Advertisement

ವೈಯುಕ್ತಿಕ ಸ್ವಚ್ಛತೆ ನಮ್ಮ ಜವಾಬ್ದಾರಿ

09:40 PM Nov 20, 2021 | Team Udayavani |

ಆರೋಗ್ಯ ಮತ್ತು ನೈರ್ಮಲ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ನೈರ್ಮಲ್ಯ ಇರುವಲ್ಲಿ ಆರೋಗ್ಯ ಇರುತ್ತದೆ. ನೈರ್ಮಲ್ಯದ ಕೊರತೆ ಇದ್ದಲ್ಲಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

Advertisement

ಜನಸಾಮಾನ್ಯರು ಆರೋಗ್ಯವಾಗಿದ್ದಲ್ಲಿ ಮಾತ್ರ ಅವರ ಜೀವನ ಮಟ್ಟ ಉತ್ತಮವಾಗಲು ಸಾಧ್ಯ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಶೇ. 80ರಷ್ಟು ಆರೋಗ್ಯದ ಸಮಸ್ಯೆಗಳು ನೈರ್ಮಲ್ಯದ ಕೊರತೆಯಿಂದ ಉಂಟಾಗುತ್ತವೆ. ಜನಸಾಮಾನ್ಯರಲ್ಲಿ ಅರಿವಿನ ಕೊರತೆಯಿಂದಾಗಿ ನೈರ್ಮಲ್ಯ ಕೊರತೆ ಉಂಟಾಗಿ ಅನೇಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತಿದೆ.

ಸ್ವಚ್ಛತೆಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಮುಖ್ಯವಾದುದು ವೈಯುಕ್ತಿಕ ಸ್ವಚ್ಛತೆ ಅಥವಾ ನಮ್ಮ ದೇಹದ ಸ್ವಚ್ಛತೆ. ನಾವು ತಿನ್ನುವ ಆಹಾರ, ನಮ್ಮ ದೇಹವನ್ನು ಸ್ವಚ್ಛವಾಗಿಡುವ ರೀತಿ, ದೈಹಿಕ ವ್ಯಾಯಾಮ ಇವೆಲ್ಲವೂ ದೇಹದ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತವೆ. ಶುಚಿತ್ವದ ಕೊರತೆಯಿಂದಾಗಿ, ವೈಯಕ್ತಿಕ ನೈರ್ಮಲ್ಯದ ಕೊರತೆ ಮನುಷ್ಯನು ಅನೇಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತದೆ. ಉದಾಹರಣೆಗೆ, ಅತಿಸಾರ ಭೇದಿ, ಹುಳುಗಳು, ಟೈಫಾಯ್ಡ್, ಚರ್ಮದ ಸೋಂಕುಗಳು, ಹಲ್ಲಿನ ಸಮಸ್ಯೆಗಳು ಇತ್ಯಾದಿ. ವೈಯಕ್ತಿಕ ಶುಚಿತ್ವವನ್ನು ಅಭ್ಯಾಸ ಮಾಡುವುದರಿಂದ ಈ ಎಲ್ಲ ರೋಗಗಳಿಗೆ ತುತ್ತಾಗುವುದನ್ನು ನಾವು ತಡೆಗಟ್ಟಬಹುದು.

ದೇಹದ ಸ್ವಚ್ಛತೆ:

