Advertisement

ಪೆರ್ವಾಜೆ ಸರಕಾರಿ ಶಾಲೆ:ಪಾಠಕ್ಕೆ ಜಾಗದ ಕೊರತೆ; ಕೊಠಡಿಗಳ ಮೇಲ್ಛಾವಣಿ ಶಿಥಿಲ

08:12 PM Nov 12, 2021 | Team Udayavani |

ಕಾರ್ಕಳ: ಪೆರ್ವಾಜೆ ಸ. ಮಾ. ಹಿ. ಪ್ರಾ ಶಾಲೆ ಜಿಲ್ಲೆಯಲ್ಲಿ ಗಮನ ಸೆಳೆಯುತ್ತಿರುವ ಸರಕಾರಿ ಶಾಲೆಯಾಗಿದ್ದು  ಸುಮಾರು 450 ವಿದ್ಯಾರ್ಥಿಗಳು ಇಲ್ಲಿದ್ದಾರೆ. ಕೊಠಡಿ, ಶಿಕ್ಷಕರ ಕೊರತೆಯೂ ಇಲ್ಲಿದೆ. ಜತೆಗೆ ಇದ್ದ ಎರಡು ಕೊಠಡಿಗಳ ಮೇಲ್ಛಾವಣಿ ಶಿಥಿಲಗೊಂಡು ಅದರೊಳಗೆ ಮಕ್ಕಳು ಶೈಕ್ಷಣಿಕ  ಚಟುವಟಿಕೆ ನಡೆಸುವುದು ಅಸಾಧ್ಯವಾಗಿದೆ.

Advertisement

ಇಲ್ಲಿ  1ರಿಂದ 7ನೇ ತನಕ ತರಗತಿಗಳಿದ್ದು  ಎಲ್ಲ  ಮಕ್ಕಳಿಗೆ ಕುಳಿತುಕೊಳ್ಳುವಷ್ಟು  ಕೊಠಡಿ  ಇಲ್ಲ. ಇನ್ನೂ  5 ಕೊಠಡಿಯ ಅಗತ್ಯವಿದೆ;   ಜತೆಗೆ 6 ಶಿಕ್ಷಕರ  ಕೊರತೆ ಇದೆ.   118 ವರ್ಷಗಳ ಇತಿಹಾಸವಿರುವ ಈ ಶಾಲೆ  ಹಳೆಯದಾಗಿರುವ ಕಾರಣ 1 ಸಣ್ಣ ಹಾಲ್‌, 1 ತರಗತಿ ಕೊಠಡಿಯ  ಮೇಲ್ಛಾವಣಿ ಶಿಥಿಲವಾಗಿ ಮರದ ವಾಲ್‌ ಪ್ಲೇಟ್‌ ಬೀಳುವ‌ ಸ್ಥಿತಿಯಲ್ಲಿದೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಅದರೊಳಗೆ ಮಕ್ಕಳನ್ನು ಕುಳ್ಳಿರಿಸಿ ಪಾಠ ಮಾಡುವ   ಹಾಗಿಲ್ಲ.  ಹಾಗಾಗಿ ಅದನ್ನು   ಖಾಲಿ ಬಿಡಲಾಗಿದೆ. ಮಕ್ಕಳ ಸುರಕ್ಷತೆ  ಕಾಪಾಡುವ ನಿಟ್ಟಿನಲ್ಲಿ  ಶಿಥಿಲ ಛಾವಣಿಯ ದುರಸ್ತಿ ಶೀಘ್ರವೇ ನಡೆಯಬೇಕಿದೆ. ಇಲ್ಲಿ  ಇನ್ನೊಂದು ದೊಡ್ಡ  ಹಾಲ್‌ ಇದೆ.  ಅದರ ದುರಸ್ತಿ ನಡೆಯುತ್ತಿದೆ.

ನೆಲಕ್ಕೆ  ಟೈಲ್ಸ್‌ ,ನೆಲ ಹಾಸು, ಕಿಟಕಿ ದುರಸ್ತಿ, ಪೀಠೊಪಕರಣ ಗಳ ದುರಸ್ತಿ ಇತ್ಯಾದಿ ಕೆಲಸಗಳು ದಾನಿಗಳ ಸಹಕಾರದಿಂದ ನಡೆಯುತ್ತಿವೆ.  ಸುಮಾರು 500ರಿಂದ 600 ಮಂದಿ ಮಕ್ಕಳು ಕುಳಿತು ಊಟ ಮಾಡುವ ಕೊಠಡಿ ಇದಾಗಿದ್ದು, ಈಗ ದುರಸ್ತಿ ನಡೆಯುತ್ತಿರುವ ಕಾರಣಕ್ಕೆ ಮಕ್ಕಳನ್ನು ಹೊರಗಿನ ವರಾಂಡದಲ್ಲಿ ಕುಳ್ಳಿರಿಸಿ ಮಧ್ಯಾಹ್ನದ ಬಿಸಿಯೂಟ ವಿತರಿಸಲಾಗುತ್ತಿದೆ.   ಕೊಠಡಿ ಕೊರತೆಯಿಂದಾಗಿ ಮಕ್ಕಳು ಒತ್ತಟ್ಟಿಗೆ ಕುಳಿತು ಪಾಠ ಕೇಳುವ ಸ್ಥಿತಿಯಿದೆ. ಇಪ್ಪತೈದು ಮಕ್ಕಳು ಕುಳಿತುಕೊಳ್ಳುವಲ್ಲಿ  ನೂರಾರು ಮಕ್ಕಳು ಕುಳಿತುಕೊಳ್ಳುವ  ಅನಿವಾರ್ಯತೆಯಿದೆ.

