Advertisement

ಸೂರ್ಯಕಾಂತಿಗೆ ಕೀಟಬಾಧೆ : ರೈತರಿಗೆ ಸಂಕಷ್ಟ  

08:59 PM Oct 12, 2021 | Team Udayavani |

ಲಕ್ಷ್ಮೆಶ್ವರ: ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಸೂರ್ಯಕಾಂತಿಗೆ ಇದೀಗ ಕೀಟಬಾಧೆ ಆವರಿಸಿರುವುದರಿಂದ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಮುಂಗಾರಿನಲ್ಲಿ ಅತಿವೃಷ್ಟಿ, ಹವಾಮಾನ ವೈಪರೀತ್ಯ, ಕೀಟ, ರೋಗಬಾಧೆಯ ಸಂಕಷ್ಟದಿಂದ ರೈತ ಸಮುದಾಯ ಪಾರಾಗುವಷ್ಟರಲ್ಲಿಯೇ ಮತ್ತೆ ಹಿಂಗಾರಿನ ಬಿತ್ತನೆ ಚಿಂತೆ, ಬಿತ್ತನೆ ಮಾಡಿ ಬೆಳೆದ ಬೆಳೆಗೆ ಕೀಟಬಾಧೆ ಆವರಿಸಿರುವುದು ರೈತರ ಸಂಕಷ್ಟಗಳಿಗೆ ತುಪ್ಪ ಸುರಿದಂತಾಗಿದೆ.

Advertisement

ಮುಂಗಾರಿನ ಶೇಂಗಾ, ಹತ್ತಿ, ಉಳ್ಳಾಗಡ್ಡಿಯಂತಹ ವಾಣಿಜ್ಯ ಬೆಳೆಗಳು ಕೆಲ ರೈತರ ಕೈ ಹಿಡಿದರೆ, ಮತ್ತೆ ಕೆಲ ರೈತರು ಕೈ ಸುಟ್ಟುಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯದ ನಿರೀಕ್ಷೆ ಮತ್ತು ಸದ್ಯ ಮಾರುಕಟ್ಟೆಯಲ್ಲಿ ಸೂರ್ಯಕಾಂತಿಗೆ ಉತ್ತಮ  ಬೆಲೆ ಇರುವುದರಿಂದ ಅನೇಕ ರೈತರು ಶೇಂಗಾ,ಹೆಸರು ಬೆಳೆದ ಹೊಲ ಹದಗೊಳಿಸಿ, ನೀರಾವರಿ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದಿದ್ದಾರೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬಿತ್ತನೆ ಮಾಡಿದ ಬೆಳೆ ಹುಲುಸಾಗಿಯೇ ಬೆಳೆದು ನಿಂತಿದೆ. ಆದರೆ, ಬೆಳೆ ತುಂಬ ಕೀಟ, ಕಂಬಳಿ ಹುಳುಗಳು ಆವರಿಸಿಕೊಂಡು ಎಲೆಗಳನ್ನು ಸಂಪೂರ್ಣ ತಿಂದು ದೇಟು ಮಾತ್ರ ಉಳಿಯುತ್ತಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ.

ಕೃಷಿ ಇಲಾಖೆ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಖುಷ್ಕಿ ಮತ್ತು ನೀರಾವರಿ ಸೇರಿ ಒಟ್ಟು 6250 ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಲಾಗಿದೆ. ಲಕ್ಷ್ಮೆಶ್ವರ, ಶಿಗ್ಲಿ, ಸೂರಣಗಿ, ಬಡ್ನಿ, ಗೊಜನೂರ, ಅಡರಕಟ್ಟಿ, ಆದ್ರಳ್ಳಿ, ಹರದಗಟ್ಟಿ, ದೊಡ್ಡೊರ ವ್ಯಾಪ್ತಿಯ ಜಮೀನುಗಳಲ್ಲಿ ಸೂರ್ಯಕಾಂತಿ ಬೆಳೆಯಲಾಗಿದೆ. ಆರಂಭದಲ್ಲಿಯೇ ಕೀಟಬಾಧೆಯಿಂದ ಇಳುವರಿ ಕುಸಿತದ ಜತೆಗೆ ಕಾಳು ಟೊಳ್ಳಾಗುವ ಆತಂಕ ರೈತರದ್ದಾಗಿದೆ. ಕೀಟ ನಿಯಂತ್ರಣಕ್ಕಾಗಿ ರೈತರು ಕ್ರಿಮಿನಾಶಕ ಸಿಂಪಡಣೆ ಕಾರ್ಯದಲ್ಲಿ ತೊಡಗಿರುವುದು ಕಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next