ಚೆನ್ನೈ: ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ದುಬೈನಿಂದ ಆಗಮಿಸಿದ್ದ ವ್ಯಕ್ತಿಯನ್ನು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ (ಜೂನ್ 10) ಬಂಧಿಸಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ದೆಹಲಿ ಗಲಭೆ: ಇಬ್ಬರು ಕೊಲೆ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ಕೋರ್ಟ್
ದುಬೈನಿಂದ ಆಗಮಿಸಿದ್ದ ಕನ್ಯಾಕುಮಾರಿ ನಿವಾಸಿ 26ವರ್ಷದ ಕಬಾರಿ ಸಾಮಿನೋ ಜೇಸಯ್ಯ ಎಂಬ ಯುವಕನನ್ನು ಹೊರ ಹೋಗುವ ಗೇಟಿನ ಬಳಿ ಸಂಶಯದ ಮೇಲೆ ತಪಾಸಣೆ ನಡೆಸಿದಾಗ ಚಿನ್ನಕಳ್ಳಸಾಗಣೆ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 1.42 ಕೆಜಿ ತೂಕದ ಒಂಬತ್ತು ಪ್ಯಾಕೆಟ್ ಚಿನ್ನದ ಪೇಸ್ಟ್ ಸೊಂಟದ ಬೆಲ್ಟ್ ಮತ್ತು ಜೀನ್ಸ್ ಪ್ಯಾಂಟಿನ ಕೆಳಭಾಗದಲ್ಲಿ ಕಟ್ಟಿ ಹೊಲಿಯಲಾಗಿದ್ದು, ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಶುದ್ಧ 24 ಕ್ಯಾರೆಟ್ ನ 63 ಲಕ್ಷ ಮೌಲ್ಯದ 1.25 ಕೆಜಿ ಚಿನ್ನವನ್ನು ಕಸ್ಟಮ್ಸ್ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ವಶಕ್ಕೆ ಪಡೆದಿರುವ ಜೇಸಯ್ಯ ವಿರುದ್ಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಚಿನ್ನ ಸಾಗಣೆ ಉದ್ದೇಶ, ಇದನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಇತ್ಯಾದಿ ವಿಷಯಗಳ ಕುರಿತು ಮಾಹಿತಿ ಪಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.