Advertisement

ನಾನು ಎನ್ ಕೌಂಟರ್ ವಿರೋಧಿ ; ಪೊಲೀಸರ ಕ್ರಮ ಒಪ್ಪತಕ್ಕದ್ದಲ್ಲ: ಒವೈಸಿ

10:02 AM Dec 07, 2019 | Hari Prasad |

ಹೈದರಾಬಾದ್: ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಬರ್ಭರವಾಗಿ ಸುಟ್ಟುಕೊಂದ ಪ್ರಕರಣದ ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಇಂದು ಎನ್ ಕೌಂಟರ್ ಒಂದರಲ್ಲಿ ಸಾಯಿಸಿರುವ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಇದರ ನಡುವೆ ಪೊಲೀಸರ ಈ ಕ್ರಮವನ್ನು ರಾಜಕೀಯ ಪಕ್ಷಗಳ ಮುಖಂಡರು, ಸಿನಿ ತಾರೆಯರು ಮತ್ತು ಸಮಾಜದ ವಿವಿಧ ವರ್ಗಗಳ ಜನರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.

Advertisement

ಇತ್ತ ಆಲ್ ಇಂಡಿಯಾ ಮಜ್ಲಿಸ್ ಇ- ಇತ್ತೆಹಾದುಲ್ ಮುಸ್ಲಿಮೀನ್ (ಎ.ಐ.ಎಂ.ಐ.ಎಂ.) ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ ಅವರು ಈ ಎನ್ ಕೌಂಟರ್ ಪ್ರಕರಣವನ್ನು ಖಂಡಿಸಿದ್ದಾರೆ. ಮತ್ತು ಈ ಘಟನೆಯ ಹಿನ್ನಲೆಯಲ್ಲಿ ಒವೈಸಿ ಅವರು ತೆಲಂಗಾಣ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ರೀತಿಯ ಎನ್ ಕೌಂಟರ್ ಘಟನೆಗಳನ್ನು ನಾನು ವೈಯಕ್ತಿಕವಾಗಿ ವಿರೋಧಿಸುತ್ತೇನೆ. ಈ ಎನ್ ಕೌಂಟರ್ ವಿಚಾರದಲ್ಲಿ ಸೂಕ್ತ ತನಿಖೆಯಾಗಬೇಕು ಎಂದೂ ಸಹ ಒವೈಸಿ ಅವರು ಆಗ್ರಹಿಸಿದ್ದಾರೆ. ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ದುರದೃಷ್ಟಕರ ಮತ್ತು ಇದು ಕಾರ್ಯನಿರತ ಪೊಲೀಸರ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಒವೈಸಿ ಅವರು ಅಭಿಪ್ರಾಯಪಟ್ಟಿದ್ದಾರೆ. ಮಾತ್ರವಲ್ಲದೇ ತಾನು ಎನ್ ಕೌಂಟರ್ ವಿರೋಧಿ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಮುಂಬೈ ದಾಳಿಯ ಸಂದರ್ಭದಲ್ಲಿ ಸೆರೆ ಸಿಕ್ಕಿದ್ದ ಉಗ್ರ ಕಸಬ್ ನನ್ನೂ ಸಹ ಸೂಕ್ತ ವಿಚಾರಣೆಯ ನಂತರವೇ ಗಲ್ಲಿಗೇರಿಸಲಾಗಿತ್ತು ಆದರೆ ಈ ಪ್ರಕರಣದಲ್ಲಿ ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಕೊಲ್ಲುವ ಜರೂರತ್ತೇನಿತ್ತು ಎಂದು ಅವರು ಸೈಬರಾಬಾದ್ ಪೊಲೀಸರ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅತ್ಯಾಚಾರ ಆರೋಪಿಗಳನ್ನು ಸೂಕ್ತ ರೀತಿಯಲ್ಲಿ ವಿಚಾರಣೆಗೆ ಒಳಪಡಿಸುವಲ್ಲಿ ವಿಫಲವಾದ ತೆಲಂಗಾಣ ಸರಕಾರವನ್ನೂ ಸಹ ಒವೈಸಿ ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next