Advertisement

ಕುಲಭೂಷಣ್‌ ಜಾಧವ್‌ ಕಸಬ್‌ಗಿಂತಲೂ ದೊಡ್ಡ ಉಗ್ರ : ಪರ್ವೇಜ್ ಮುಶರ್ರಫ್

04:07 PM May 20, 2017 | Team Udayavani |

ಲಂಡನ್‌ : ಪಾಕ್‌ ಮಿಲಿಟರಿ ಕೋರ್ಟ್‌ನಿಂದ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿರುವ ಕುಲಭೂಷಣ್‌ ಜಾಧವ್‌, 2008ರ ಮುಂಬಯಿ ಉಗ್ರ ದಾಳಿಕೋರರಲ್ಲಿ ಒಬ್ಬನಾಗಿದ್ದ  ಅಜ್‌ಮಲ್‌ ಕಸಬ್‌ ಗಿಂತಲೂ ದೊಡ್ಡ ಭಯೋತ್ಪಾದಕ ಎಂದು ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಶರ್ರಫ್ ಹೇಳಿದ್ದಾರೆ. 

Advertisement

ಪಾಕಿಸ್ಥಾನದ ಎಆರ್‌ವೈ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಶರ್ರಫ್, “150 ಜನರ ಸಾವಿಗೆ ಕಾರಣವಾದ ಮುಂಬಯಿ ಮೇಲಿನ ಉಗ್ರ ದಾಳಿಯ ಓರ್ವ ದಾಳಿಕೋರನಾಗಿದ್ದ  ಅಜ್‌ಮಲ್‌ ಕಸಬ್‌ ತನ್ನ ನಿರ್ವಾಹಕರ ಕೈಯಲ್ಲಿ  ಕೇವಲ ಒಂದು ದಾಳವಾಗಿದ್ದ; ಆದರೆ ಭಾರತದ “ರಾ’ ಏಜಂಟ್‌ ಆಗಿರುವ ಕುಲಭೂಷಣ್‌ ಜಾಧವ್‌ ಪಾಕಿಸ್ಥಾನದ ಬಲೂಚಿಸ್ಥಾನದಲ್ಲಿ ಅಶಾಂತಿಯನ್ನು ಹುಟ್ಟಿಸಿ ಅಲ್ಲಿ  ವಿಧ್ವಂಸಕ ಕೃತ್ಯಗಳನ್ನು ನಡೆಸುವ ಭಾರೀ ಸಂಚಿನ ರೂವಾರಿಯಾಗಿದ್ದಾನೆ; ಆತ ಎಷ್ಟು ಪಾಕಿಸ್ಥಾನೀಯರ ಸಾವಿಗೆ ಕಾರಣನಾಗಿದ್ದಾನೆ ಎಂಬುದನ್ನು ನಾನು ಊಹಿಸಲಾರೆ; ಆದುದರಿಂದಲೇ ಆತ ಕಸಬ್‌ ಗಿಂತಲೂ ದೊಡ್ಡ ಉಗ್ರ’ ಎಂದು ಹೇಳಿದರು.

2008ರ ಮುಂಬಯಿ ಮೇಲಿನ ಉಗ್ರ ದಾಳಿಯಲ್ಲಿ  ಮುಂಬಯಿ ಪೊಲೀಸರ ಕೈಗೆ ಜೀವಂತ ಸಿಕ್ಕಿಬಿದ್ದಿದ್ದ ಏಕೈಕ ಉಗ್ರ ಅಜ್‌ಮಲ್‌ ಕಸಬ್‌ನನ್ನು ಭಾರತದಲ್ಲಿ ನೇಣಿಗೆ ಹಾಕಲಾಗಿತ್ತು. 

“ಕುಲಭೂಷಣ್‌ ಜಾಧವ್‌ ಕೇಸಿನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ವಿರುದ್ಧ ವಾದಿಸಲು ಪಾಕ್‌ ಸರಕಾರ ತನ್ನ ಕಾನೂನು ತಂಡವನ್ನು ಕಳುಹಿಸಲೇ ಬಾರದಿತ್ತು. ವಿಶ್ವ ಸಂಸ್ಥೆಗಾಗಲೀ ಐಸಿಜೆಗಾಗಲೀ ಯಾವುದೇ ಅಧಿಕಾರವಿಲ್ಲ; ಅವುಗಳು ಕೇವಲ ನಿರ್ದೇಶಗಳನ್ನು ಮಾತ್ರವೇ ನೀಡಬಹುದು. 1999ರಲ್ಲಿ ಇಬ್ಬರು ಜರ್ಮನ್‌ ಪ್ರಜೆಗಳನ್ನು ಗಲ್ಲಿಗೇರಿಸದಂತೆ ಐಸಿಜೆ ಹೇಳಿದ ಹೊರತಾಗಿಯೂ ಅಮೆರಿಕ ಯಾವುದೇ ಮುಲಾಜಿಲ್ಲದೆ ಆ ಇಬ್ಬರು ಜರ್ಮನ್‌ ಪ್ರಜೆಗಳನ್ನು ಗಲ್ಲಿಗೇರಿಸಿತ್ತು’ ಎಂದು ಮುಶರ್ರಫ್ ಹೇಳಿದರು. 

ಬೇಹುಗಾರಿಕೆ ಹಾಗೂ ವಿಧ್ವಂಸಕ ಕೃತ್ಯಗಳ ಪ್ರಕರಣಗಳು ಪಾಕಿಸ್ಥಾನದ ಆಂತರಿಕ ವಿಷಯಗಳು; ಹಾಗಿರುವಾಗ ಪಾಕಿಸ್ಥಾನಕ್ಕೆ ಯಾವುದೇ ಸಲಹೆ ಸೂಚನೆ ನೀಡುವ ಅಧಿಕಾರ ಅನ್ಯ ದೇಶಗಳಿಗೆ ಇಲ್ಲ ಎಂದು ಮುಶರ್ರಫ್ ಹೇಳಿದರು. 

Advertisement

ಪಾಕ್‌ನಲ್ಲಿ ಬೇಹುಗಾರಿಕೆ ನಡೆಸಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಕುಲಭೂಷಣ್‌ ಜಾಧವ್‌ ಎಷ್ಟು ಪಾಕಿಸ್ಥಾನೀಯರ ಸಾವಿಗೆ ಕಾರಣನಾಗಿದ್ದಾನೆಂಬುದು ತನಗೆ ಗೊತ್ತಿಲ್ಲ ಎಂದು ಮುಶರ್ರಫ್ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next