ಕೊಡಿಯಾಲ್‌ಬೈಲ್: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಕಾರ್ಯಪ್ರವೃತ್ತರಾದಾಗ ಭವಿಷ್ಯದಲ್ಲಿ ಉತ್ತಮವಾಗಲು ಸಾಧ್ಯ. ಕ್ರಿಯಾಶೀಲತೆಗೆ ತೆರೆದುಕೊಂಡಾಗ ವ್ಯಕ್ತಿತ್ವ ನಿರ್ಮಾಣ ವಾಗುತ್ತದೆ ಎಂದು ಎಸ್‌ಡಿಎಂ ಸ್ನಾತಕೋತ್ತರ ಉದ್ಯಮಾಡಳಿತ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ| ದೇವರಾಜ್ ಕೆ. ಹೇಳಿದರು.
ಎಸ್‌ಡಿಎಂ ಕಾನೂನು ಮಹಾ ವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಮತ್ತು ಕಾನೂನು ಸಂಶೋಧನ ಕೇಂದ್ರದ ಬಿಬಿಎ-ಎಲ್‌ಎಲ್‌ಬಿ ವಿಭಾಗದ ಆಶ್ರಯ ದಲ್ಲಿ ಜರಗಿದ `ಸಿಂಟಿಲೇಟ್- 2017′ ರಾಜ್ಯ ಮಟ್ಟದ ಮ್ಯಾನೇಜ್‌ಮೆಂಟ್ ಉತ್ಸವವನ್ನು ಸೋಮವಾರ ಉದ್ಘಾಟಿಸಿದರು.
ಭಾರತೀಯ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆ. ಆದರೆ ಅದನ್ನು ಸದ್ವಿನಿಯೋಗ ಪಡಿಸಿಕೊಂಡಲ್ಲಿ ನಾವು ಜಗತ್ತಿನಲ್ಲೇ ಸೂಪರ್ ಪವರ್ ರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ. ವಿದೇಶ ಸಹಿತ ಎಲ್ಲ ಕಾರ್ಪೊರೇಟ್ ರಂಗಗಳನ್ನು ಗಮನಿಸಿ ದರೆ ಶೇ. 30ರಷ್ಟು ಮಾನವ ಸಂಪನ್ಮೂಲ ಭಾರತದ್ದಾಗಿದೆ. ಸುಧಾರಿತ ತರಬೇತಿ ಯೊಂದಿಗೆ ದೇಶೀಯ ಅಭಿವೃದ್ಧಿ ಯೆಡೆಗೆ ಯುವಕರು ಚಿತ್ತ ಹರಿಸಬೇಕು ಎಂದು ಅವರು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ| ತಾರಾನಾಥ್ ಮಾತನಾಡಿ, ಕಾನೂನು ಪದವೀಧರರಿಗೆ ಪ್ರಸ್ತುತ ಉತ್ತಮ ಅವಕಾಶಗಳಿವೆ. ಶಿಕ್ಷಣ ಸಂಸ್ಥೆ ಯಲ್ಲಿ ಸಿಗುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಭವಿಷ್ಯವನ್ನು ಸದೃಢಪಡಿಸಿ ಕೊಳ್ಳಬೇಕು ಎಂದರು.
ಶಿಕ್ಷಕ ಸಂಯೋಜಕರಾದ ರೂಪೇಶ್‌ಕುಮಾರ್, ಪ್ರೇಕ್ಷಾ ಮಯಾಡಿ, ಕಾರ್ಪೊರೇಟ್ ಕ್ಲಬ್ ಕಾರ್ಯದರ್ಶಿ ವಂದಿತಾ ಭಟ್ ಮತ್ತಿತರರು ಉಪಸ್ಥಿತರಿದ್ದರು.ಸ್ವಾತಿ ಬಾಳಿಗ ಸ್ವಾಗತಿಸಿ, ವೈಶಾಲಿ ಶೆಣೈ ವಂದಿಸಿದರು.