ನಮ್ಮ ದೇಹದ ಸ್ವಚ್ಛತೆಗಾಗಿ ಪ್ರತೀ ದಿನ ಸಾಬೂನು ಬಳಸಿ ಸ್ನಾನ ಮಾಡುವುದು ಅತ್ಯಗತ್ಯ. ದೇಹದಲ್ಲಿ ಸೇರಿರುವ ಬೆವರು, ಧೂಳು ಹಾಗೂ ಕೊಳಕನ್ನು ತೆಗೆಯಲು ಇದು ಸಹಾಯ ಮಾಡುತ್ತದೆ. ಕೂದಲಿನ ಆರೋಗ್ಯಕ್ಕೆ ವಾರಕ್ಕೆ ಒಂದು ಅಥವಾ ಎರಡು ಬಾರಿ ತಲೆಗೆ ಸ್ನಾನ ಮಾಡುವುದು ಒಳ್ಳೆಯದು. ಸ್ನಾನ ಮಾಡಿದ ಬಳಿಕ ಕೂದಲನ್ನು ಶುಭ್ರವಾದ ಬಟ್ಟೆಯಿಂದ ಒರೆಸಿಕೊಂಡು ಬಾಚಣಿಗೆಯ ಸಹಾಯದಿಂದ ಕೂದಲನ್ನು ಬಾಚುವುದು ಅಗತ್ಯ. ಯಾವುದೇ ಕಾರಣಕ್ಕೂ ಬೇರೆಯವರು ಉಪಯೋಗಿಸಿದ ಬಾಚಣಿಗೆಯನ್ನು ಉಪಯೋಗಿಸಬಾರದು. ಏಕೆಂದರೆ ಇದರಿಂದ ಹೊಟ್ಟು ಹಾಗೂ ಹೇನುಗಳ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಪ್ರತೀ ದಿನ ಸ್ನಾನ ಮಾಡಿದ ಬಳಿಕ ಒಗೆದ, ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು. ಇದರಿಂದ ಚರ್ಮದ ಸೋಂಕುಗಳಿಂದ ದೂರವಿರಬಹುದು. ಪ್ರತಿದಿನ ನಾವು ಧರಿಸುವ ಬಟ್ಟೆಗಳನ್ನು ಹಾಗೂ ಒಳ ಉಡುಪುಗಳನ್ನು ಬದಲಾಯಿಸುವುದು ಆರೋಗ್ಯಕರ ಅಭ್ಯಾಸ.

Advertisement

ಕಾಲುಗಳ ಆರೈಕೆ:

ಕಾಲುಗಳ ಆರೋಗ್ಯಕ್ಕಾಗಿ ಕಾಲುಗಳನ್ನು ಸ್ನಾನದ ವೇಳೆ ಶುಭ್ರವಾಗಿ ತೊಳೆದುಕೊಳ್ಳಬೇಕು. ಹಾಗೆಯೇ ಮನೆಯಿಂದ ಹೊರಗೆ ಹೋಗುವಾಗ ಪಾದರಕ್ಷೆಗಳನ್ನು ಧರಿಸಬೇಕು. ನಾವು ಧರಿಸುವ ಪಾದರಕ್ಷೆಗಳಲ್ಲಿ ಕಣ್ಣಿಗೆ ಕಾಣಿಸದ ಅನೇಕ ಕ್ರಿಮಿಕೀಟಗಳು ಹಾಗೂ ಹೊರಗಿನ ಗಲೀಜುಗಳು ಮೆತ್ತಿಕೊಂಡಿರುವುದರಿಂದ ಹೊರಗೆ ಧರಿಸಿದ ಪಾದರಕ್ಷೆಗಳನ್ನು ಮನೆಯ ಹೊರಗಡೆ ಇಡುವುದು ಒಳ್ಳೆಯ ಅಭ್ಯಾಸ.

ಇನ್ನು ಕೊಕ್ಕೆ ಹುಳುಗಳು ಮಾನವರ ಕರುಳಿನಲ್ಲಿ ಸಾಮಾನ್ಯವಾಗಿ ಇರುವ ಪರಾವಲಂಬಿ ಜೀವಿಗಳು. ಇವು ರಕ್ತಹೀನತೆಯನ್ನು, ಕ್ಷೀಣತೆಯನ್ನು ಹಾಗೂ ನಿಶ್ಯಕ್ತಿಯನ್ನು ಉಂಟುಮಾಡುತ್ತವೆ. ಬಯಲಿನಲ್ಲಿ ಮಲ ವಿಸರ್ಜನೆ ಮಾಡಿದಾಗ, ಕೊಕ್ಕೆ ಹುಳುವಿನ ಸೂಕ್ಷ್ಮ ಜೀವಿಗಳು ಮಣ್ಣಿನಲ್ಲಿ ಸೇರಿಕೊಳ್ಳುತ್ತವೆ. ಈ ಸೂಕ್ಷ್ಮಾಣುಗಳು ಪಾದರಕ್ಷೆಗಳನ್ನು ಧರಿಸದೆ ಬರಿಗಾಲಿನಿಂದ ನಡೆಯುವವರ ಕಾಲಿನ ಮುಖಾಂತರ ದೇಹವನ್ನು ಪ್ರವೇಶಿಸುತ್ತವೆ. ಹಾಗಾಗಿ ಪ್ರತಿಯೊಬ್ಬರು ವಿಶೇಷವಾಗಿ ಮಕ್ಕಳು, ಮನೆಯಿಂದ ಹೊರಗೆ ಹೋಗುವ ವೇಳೆಯಲ್ಲಿ ಪಾದರಕ್ಷೆಗಳನ್ನು ಬಳಸಬೇಕು.

