Advertisement

ಪರ್ತ್‌ ಪಿಂಕ್‌ ಟೆಸ್ಟ್‌: ಆಸೀಸ್‌ಗೆ 296 ರನ್‌ಗಳ ಭರ್ಜರಿ ಗೆಲುವು

10:00 AM Dec 17, 2019 | sudhir |

ಪರ್ತ್‌: ಇಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ 296 ರನ್ನುಗಳ ಭಾರೀ ಅಂತರದಿಂದ ನ್ಯೂಜಿಲ್ಯಾಂಡನ್ನು ಮಣಿಸಿದೆ. ಇದರೊಂದಿಗೆ ಆಡಿದ ಎಲ್ಲ 6 ಡೇ-ನೈಟ್‌ ಟೆಸ್ಟ್‌ ಪಂದ್ಯಗಳಲ್ಲೂ ಆಸೀಸ್‌ ಜಯಭೇರಿ ಮೊಳಗಿಸಿದಂತಾಯಿತು.

Advertisement

ಗೆಲುವಿಗೆ 468 ರನ್ನುಗಳ ಗುರಿ ಪಡೆದ ನ್ಯೂಜಿಲ್ಯಾಂಡ್‌, ಪಂದ್ಯದ 4ನೇ ದಿನವಾದ ರವಿವಾರ ಕಾಂಗರೂ ಬೌಲಿಂಗ್‌ ದಾಳಿಗೆ ತತ್ತರಿಸಿ 171 ರನ್ನುಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು.

250 ರನ್‌ ಮುನ್ನಡೆ ಪಡೆದ ಬಳಿಕ ನ್ಯೂಜಿಲ್ಯಾಂಡಿಗೆ ಫಾಲೋಆನ್‌ ನೀಡದೇ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯ 9 ವಿಕೆಟಿಗೆ 217 ರನ್‌ ಗಳಿಸಿ ಡಿಕ್ಲೇರ್‌ ಮಾಡಿತು. ನ್ಯೂಜಿಲ್ಯಾಂಡ್‌ ಮತ್ತೂಮ್ಮೆ ಮಿಚೆಲ್‌ ಸ್ಟಾರ್ಕ್‌ ಮತ್ತು ನಥನ್‌ ಲಿಯೋನ್‌ ಆಕ್ರಮಣಕ್ಕೆ ಸಿಲುಕಿ ನಿರಂತರವಾಗಿ ವಿಕೆಟ್‌ ಉರುಳಿಸಿಕೊಳ್ಳುತ್ತ ಹೋಯಿತು. ಪತನದ ತೀವ್ರತೆ ಎಷ್ಟಿತ್ತೆಂದರೆ, ಕೊನೆಯ 5 ವಿಕೆಟ್‌ಗಳನ್ನು ಕೇವಲ 17 ರನ್‌ ಅಂತರದಲ್ಲಿ ಕಳೆದುಕೊಂಡಿತು.

ಇದು ನ್ಯೂಜಿಲ್ಯಾಂಡ್‌ ವಿರುದ್ಧ ಆಸ್ಟ್ರೇಲಿಯ ಸಾಧಿಸಿದ ರನ್‌ ಅಂತರದ 2ನೇ ಅತೀ ದೊಡ್ಡ ಗೆಲುವು. 1974ರ ಆಕ್ಲೆಂಡ್‌ ಟೆಸ್ಟ್‌ ಪಂದ್ಯವನ್ನು 297 ರನ್ನುಗಳಿಂದ ಜಯಿಸಿದ್ದು ದಾಖಲೆ.

ಸ್ಟಾರ್ಕ್‌, ಲಿಯೋನ್‌ ಆಕ್ರಮಣ
ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಉಡಾಯಿಸಿದ್ದ ಆಸೀಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ದ್ವಿತೀಯ ಸರದಿಯಲ್ಲಿ 4 ವಿಕೆಟ್‌ ಉಡಾಯಿಸಿದರು. ಇವರ ಜತೆಗಾರ ಪ್ಯಾಟ್‌ ಕಮಿನ್ಸ್‌ 2 ವಿಕೆಟ್‌ ಕಿತ್ತರು. ಬಳಿಕ ಸ್ಪಿನ್‌ ದಾಳಿಯನ್ನು ತೀವ್ರಗೊಳಿಸಿದ ನಥನ್‌ ಲಿಯೋನ್‌ 4 ವಿಕೆಟ್‌ ಬೇಟೆಯಾಡಿ ಕಿವೀಸ್‌ ಕತೆ ಮುಗಿಸಿದರು.

