ಬೆಳ್ತಂಗಡಿ: ಕಲಿತ ಶಾಲೆ- ಕಾಲೇಜುಗಳು ಹಳಸದ ಪಂಚಕಜ್ಜಾಯ ವಿದ್ದಂತೆ. ಅಲ್ಲಿ ವಿವಿಧ ನೆನಪುಗಳು ನಮಗೆ ಲಭಿಸುತ್ತವೆ. ಕಾಲೇಜಿನಲ್ಲಿ ನಡೆಸಿದ ಚಟುವಟಿಕೆ ಜೀವನದುದ್ದಕ್ಕೂ ಸಹಾಯ ಮಾಡುತ್ತವೆ. ನಾವು ಕಲಿತ ಶಿಕ್ಷಣ ಸಂಸ್ಥೆಗಳಿಂದ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಎಸ್.ಡಿ.ಎಂ. ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷೆ, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಹೇಳಿದರು.
ಅವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇಂದ್ರ ಪ್ರಸ್ಥ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಹಳೆ ವಿದ್ಯಾರ್ಥಿಗಳ 2ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್ ಮಾತನಾಡಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ದೂರದರ್ಶಿತ್ವದಿಂದ ವಿವಿಧ ರೀತಿಗಳ ಶಿಕ್ಷಣ ಸಂಸ್ಥೆಗಳು ರೂಪುಗೊಂಡವು. ಪ್ರಾಂಶುಪಾಲರಿಗೆ ಮುಕ್ತ ಅವಕಾಶಗಳನ್ನು ನೀಡಿದ್ದರಿಂದ ವಿವಿಧ ರೀತಿಗಳ ಸಾಧನೆಗಳನ್ನು ಮಾಡಲು ಸಾಧ್ಯವಾಯಿತು. ವಿದೇಶಗಳಲ್ಲಿ ವಿಭಿನ್ನ ರೀತಿಯ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿಯೂ ಕಾಲೇಜು ಸ್ವಾಯತ್ತತೆ ಸಾಧಿಸಿರುವುದರಿಂದ ಮಹತ್ತರ ಬದಲಾವಣೆ ಮಾಡಲಾಗುತ್ತಿದೆ ಎಂದರು.
ಆಟೋಟ ಸ್ಪರ್ಧೆ
ಹಳೆ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು, ಮನೋರಂಜನ ಕಾರ್ಯಕ್ರಮ ಹಾಗೂ ಸಹಭೋಜನ ಕೂಟ ನಡೆಸಲಾಯಿತು. ಹಳೆ ವಿದ್ಯಾರ್ಥಿ ನಾಗಪ್ಪ ಗೌಡ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಪ್ರಾಂಶುಪಾಲ ಪ್ರೊ| ಟಿ.ಎನ್. ಕೇಶವ್, ನಿವೃತ್ತ ಪ್ರಾಂಶುಪಾಲ ಡಾ| ಮೋಹನ ನಾರಾಯಣ, ಹಳೆ ವಿದ್ಯಾರ್ಥಿ ಸಂಘದ ಪೀತಾಂಬರ ಹೆರಾಜೆ, ಅರುಣ್ ಕುಮಾರ್, ಶ್ರೀಧರ್, ನಿವೃತ್ತ ಪ್ರಾಂಶುಪಾಲರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ| ಮಾಧವ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಂಘದ ಗುರುನಾಥ ಪ್ರಭು ಸ್ವಾಗತಿಸಿದರು. ಬಿ.ಕೆ. ಧನಂಜಯ ರಾವ್ ವಂದಿಸಿದರು.
ಸಂಸ್ಕಾರ ಸಹಕಾರಿ
ಕಾಲೇಜಿನಲ್ಲಿ ಕಲಿತ ಸಂಸ್ಕಾರ, ವಿಚಾರ ಜೀವನದುದ್ದಕ್ಕೂ ಸಹಾಯಕವಾಗುತ್ತದೆ. ತಾನು ಗ್ರಾ.ವಿದ್ಯಾರ್ಥಿಗಳ ಜತೆ ಕಲಿತಿದ್ದರಿಂದ ಗ್ರಾ.ಯೋ. ನಿಭಾಯಿಸಲು ಸಹಕಾರವಾಯಿತು.
– ಹೇಮಾವತಿ ವಿ. ಹೆಗ್ಗಡೆ
ಗೌರವಾಧ್ಯಕ್ಷರು, ಎಸ್‌ಡಿಎಂ
ಕಾಲೇಜು ಹಳೆ ವಿದ್ಯಾರ್ಥಿ ಸಂಘ.