ಕೈಗಳ ಆರೈಕೆ:

ನಮ್ಮ ಕೈಗಳ ಆರೋಗ್ಯಕ್ಕಾಗಿ ಕೈಗಳ ಸ್ವಚ್ಛತೆ ಆವಶ್ಯಕ. ನಾವು ಆಹಾರವನ್ನು ತಿನ್ನಲು, ವಾಹನ ಚಲಾಯಿಸಲು, ಮೂಗು ಸ್ವಚ್ಛಗೊಳಿಸಲು, ಕೆಲಸ ನಿರ್ವಹಿಸಲು, ಹಸುವಿನ ಸಗಣಿ ತೆಗೆಯುವುದು ಮುಂತಾದ ಎಲ್ಲ ಚಟುವಟಿಕೆಗಳನ್ನು ನಮ್ಮ ಕೈಗಳಿಂದ ನಿರ್ವಹಿಸುತ್ತೇವೆ. ಈ ಚಟುವಟಿಕೆಗಳ ಸಂದರ್ಭದಲ್ಲಿ ಅನೇಕ ರೋಗಗಳನ್ನು ಉಂಟುಮಾಡುವ ರೋಗಾಣುಗಳು ಉಗುರುಗಳ ಕೆಳಗೆ ಮತ್ತು ಚರ್ಮದ ಮೇಲೆ ಉಳಿಯುತ್ತವೆ. ಜತೆಗೆ ಹಗಲಿನಲ್ಲಿ ಧೂಳು ಅಥವಾ ಮಣ್ಣಿನಲ್ಲಿ ಸಾಂಕ್ರಾಮಿಕ ರೋಗವನ್ನು ಹರಡಬಲ್ಲ ಲಕ್ಷಾಂತರ ರೋಗಾಣುಗಳು ಕೈಗೆ ಹತ್ತಿಕೊಳ್ಳುತ್ತದೆ. ಉದ್ದವಾದ ಉಗುರಿನಲ್ಲಿ ಮಣ್ಣು ಕುಳಿತು ರೋಗ ಹುಟ್ಟಿಸುವ ರೋಗಾಣುಗಳು ಊಟ ಮಾಡುವಾಗ ಉಗುರಿನ ಮುಖಾಂತರ ದೇಹದೊಳಗೆ ಪ್ರವೇಶಿಸುತ್ತವೆ. ಇದರಿಂದ ಟೈಫಾಯ್ಡ, ಆಮಶಂಕೆ ಭೇದಿಗಳಂತಹ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಇದಕ್ಕಾಗಿ ಉಗುರುಗಳನ್ನು ನಿಯಮಿತವಾಗಿ ಕತ್ತರಿಸಿ ಸ್ವಚ್ಛವಾಗಿಡಬೇಕು. ಯಾವತ್ತಿಗೂ ಉಗುರನ್ನು ಬಾಯಿಯಿಂದ ಕಚ್ಚುವುದು ಅಥವಾ ಕತ್ತರಿಸುವುದನ್ನು ಮಾಡಬಾರದು. ಜತೆಗೆ ಕೈಗಳನ್ನು (ಮಣಿಕಟ್ಟಿನ ಮೇಲೆ, ಬೆರಳುಗಳು ಮತ್ತು ಉಗುರುಗಳ ನಡುವೆ) ಪ್ರತಿಯೊಂದು ಕೆಲಸ ಮುಗಿದ ಅನಂತರ ಮತ್ತು ವಿಶೇಷವಾಗಿ ಅಡುಗೆ ಮಾಡುವ ಮತ್ತು ತಿನ್ನುವ ಮೊದಲು ಸಾಬೂನಿನಿಂದ ತೊಳೆಯುವುದು ಇಂತಹ ಅನೇಕ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಅವರಿಗಾಗಿ ಆಹಾರ ತಯಾರಿಸುವ ಮೊದಲು ಕೈಗಳನ್ನು, ಆಹಾರ ತಯಾರಿಸುವ ಪಾತ್ರೆಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಮಕ್ಕಳಿಗೂ ಆಹಾರ ಸೇವಿಸುವ ಮೊದಲು, ಶೌಚಾಲಯದ ಬಳಕೆಯ ಅನಂತರ ಕೈಗಳನ್ನು ತೊಳೆದುಕೊಳ್ಳುವುದನ್ನು ಅಭ್ಯಾಸ ಮಾಡಿಸಬೇಕು.

