Advertisement

ಪಕ್ಷ ಸಂಘಟನೆಗೆ ನಿರಂತರ ಪ‹ವಾಸ ಮಾಡಲು ಸೂಚನೆ

07:10 AM Sep 24, 2017 | |

ಬೆಂಗಳೂರು: “ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆಗಾಗಿ ಜಿಲ್ಲಾವಾರು ಉಸ್ತುವಾರಿ ತಂಡಗಳು ಕ್ಷೇತ್ರವಾರು ಪ್ರವಾಸದ ವರದಿ ನೀಡುವಂತೆ’ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಸೂಚನೆ ನೀಡಿದ್ದಾರೆ.

Advertisement

ಜಿಲ್ಲಾವಾರು ಪ್ರವಾಸಕ್ಕಾಗಿ ರಚಿಸಲಾಗಿರುವ 9 ತಂಡಗಳು, ನಿರಂತರ ಪ್ರವಾಸ ಮಾಡಿ ಯಾವ್ಯಾವ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಅಲ್ಲಿನ ಪಕ್ಷದ ಸ್ಥಿತಿಗತಿ, ಕಾಂಗ್ರೆಸ್‌ ಹಾಗೂ ಬಿಜೆಪಿಯ ಶಕ್ತಿ ಹಾಗೂ ಆ ಪಕ್ಷಗಳ ಸಂಭವನೀಯ ಅಭ್ಯರ್ಥಿಗಳು, ಚುನಾವಣಾ ಲೆಕ್ಕಾಚಾರ ಕುರಿತು ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ. ಶನಿವಾರ ನಡೆದ ಕೋರ್‌ಕಮಿಟಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು, ಜಿಲ್ಲಾ ಉಸ್ತುವಾರಿ ವಹಿಸಿ ಕೊಂಡಿರುವವರು ಸುಮ್ಮನೆ ಕೂರುವಂತಿಲ್ಲ. ನಿತ್ಯ ಪ್ರವಾಸ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ, ಬಿ.ಎಂ.ಫ‌ರೂಕ್‌, ಮಾಜಿ ಸಚಿವರಾದ ಎಚ್‌. ಡಿ.ರೇವಣ್ಣ, ಜಿ.ಟಿ.ದೇವೇಗೌಡ, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ಶಾಸಕ ಗೋಪಾಲಯ್ಯ ಉಪಸ್ಥಿತರಿದ್ದರು.

ಉ.ಕ. ಭಾಗದಲ್ಲಿ ಎಚ್‌ಡಿಕೆ ಸ್ಪರ್ಧೆ: ಸಮಯ ಬಂದಾಗ ನೋಡೋಣ
ಬೆಂಗಳೂರು: “ಉತ್ತರ ಕರ್ನಾಟಕ ಭಾಗದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧೆ ವಿಚಾರದ ಬಗ್ಗೆ ಸಮಯ ಬಂದಾಗ ನೋಡೋಣ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಶನಿವಾರ ಕೋರ್‌ ಕಮಿಟಿ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಸದ್ಯಕ್ಕೆ ಕುಮಾರಸ್ವಾಮಿಗೆ ರಾಮನಗರದಲ್ಲಿ ಮೊದಲ ಸ್ಥಾನ ಇದೆ. ಸ್ಪರ್ಧೆ ವಿಚಾರದಲ್ಲಿ ಪೈಪೋಟಿ ಮಾಡುವುದು ಸರಿಯಲ್ಲ’ ಎಂದು ಹೇಳಿದರು. ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಹಲವು ಅನುಮಾನಗಳಿವೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ತೀರ್ಪು ಪ್ರತಿ ನನ್ನ ಕೈ ತಲುಪಿಲ್ಲ. ಅದನ್ನು ನೋಡಿದ ಮೇಲೆ ಮಾತನಾಡುತ್ತೇನೆ ಎಂದು ದೇವೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next