ಶಹಾಬಾದ: ವಿಜ್ಞಾನ ಜ್ಞಾನದ ಗಣಿಯಿದ್ದಂತೆ. ವಿಜ್ಞಾನವಿಲ್ಲದೆ ಸಮಾಜವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ವೈಜ್ಞಾನಿಕ ಚಿಂತನೆ ಮಾಡಬೇಕು ಎಂದು ಭಂಕೂರ ಸಮೂಹ ಸಂಪನ್ಮೂಲ ವ್ಯಕ್ತಿ ಶಬ್ಬೀರಮೀಯಾ ಹೇಳಿದರು.
ಭಂಕೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಅವಕಾಶವಾದಿಗಳಾಗಬೇಕು. ಸಿಗುವಂತಹ ಅವಕಾಶ ಬಳಕೆ ಮಾಡಿಕೊಂಡು ಗುರಿಯತ್ತ ಸಾಗಬೇಕು. ಶ್ರದ್ಧೆಯೇ ಯಶಸ್ಸಿನ ಮೆಟ್ಟಿಲು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಚಿಂತನೆಗಳು ಹೆಚ್ಚಾಗಬೇಕು. ಮನುಷ್ಯನ ಅವಶ್ಯಕತೆಗೆ ತಕ್ಕಂತೆ ಸಂಶೋಧನೆಗಳು ನಡೆಯಬೇಕು ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಹೊನಗುಂಟಾ ಪ್ರೌಢಶಾಲೆ ಶಿಕ್ಷಕ ಎಚ್.ವೈ. ರೆಡ್ಡೇರ ಮಾತನಾಡಿ, ಶಾಲೆಗಳಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡಿದರೆ ಮಕ್ಕಳ ಪ್ರತಿಭೆಗೆ ತಕ್ಕಂತೆ ಅವರು ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ದೇಶಕ್ಕೆ ಕೀರ್ತಿ ತರುತ್ತಾರೆ. ಆದ್ದರಿಂದ ಮಕ್ಕಳ ಪ್ರತಿಭೆಯನ್ನು ಚಿಕ್ಕ ವಯಸ್ಸಿನಲ್ಲಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಲು ಶಿಕ್ಷಕರು ಮುಂದಾಗಬೇಕು ಎಂದು ಹೇಳಿದರು.
ಶಹಾಬಾದ ಸಿಆರ್ಪಿ ಶಿವಪುತ್ರ ಕರಣಿಕ್ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ಅನುಕೂಲವಾಗುತ್ತವೆ. ಪ್ರಯೋಗಗಳ ಮೂಲಕ ಮಕ್ಕಳಿಗೆ ಪರಿಣಾಮಕಾರಿಯಾಗಿ ತಿಳಿಸಲು ನೆರವಾಗುತ್ತದೆ ಎಂದು ಹೇಳಿದರು.
ಭಂಕೂರ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ವಗ್ಗನ್ ಉದ್ಘಾಟಿಸಿದರು. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕಸ್ತೂರಿಬಾಯಿ ದೇವನ್ ಅಧ್ಯಕ್ಷತೆ ವಹಿಸಿದ್ದರು. ಟಿಆರ್ಟಿ ಶಾಲೆ ಮುಖ್ಯಶಿಕ್ಷಕ ಶಿವಲಿಂಗಪ್ಪ ಹೆಬ್ಟಾಳಕರ್, ನಿವೃತ್ತ ಶಿಕ್ಷಕ ಲಿಂಗಣ್ಣ ಕೊಳ್ಳಿ ಮಾತನಾಡಿದರು.
ಶಹಾಬಾದ-ಚಿತ್ತಾಪುರ ಬಿಆರ್ಸಿ ಬಾಬು ಚಿತ್ತಾಪುರಕರ್, ಭಂಕೂರ ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಸುಮಿತ್ರಾ
ಕಟ್ಟಿಮನಿ, ಅಂಬೇಡ್ಕರ್ ಪ್ರೌಢಶಾಲೆ ಮುಖ್ಯಶಿಕ್ಷಕ ಚಂದ್ರಶೇಖರ ಗಾರಂಪಳ್ಳಿ, ಮುತ್ತಗಾ ಶಾಲೆ ಮುಖ್ಯಶಿಕ್ಷಕ ಶಂಕರ ಪವಾರ, ಮಾಲಗತ್ತಿ ಶಾಲೆ ಮುಖ್ಯಶಿಕ್ಷಕ ಭೂಷಣ ಕಟ್ಟಿಮನಿ, ದೇವಪ್ಪ ನಂದೂರಕರ್, ನಿವೃತ್ತ ಶಿಕ್ಷಕ ಡಿ.ಎಂ. ಇಟಗಿಕರ್, ವಿಜ್ಞಾನ ಶಿಕ್ಷಕಿ ರಾಜೇಶ್ವರಿ, ಕಾರ್ನಟಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ವಿವೇಕಾನಂದ ಹಿರೇಮಠ, ಎಸ್.ಐ. ರಂಜಣಗಿ ಇದ್ದರು.