ಕಣ್ಣು ಮತ್ತು ಕಿವಿಗಳ ಆರೈಕೆ:

ನಾವು ಹೊರಗೆ ಹೋದಾಗ ಕಣ್ಣುಗಳಲ್ಲಿ ಧೂಳಿನ ಕಣಗಳು ಸಂಗ್ರಹವಾಗುತ್ತವೆ. ಕಣ್ಣುಗಳನ್ನು ಸರಿಯಾಗಿ ಸ್ವಚ್ಛಚ್ಛಗೊಳಿಸದಿದ್ದಲ್ಲಿ ದೃಷ್ಟಿಯ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತೀ ದಿನ ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು. ಕಿವಿಗಳಲ್ಲಿ ಮೇಣವು ರೂಪುಗೊಳ್ಳುತ್ತದೆ ಮತ್ತು ಇದು ನೋವನ್ನು ಉಂಟುಮಾಡುತ್ತದೆ. ಆದ್ದರಿಂದ ಕಿವಿಗಳನ್ನು ಸ್ವಚ್ಛಗೊಳಿಸಲು ಯಾವುದೇ ಚೂಪಾದ, ಗಟ್ಟಿಯ ವಸ್ತುಗಳನ್ನು ಬಳಸಬಾರದು. ಇಂತಹ ವಸ್ತುಗಳನ್ನು ಬಳಸುವುದರಿಂದ ಕಿವಿಗೆ, ಕಿವಿಯ ಒಳಗಿನ ತಮಟೆಗೆ ಹಾನಿಯುಂಟಾಗಿ ಕಿವಿ ಸೋರುವುದು ಅಥವಾ ಶಾಶ್ವತ ಕಿವುಡುತನ ಉಂಟಾಗುವ ಸಾಧ್ಯತೆ ಇರುತ್ತದೆ.

ಸ್ನಾನ ಮಾಡುವ ವೇಳೆ ಕಿವಿಯ ಒಳಗೆ ನೀರು, ಸಾಬೂನು ಸೇರಿಕೊಳ್ಳುವ ಸಾಧ್ಯತೆ ಇರುವುದರಿಂದ ಸ್ನಾನ ಆದ ಬಳಿಕ ಕಿವಿಗಳನ್ನು ಬಟ್ಟೆಯಿಂದ ಸ್ವಚ್ಛಗೊಳಿಸಬೇಕು.

ಚರ್ಮದ ಆರೈಕೆ:

ಚರ್ಮವು ನಮ್ಮ ಇಡೀ ದೇಹವನ್ನು ಆವರಿಸಿಕೊಂಡಿದೆ. ಆದ್ದರಿಂದ ಚರ್ಮದ ಆರೈಕೆ ಅತಿ ಮುಖ್ಯ. ಚರ್ಮವು ದೇಹದ ಅಂಗಗಳನ್ನು ರಕ್ಷಿಸುತ್ತದೆ ಮತ್ತು ದೇಹದ ಉಷ್ಣತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಚರ್ಮವು ಬೆವರಿನ ಮೂಲಕ ದೇಹದ ಕೊಳೆಯನ್ನು ಹೊರಗೆ ತರಲು ಸಹಾಯ ಮಾಡುತ್ತದೆ. ಚರ್ಮವು ಸ್ವಚ್ಛವಾಗದೇ ಇದ್ದಲ್ಲಿ ಬೆವರು ಗ್ರಂಥಿಗಳು ಮುಚ್ಚಲ್ಪಡುತ್ತವೆ. ಇದರ ಪರಿಣಾಮವಾಗಿ ಚರ್ಮದಲ್ಲಿ ಕಜ್ಜಿ, ಇಸುಬುವಿನಂತಹ ರೋಗಗಳು ಉಂಟಾಗುತ್ತವೆ. ಇವು ಚರ್ಮದಲ್ಲಿ ತುರಿಕೆ ಮತ್ತು ಉರಿ ಉಂಟು ಮಾಡುತ್ತವೆ. ಸ್ವಚ್ಛಗೊಳಿಸದೆ ಇರುವ ಇರುವ ಚರ್ಮದಲ್ಲಿ ಹುಣ್ಣುಗಳು ಮತ್ತು ಮೊಡವೆಗಳು ಆಗುತ್ತವೆ. ಇಂತಹ ಚರ್ಮ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಬಹಳ ಬೇಗ ಬಟ್ಟೆ ಮತ್ತು ಹಾಸಿಗೆಯಿಂದ ಹರಡುತ್ತವೆ. ಆದ್ದರಿಂದ ಚರ್ಮವನ್ನು ಸ್ವಚ್ಛವಾಗಿಡಲು ಪ್ರತೀ ದಿನ ಸಾಬೂನು ಮತ್ತು ಶುದ್ಧ ನೀರನ್ನು ಬಳಸಿ ಸ್ನಾನ ಮಾಡಬೇಕು.

