ಜೇವರ್ಗಿ: ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.
ತಾಲೂಕಿನ ಗಂವ್ಹಾರದ ಶ್ರೀ ವಿಜಯಭಾರತಿ ಚಾರಿಟೇಬಲ್ ಟ್ರಸ್ಟ್‌ನ ಭಾಮತಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕನ್ನು ಹಸನಗೊಳಿಸುವ ವಿದ್ಯೆ ಬದುಕಿನ ದೊಡ್ಡ ಆಸ್ತಿಯಾಗಿದೆ. ವಿದ್ಯಾರ್ಥಿಗಳು ಓದಿನಲ್ಲಿ ಶ್ರದ್ಧೆ, ಆತ್ಮವಿಶ್ವಾಸ, ಕಠಿಣ ಪರಿಶ್ರಮ ಬೆಳೆಸಿಕೊಳ್ಳಬೇಕು. ಅಂದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಇದೆ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ಲಕ್ಷ್ಮೀ ಚಂದ್ರಶೇಖರ ಬಿರಾದಾರ, ಸುಜ್ಞಾನಮ್ಮ ನಾಗೇಂದ್ರಪ್ಪ ಅವರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಅರಣೋದಯ, ವಿವೇಕೋದಯ ಎನ್ನುವ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು.
ಸದ್ಗುರು ಸೋಪಾನನಾಥ ಸ್ವಾಮೀಜಿ ಸಾನ್ನಿಧ್ಯ, ಪಾಂಡುರಂಗ ಮಹಾರಾಜರು ಅಧ್ಯಕ್ಷತೆ ವಹಿಸಿದ್ದರು. ಮಹಾದೇವಪ್ಪ ದೇಸಾಯಿ, ತಾಪಂ ಸದಸ್ಯ ಗುರುಬಸಪ್ಪ ದೊಡ್ಡಮನಿ, ಶೋಭಾ ಮಲ್ಲಿಕಾರ್ಜುನ ಇಜೇರಿ, ವಿಜಯಕುಮಾರ ಪೊಲೀಸ್ ಪಾಟೀಲ, ಕಲ್ಯಾಣಕುಮಾರ ಸಂಗಾವಿ, ಲಕ್ಷ್ಮೀಕಾಂತ ಕುಲಕರ್ಣಿ ಹೋತಿನಮಡು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಪದ್ಮನಾಭ ಜೋಶಿ ಸ್ವಾಗತಿಸಿದರು, ಸಂಯೋಜಕ ಸಂಜೀವಕುಮಾರ ಜೋಶಿ ನಿರೂಪಿಸಿ, ವಂದಿಸಿದರು.