ಶಹಾಬಾದ: ಶಿಕ್ಷಣ ಎಂದರೆ ಮಕ್ಕಳನ್ನು ಕೇವಲ ಅಂಕಗಳಿಗೆ ಸೀಮಿತವಾಗಿ ನೀಡುವ ಶಿಕ್ಷಣವಲ್ಲ. ಕೇವಲ ಪಠ್ಯಪುಸ್ತಕದಿಂದ ಪಡೆಯುವ ಶಿಕ್ಷಣದಿಂದ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿಲ್ಲ ಎಂದು ಶಿಕ್ಷಣ ಇಲಾಖೆ ಬಿಆರ್ಪಿ ಹೊನ್ನಪ್ಪ ಬಿ.ಕೆ. ಹೇಳಿದರು.
ನಗರದ ಚವ್ಹಾಣ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎನ್.ಸಿ. ಇಂಗಿನಶೆಟ್ಟಿ ಶಾಲೆ ಹಾಗೂ ನಂದ ಗೋಕುಲ ಶಾಲೆ ಹಮ್ಮಿಕೊಂಡಿದ್ದ ಚಿಣ್ಣರ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಕಗಳಿಗೆ ಸೀಮಿತವಾಗಿ ಪಡೆಯುವ ಶಿಕ್ಷಣದಿಂದ ಅವರ ಮುಂದಿನ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಮಕ್ಕಳಿಗೆ ಮಾನವೀಯತೆ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಶಿವಪುತ್ರ ಕರಣಿಕ ಮಾತನಾಡಿ, ಆತ್ಮವಿಶ್ವಾಸದಿಂದ ನಿರಂತರ ಪ್ರಯತ್ನ ಮಾಡಿದಲ್ಲಿ ವಿದ್ಯಾರ್ಥಿಗಳು ಖಂಡಿತ ಗುರಿ ಸಾಧನೆ ಮಾಡಬಹುದು. ಸಮಯಕ್ಕೆ ತಕ್ಕಂತೆ ಬುದ್ಧಿವಂತಿಕೆ ಉಪಯೋಗಿಸಿ ತಾಳ್ಮೆಯಿಂದ ನಡೆದುಕೊಂಡರೆ ಎಲ್ಲ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.
ವಿಠuಲ ರುಕ್ಮಾಯಿ ಶಾಲೆ ಮುಖ್ಯಶಿಕ್ಷಕ ಅಪ್ಪಾರಾವ ಮಾಲೀಪಾಟೀಲ, ಕೂಡಲಸಂಗಮ ಶಾಲೆ ಮುಖ್ಯಶಿಕ್ಷಕಿ ರಾಜಶೇಖರ ದೇವರಮನಿ, ಡಾ| ಕಿಶನ ಜಾಧವ, ರವಿ ಚವ್ಹಾಣ ಶಿವಕಾಂತಮ್ಮ ಸುರೇ, ಉದಯಕುಮಾರ, ಸಂಸ್ಥೆ ಕಾರ್ಯದರ್ಶಿ ವಾಸುದೇವ ಚವ್ಹಾಣ ಇದ್ದರು.
ಚಿಣ್ಣರ ಹಬ್ಬದ ನಿಮಿತ್ತ ಹಮ್ಮಿಕೊಂಡ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಶೇಷ ಪ್ರತಿಭೆಯುಳ್ಳ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮುಖ್ಯಶಿಕ್ಷಕಿ ಸಂಗೀತಾ ದೇವರಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ಮಲಾ ಯಾದಗಿರಿ, ಅಂಬಿಕಾ ಜಿಂಗಾಡೆ ನಿರೂಪಿಸಿದರು, ಸವಿತಾ ಬೆಳಗುಂಪಿ, ಸುನೀತಾ ವಂದಿಸಿದರು.