ಬಾಯಿಯ ಆರೈಕೆ:

ಬಾಯಿ ನಮ್ಮ ದೇಹದ ಮತ್ತೂಂದು ಪ್ರಮುಖ ಅಂಗ. ಬಾಯಿಯನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸದೇ ಇದ್ದಲ್ಲಿ ನಮ್ಮ ಬಾಯಿಯಿಂದ ಹೊರ ಬರುವ ದುರ್ವಾಸನೆಯಿಂದಾಗಿ ನಾವು ಮುಜುಗರಕ್ಕೆ ಒಳಗಾಗುವ ಸಾದ್ಯತೆ ಹೆಚ್ಚು. ಹಲ್ಲುಗಳ ಮಧ್ಯದಲ್ಲಿ ನಾವು ಸೇವಿಸಿದ ಆಹಾರದ ಸಣ್ಣ ಸಣ್ಣ ಚೂರುಗಳು ಶೇಖರಣೆಯಾಗಿ ವಸಡು ಹಾಗೂ ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗಬಹುದು. ನಾಲಿಗೆ ಮತ್ತು ಹಲ್ಲುಗಳ ನಡುವೆ ಶೇಖರಣೆಯಾಗಿರುವ ಹಳಸಲು ಆಹಾರ ಮತ್ತು ಸೂಕ್ಷ್ಮಾಣುಗಳು, ಬಾಯಿಯಿಂದ ದುರ್ವಾಸನೆ ಬರುವ ಹಾಗೆ ಮಾಡುತ್ತವೆ. ಧೂಮಪಾನ ಹಾಗೂ ತಂಬಾಕು ಸೇವನೆ ಕೂಡ ಬಾಯಿಯ ದುರ್ವಾಸನೆ ಹಾಗೂ ಹಲ್ಲುಗಳ ಕೆಡುವಿಕೆಗೆ ಕಾರಣವಾಗುತ್ತದೆ.

