್ಲಂಘನೆ ಎಲ್ಲೆಲ್ಲಿ?
ಕಳೆದ‌ ವರ್ಷ ಬಾರಾಡಿಬೀಡು, ಮೂಡುಬಿದಿರೆ, ವಾಮಂಜೂರು ತಿರುವೈಲುಗುತ್ತು ಮತ್ತು ಕೂಳೂರು ಕಂಬಳಗಳಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ, ಕೋಣಗಳನ್ನು ಹಿಂಸಿಸಲಾಗಿದೆ, ಗರಿಷ್ಠ ಉಷ್ಣಾಂಶದ ನಡುವೆಯೂ ಅವುಗಳನ್ನು ಓಡಿಸಲಾಗಿದೆ, ಬೆತ್ತದ ಏಟುಗಳನ್ನು ನೀಡಲಾಗಿದೆ ಮತ್ತು ಕಂಬಳದ ಹೆಸರಿನಲ್ಲಿ ನಿತ್ಯ ಜೂಜಾಟ ನಡೆಯುತ್ತಿದೆ ಎಂಬುದು ಪೆಟಾದ ವಾದ. ಮುಂದಿನ ವಿಚಾರಣೆ ಯಾವಾಗ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ.

ತುಳುನಾಡಿನಲ್ಲಿ ದೈವಗಳ ಆರಾಧನೆಯ ಭಾಗವಾಗಿ ಕೋಣಗಳನ್ನು ಓಡಿಸುವುದು ಪದ್ಧತಿ. ಜನಪದ ಆಚರಣೆ ಎಂಬ ನೆಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಬಾರಿಯ ಕಂಬಳ ಕೂಟಗಳಿಗೆ ಪೆಟಾದವರ ದೂರು ಯಾವ ಪರಿಣಾಮ ಬೀರೀತು ಎನ್ನುವುದನ್ನು ಕಾದು
ನೋಡಬೇಕಿದೆ.
– ಡಾ| ದೇವಿಪ್ರಸಾದ್‌ ಶೆಟ್ಟಿ, ಅಧ್ಯಕ್ಷರು, ಐಕಳ ಕಂಬಳ ಸಮಿತಿ

Advertisement

2014ರಿಂದ 2018ರ ನಡುವಿನ ಅವಧಿಯ 2 ವರ್ಷಗಳಲ್ಲಿ ಕಂಬಳ ಸಂಪೂರ್ಣ ನಿಂತು ಹೋಗಿತ್ತು. ಸಮರ್ಥ ಹೋರಾಟದ ಬಳಿಕ ಪುನರಾರಂಭಗೊಂಡ ಕಂಬಳದ ವಿರುದ್ಧ ಪೆಟಾದವರು ಮತ್ತೆ ಸುಪ್ರೀಂ ಕೋರ್ಟಿನ ಮೊರೆ ಹೋಗಿರುವುದು ವಿಷಾದನೀಯ. ನಿಯಮಗಳು ಮತ್ತು ಕಾನೂನನ್ನು ಜನರಿಗೆ ತಿಳಿಸಿ, ಅವರನ್ನು ಜಾಗೃತಗೊಳಿಸುವ ಪ್ರಯತ್ನ ಕಂಬಳ ಸಮಿತಿಯ ಮೂಲಕ ನಡೆಯಬೇಕಿದೆ.
– ಗುಣಪಾಲ ಕಡಂಬ, ಸಂಚಾಲಕರು, ಕಂಬಳ ಅಕಾಡೆಮಿ

ರಾಜ್ಯ-ಕೇಂದ್ರ ಸರಕಾರ, ರಾಜ್ಯಪಾಲರು -ರಾಷ್ಟ್ರಪತಿಗಳ ಅಂಕಿತದೊಂದಿಗೆ ಪುನರಾರಂಭಗೊಂಡ ಕಂಬಳವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಪೆಟಾದವರು 2018ರ ಮೂರು-ನಾಲ್ಕು ಕಂಬಳಗಳ ವೀಡಿಯೋ ತುಣುಕುಗಳನ್ನು ತಿರುಚಿಕೊಂಡು ದಾಖಲೆ ರೂಪದಲ್ಲಿ ಕೋರ್ಟ್‌ನ ಮುಂದಿರಿಸಿದ್ದಾರೆ. ಈ ಬಗ್ಗೆ ಈಗಾಗಲೇ 6 ಬಾರಿ ವಾದ-ವಿವಾದ ನಡೆದಿದೆ. ಇದರಿಂದ ಈ ಬಾರಿಯ ಕಂಬಳಕ್ಕೆ ಯಾವುದೇ ರೀತಿಯ ಅಡ್ಡಿಯ ಸಾಧ್ಯತೆಗಳಿಲ್ಲ. ಜಿಲ್ಲಾಡಳಿತ, ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಪಶು ಸಂಗೋಪನಾ ಇಲಾಖೆಯ ನಿರ್ದೇಶನದಂತೆ 2019-20ರ ಸಾಲಿನ ಕಂಬಳ ಕೂಟಗಳ ಆಯೋಜನೆಗೆ ಭರ್ಜರಿ ಸಿದ್ಧತೆ ನಡೆದಿದೆ.
– ಪಿ.ಆರ್‌. ಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next