ಹಿರಿಯಡ್ಕ: ಮಕ್ಕಳಿಗೆ ಪುಸ್ತಕದ ಜ್ಞಾನವಿದ್ದರೆ ಸಾಲದು, ಅದರ ಜತೆ ಪ್ರತಿಭೆಗಳನ್ನು ರೂಢಿಸಿಕೊಳ್ಳಬೇಕು.ರಜೆಯ ಸಮಯದಲ್ಲಿ ಬೇಸಗೆ ಶಿಬಿರದಲ್ಲಿ ಪಾಲ್ಗೊಂಡರೆ ಪ್ರತಿಭೆಯೊಂದಿಗೆ, ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಹೆಬ್ರಿ ವಲಯಾರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಹೇಳಿದರು.
ಇಲ್ಲಿನ ಸೂಪರ್ ಮಾರ್ಕೆಟ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಹೆಬ್ರಿ ಹಾಗೂ ಗ್ರಾಮ ಅರಣ್ಯ ಸಮಿತಿ ಹೆಬ್ರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಸಾಲು ಮರದ ತಿಮ್ಮಕ್ಕ ಟ್ರಿ ಪಾರ್ಕ್‌ನಲ್ಲಿ ಚಾಣಕ್ಯ ಬೇಸಗೆ ಶಿಬಿರದ ವಿದ್ಯಾರ್ಥಿಗಳಿಗೆ ನಡೆದ ಗ್ರಾಮೀಣ ಕಸುಬುಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಕಸುಬುಗಳಾದ ಮಡಲು ನೇಯುವುದು, ಹಿಡಿಸೂಡಿ ತಯಾರಿ, ಹೂ ಕಟ್ಟುವುದು, ಮೂಡೆ (ಕೊಟ್ಟೆಕಡುಬು) ತಯಾರಿ ಮೊದಲಾದ ತರಬೇತಿ ಪಡೆದಾಗ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿಯಾಗುವುದರೊಂದಿಗೆ, ನಮ್ಮ ಕೌಶಲವನ್ನು ವೃದ್ಧಿಸಿಕೊಳ್ಳುವುದು ಸಾಧ್ಯ ಎಂದು ತಿಳಿಸಿದರು. ಮಕ್ಕಳಲ್ಲಿ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಅಗತ್ಯವಾಗಿ ಬೆಳಸಬೇಕಾಗಿದೆ. ಅಂತಹ ಕೆಲಸವನ್ನು ಇಂತಹ ಶಿಬಿರಗಳು ಮಾಡುತ್ತಿರುವುದು ಶ್ಲಾಘನೀಯ ಎಂದು ಹೆಬ್ರಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಜಯಕರ್ ಪೂಜಾರಿ ಹೇಳಿದರು.
ಸೂಪರ್ ಮಾರ್ಕೆಟ್‌ನ ಆಡಳಿತ ನಿರ್ದೇಶಕ ವಾದಿರಾಜ್ ಶೆಟ್ಟಿ, ಆಡಳಿತ ಪಾಲುದಾರ ಆನಂದ ಶೆಟ್ಟಿ, ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಪ್ರವೀಣ್, ಗ್ರಾಮ ಅರಣ್ಯ ಸಮಿತಿಯ ಸದಸ್ಯ ರತ್ನಾಕರ್ ಆಚಾರ್ಯ , ಅರತಿ ಶೆಟ್ಟಿ ಸೀತಾನದಿ, ಪ್ರಜ್ಞಾ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.
ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಶೆಟ್ಟಿ ನಿರೂಪಿಸಿದರು. ಉದಯ ಶೆಟ್ಟಿ ಮುಟ್ಲುಪಾಡಿ ವಂದಿಸಿದರು.