ಇದನ್ನು ತಡೆಗಟ್ಟಲು ಮೃದುವಾದ ಬ್ರಶ್‌ ಹಾಗೂ ಟೂತ್‌ ಪೇಸ್ಟ್‌ನಿಂದ 2ರಿಂದ 4 ನಿಮಿಷಗಳ ಕಾಲ ದಿನಕ್ಕೆರಡು ಬಾರಿ ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು. ಪ್ರತೀ ಬಾರಿ ಊಟ ಮಾಡಿದ ಮೇಲೆ, ಸಿಹಿ ಪದಾರ್ಥಗಳ ಸೇವನೆಯಾದ ಅನಂತರ, ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ ಬ್ರಶ್‌ ಮೂಲಕ ತೊಳೆಯಬೇಕು. ಇದು ಆಹಾರದ ಕಣಗಳು ಹಲ್ಲಿನ ನಡುವೆ ಉಳಿಯುವುದನ್ನು ತಡೆಯುತ್ತದೆ. ನಾಲಿಗೆ ಹಾಗು ವಸಡುಗಳನ್ನು ಬ್ರಶ್‌ ಮಾಡುವುದರಿಂದ ಬಾಯಿ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 2ರಿಂದ 3 ತಿಂಗಳಿಗೊಮ್ಮೆ ನಾವು ಬಳಸುವ ಹಲ್ಲುಜ್ಜುವ ಬ್ರಶ್‌ ಬದಲಾಯಿಸುವುದು ಆವಶ್ಯಕ. ಜತೆಗೆ ಪ್ರತೀ ದಿನ ನಾವು ಸೇವಿಸುವ ಆಹಾರದಲ್ಲಿ ಹೆಚ್ಚಾಗಿ ಹಣ್ಣು ಮತ್ತು ತರಕಾರಿಯನ್ನು ಸೇವಿಸಬೇಕು. ಕ್ಯಾಲ್ಸಿಯಂ ಹೆಚ್ಚಾಗಿರುವ ಪೌಷ್ಟಿಕಯುಕ್ತ ಆಹಾರ ಸೇವಿಸಬೇಕು. ಸಿಹಿತಿಂಡಿಗಳು, ಚಾಕೊಲೇಟ್‌ಗಳು, ಐಸ್‌ ಕ್ರೀಮ್‌ಗಳು ಮತ್ತು ಕೇಕ್‌ಗಳಂತಹ ಆಹಾರ ಪದಾರ್ಥಗಳನ್ನು ಕಡಿಮೆ ಸೇವಿಸಬೇಕು. ಯಾವುದೇ ರೀತಿಯ ಹಲ್ಲಿನ ಸಮಸ್ಯೆ ಉಂಟಾದರೆ ಹಾಗೂ ಹಲ್ಲುಗಳನ್ನು ನಿಯಮಿತವಾಗಿ ಸ್ವತ್ಛಚ್ಛಗೊಳಿಸಲು ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಭೇಟಿಮಾಡಬೇಕು.

ಮೂತ್ರ, ಮಲವಿಸರ್ಜನೆಯ ಸಮಯದಲ್ಲಿ ಸ್ವಚ್ಛತೆ:

ಮಾನವನ ಮಲವು ಕೆಲವು ಹಾನಿಕಾರಕ ಸೂಕ್ಷ್ಮ ಜೀವಿಗಳಿಂದ ಕೂಡಿದ್ದು, ಇದರ ಸಂಪರ್ಕಕ್ಕೆ ತುತ್ತಾದಲ್ಲಿ ರೋಗಗಳು ಹರಡಬಲ್ಲದು. ಶೌಚಾಲಯವನ್ನು ಬಳಸಿದ ಬಳಿಕ ಕೈಗಳನ್ನು ನೀರು ಹಾಗೂ ಸಾಬೂನು ಬಳಸಿ ಚೆನ್ನಾಗಿ ತೊಳೆದುಕೊಳ್ಳಬೇಕು. ಮಲ ಮತ್ತು ಮೂತ್ರ ವಿಸರ್ಜಿಸಿದ ಅನಂತರ ಆ ಭಾಗಗಳನ್ನು ಶುದ್ಧ ನೀರಿನಿಂದ ಮುಂಭಾಗದಿಂದ ಹಿಂದಕ್ಕೆ ತೊಳೆಯಬೇಕು. ಶೌಚಾಲಯಗಳು, ಸ್ನಾನಗೃಹಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ.

ಬಯಲಿನಲ್ಲಿ ಮಲ, ಮೂತ್ರ ವಿಸರ್ಜಿಸುವುದನ್ನು ತಪ್ಪಿಸಬೇಕು.ನಮ್ಮ ಉತ್ತಮ ಆರೋಗ್ಯಕ್ಕಾಗಿ ವೈಯುಕ್ತಿಕ ಸ್ವಚ್ಛತೆ ಎಂಬುದು ನಮ್ಮೆಲ್ಲರ ಜವಾಬ್ದಾರಿ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಸ್ವತ್ಛತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು.

******

ರಾಘವೇಂದ್ರ ಭಟ್‌ ಎಂ.

ಆರೋಗ್ಯ ಸಹಾಯಕರು, ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ, ಮಣಿಪಾಲ

ಡಾ| ಚೈತ್ರಾ ಆರ್‌. ರಾವ್‌

ಸಹ ಪ್ರಾಧ್ಯಾಪಕರು, ಸಮುದಾಯ ವೈದ್ಯಕೀಯ ವಿಭಾಗ ಮತ್ತು ಕೋ-ಆರ್ಡಿನೇಟರ್‌, ಸೆಂಟರ್‌ ಫಾರ್‌ ಟ್ರಾವೆಲ್‌ ಮೆಡಿಸಿನ್‌, ಕೆಎಂಸಿ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next