Advertisement

ನ್ಯೂಜಿಲ್ಯಾಂಡ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಯಾರಿಂದಲೂ ಅರ್ಧ ಶತಕ ದಾಖಲಾಗಲಿಲ್ಲ. 40 ರನ್‌ ಮಾಡಿದ ಕೀಪರ್‌ ಬ್ರಾಡ್ಲಿ ವಾಟಿÉಂಗ್‌ ಅವರದೇ ಹೆಚ್ಚಿನ ಗಳಿಕೆ. ಆಲ್‌ರೌಂಡರ್‌ ಗ್ರ್ಯಾಂಡ್‌ಹೋಮ್‌ 33 ರನ್‌ ಹೊಡೆದರು. ನಾಯಕ ಕೇನ್‌ ವಿಲಿಯಮ್ಸನ್‌ (14), ಅನುಭವಿ ರಾಸ್‌ ಟೇಲರ್‌ (22) ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾದರು. ಸರಣಿಯ ದ್ವಿತೀಯ ಪಂದ್ಯ ಡಿ. 26ರಿಂದ ಮೆಲ್ಬರ್ನ್ನಲ್ಲಿ ಆರಂಭವಾಗಲಿದ್ದು, ಇದು ಬಾಕ್ಸಿಂಗ್‌ ಡೇ ಟೆಸ್ಟ್‌ ಆಗಿದೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-416 ಮತ್ತು 9 ವಿಕೆಟಿಗೆ ಡಿಕ್ಲೇರ್‌ 217. ನ್ಯೂಜಿಲ್ಯಾಂಡ್‌-166 ಮತ್ತು 171 (ವಾಟಿÉಂಗ್‌ 40, ಗ್ರ್ಯಾಂಡ್‌ಹೋಮ್‌ 33, ನಿಕೋಲ್ಸ್‌ 21, ಸ್ಟಾರ್ಕ್‌ 45ಕ್ಕೆ 4, ಲಿಯೋನ್‌ 63ಕ್ಕೆ 4, ಕಮಿನ್ಸ್‌ 31ಕ್ಕೆ 2). ಪಂದ್ಯಶ್ರೇಷ್ಠ: ಮಿಚೆಲ್‌ ಸ್ಟಾರ್ಕ್‌.

ಪರ್ತ್‌: ಕಳಪೆ ಆಹಾರ ಮರಳಿಸಲು ಮನವಿ
ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ವೀಕ್ಷಕರಿಗೆ ವಿತರಿಸಲಾದ ಆಹಾರ ಸರಿಯಾಗಿ ಬೇಯದೇ ಇರುವ ಶಂಕೆ ವ್ಯಕ್ತವಾದ್ದರಿಂದ ಇದನ್ನು ಮರಳಿಸಲು ಮನವಿ ಮಾಡಿಕೊಂಡ ಘಟನೆ ಸಂಭವಿಸಿದೆ.

ರವಿವಾರದ 4ನೇ ದಿನದಾಟದ ಮೊದಲ ಅವಧಿಯಲ್ಲಿ ಸ್ಟೇಡಿಯಂನ ದೈತ್ಯ ಸ್ಕ್ರೀನ್‌ನಲ್ಲಿ ಇಂಥದೊಂದು ಪ್ರಕಟನೆ ಕಂಡುಬಂತು. “ನೀವಿಂದು ಸ್ಟೇಡಿಯಂನಲ್ಲಿ ಸ್ಯಾಂಡ್‌ವಿಚ್‌, ರ್ಯಾಪ್ಸ್‌ ಅಥವಾ ಸಲಾಡ್‌ಗಳನ್ನು ಖರೀದಿಸಿದ್ದೇ ಆದಲ್ಲಿ ದಯವಿಟ್ಟು ಇದನ್ನು ಕೂಡಲೇ ವಾಪಸ್‌ ಮಾಡಿ’ ಎಂಬ ಸೂಚನೆ ನೀಡಲಾಯಿತು. ಸರಿಯಾಗಿ ಬೇಯದ ಕೋಳಿ ಮಾಂಸವನ್ನು ಇದು ಹೊಂದಿರುವುದೇ ಇದಕ್ಕೆ ಕಾರಣ.

ರವಿವಾರ ತಯಾರಿಸಲಾದ ರ್ಯಾಪ್ಸ್‌ನಲ್ಲಿ ಸರಿಯಾದ ಬೇಯದ ಕೋಳಿ ಮಾಂಸ ಪತ್ತೆಯಾದದ್ದು ಸಿಬಂದಿಯೊಬ್ಬರ ಗಮನಕ್ಕೆ ಬಂದಾಗ ಈ ನಿರ್ಧಾರಕ್ಕೆ ಬರಲಾಯಿತು. “ಪ್ರಕಟನೆ ಹೊರಡಿಸುವಾಗ ಶೇ. 20ರಷ್ಟು ಚಿಕನ್‌ ರ್ಯಾಪ್ಸ್‌ ಮಾರಾಟವಾಗಿತ್ತು. ಆದರೆ ಇದನ್ನು ಹೊರಗಿನ ಆಹಾರ ಸಂಸ್ಥೆ ತಯಾರಿಸಿತ್ತು’ ಎಂಬುದಾಗಿ ಪರ್ತ್‌ ಸ್ಟೇಡಿಯಂ ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ವೀಕ್ಷಕ ವಿವರಣೆ ವೇಳೆ ಬ್ರೆಂಡನ್‌ ಜೂಲಿಯನ್‌ ಇದೇ ಪ್ರಕಟನೆ ಹೊರಡಿಸಿದಾಗ, ಅಂಗಳದಲ್ಲಿದ್ದ ನಥನ್‌ ಲಿಯೋನ್‌ ಇದಕ್ಕೊಂದು ತಮಾಷೆ ಮಾಡಿ ರಂಜಿಸಿದರು. ನ್ಯೂಜಿಲ್ಯಾಂಡ್‌ ಬ್ಯಾಟ್ಸ್‌ಮನ್‌ನತ್ತ ತಿರುಗಿದ ಅವರು, “ಇಂದು ಭೋಜನಕ್ಕೆ ಏನು ತೆಗೆದುಕೊಳ್ಳುತ್ತೀರಿ? ಚಿಕನ್‌ ಇರಲಿಕ್ಕಿಲ್ಲ ತಾನೆ?!’ ಎಂದು ಹೇಳಿದ್ದು ಸ್ಟಂಪ್‌ ಮೈಕ್‌ನಲ್ಲಿ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next