ಶೌಚಾಲಯ ಆಗಬೇಕಿದೆ:

ಮಕ್ಕಳ ಬಳಕೆಗೆ ಬೇಕಾಗುವಷ್ಟು ಇಲ್ಲಿ ಶೌಚಾಲಯಗಳಿಲ್ಲ.  ಹೆಚ್ಚು ಮಂದಿ ಕಡಿಮೆ  ಶೌಚಾಲಯ ಬಳಸುವುದು  ಸ್ವತ್ಛತೆಗೆ ಅಡ್ಡಿಯಾಗಿದೆ.

Advertisement

ಸಚಿವರು, ಸಂಸದರಿಂದ ಸ್ಪಂದನೆ ಭರವಸೆ:

ಶಾಲೆಗೆ ವಿದ್ಯಾಭಿಮಾನಿಗಳು, ದಾನಿಗಳು ಸ್ಪಂದಿಸುತ್ತಿದ್ದಾರೆ. ರೋಟರಿ ಕ್ಲಬ್‌, ರಾಕ್‌ ಸಿಟಿ ಮುಂತಾದ ಸಂಸ್ಥೆಗಳು ಕೊಡುಗೆ ನೀಡಿವೆ. ಎಸ್‌ಡಿಎಂಸಿ ಸಮಿತಿ ಕೂಡ ಸ್ಪಂದಿಸುತ್ತಿದೆ. ಶಾಲೆಗೆ  ಇನ್ನಷ್ಟು  ಮೂಲ ಸೌಕರ್ಯ ಅವಶ್ಯವಿದ್ದು ತುರ್ತಾಗಿ ಮೇಲ್ಛಾವಣಿ ದುರಸ್ತಿ ಆಗಬೇಕಿದೆ. ಸಚಿವರು, ಸಂಸದರಿಗೆ ಸಂಸ್ಥೆಯಿಂದ ಮನವಿ ಮಾಡಲಾಗಿದ್ದು, ಸ್ಪಂದಿಸುವ ಭರವಸೆ ಸಿಕ್ಕಿದೆ.  ಸಾಧ್ಯವಾದಷ್ಟು ಬೇಗ  ದುರಸ್ತಿ ಕಾರ್ಯ  ನಡೆದಲ್ಲಿ ಉತ್ತಮ  ಎನ್ನುವುದು ಪೋಷಕರ  ಆಗ್ರಹವಾಗಿದೆ.

ಮುಂದಿನ ವರ್ಷಕ್ಕೆ ಈಗಲೇ  ನೋಂದಣಿ  :

ಪ್ರಸಕ್ತ ವರ್ಷ 69 ಮಕ್ಕಳು ಮೊದಲ ತರಗತಿಗೆ ಪ್ರವೇಶ ಪಡೆದಿದ್ದು, ಇನ್ನಷ್ಟು ದಾಖಲಾತಿಗೆ ಮಕ್ಕಳ  ಹೆತ್ತವರು  ದುಂಬಾಲು ಬಿದ್ದಿದ್ದರು.  ಶಾಲಾಭಿವೃದ್ಧಿ, ಪೋಷಕರು, ಶಿಕ್ಷಕರ ಸಮನ್ವಯತೆಯಿಂದ ಉತ್ತಮ ಶಿಕ್ಷಣ ಈ ಶಾಲೆಯಲ್ಲಿ ಸಿಗುತ್ತಿರುವ ಕಾರಣಕ್ಕೆ ಪೋಷಕರು ಮುಂದಿನ ವರ್ಷಕ್ಕೆ  ದಾಖಲಾತಿಗೆ 50ರಿಂದ 60 ಹೆಸರು ಶಾಲಾ ಪುಸ್ತಕದಲ್ಲಿ ನೋಂದಣಿ  ಮಾಡಿಕೊಂಡಿದ್ದಾರೆ.

ಶಾಲೆಗೆ ಭೇಟಿ ನೀಡಿ  ಪರಿಶೀಲಿಸಲಾಗಿದ್ದು ದುರಸ್ತಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ, ಅನುದಾನಕ್ಕೆ ಬೇಡಿಕೆ ಸಲ್ಲಿಕೆಯಾಗಿದೆ. ಆದಷ್ಟು  ಬೇಗ  ಇದರ ದುರಸ್ತಿ  ನಡೆಸಲಾಗುವುದು.-ವೆಂಕಟೇಶ್‌ ನಾಯಕ್‌, ಕ್ಷೇತ್ರ ಶಿಕ್ಷಣಾಧಿಕಾರಿ,  ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next