ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಪರಿಶ್ರಮ ಮತ್ತು ಆಸಕ್ತಿ ಇಲ್ಲದಿದ್ದರೇ ಸಾಧನೆ ಶೂನ್ಯವಾಗುತ್ತದೆ. ಇವೆರಡೂ ಇದ್ದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ನಗರದ ಹೊರ ವಲಯದಲ್ಲಿರುವ ಎಸ್‌ಜೆಸಿಐಟಿ ಕಾಲೇಜಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕಾದರೆ ಕಠಿಣ ಪರಿಶ್ರಮ ಬಹಳ ಮುಖ್ಯ.
ಪರಿಶ್ರಮದಿಂದ ಯಶಸ್ಸು: ಶೈಕ್ಷಣಿಕವಾಗಿ ಸಾಧನೆ ಮಾಡಲು ಅಥವಾ ಜ್ಞಾನ ಸಂಪಾದನೆಗೆ ಬಡವ ಶ್ರೀ ಮಂತ ಎಂಬ ಭೇದವಿಲ್ಲ. ವಿಜ್ಞಾನ ಕ್ಷೇತ್ರದಲ್ಲಿ ಐನ್‌ಸ್ಟೈನ್ ಹೊಸ ಆಲೋಚನೆಗಳನ್ನು ಬೆಳೆಸಿಕೊಳ್ಳುವ ಮೂಲಕ ಸತತ ಪರಿಶ್ರಮದಿಂದ ಯಶಸ್ಸು ಕಂಡನು. ಅದೇ ಮಾದರಿಯಲ್ಲಿ ವಿದ್ಯಾರ್ಥಿಗಳು ತಮ್ಮ ಆಂತರಿಕ ಶಕ್ತಿ ಹೆಚ್ಚಿಸಿಕೊಳ್ಳುವ ಮೂಲಕ ಜೀವನದ ಗುರಿ ಸಾಧಿಸಬೇಕು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಮೂಲಕ ಹೊಸ ಆವಿಷ್ಕಾರ, ಆಲೋಚಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕೆಂದರು.
ವಿಭಿನ್ನ ಆಲೋಚನೆ ಇರಲಿ: ಬೆಂಗಳೂರು ಇಂಡಿಯನ್ ಇನ್ಸ್‌ಟ್ಯೂಟ್ ಆಫ್ ಸೈನ್ಸ್ ಏರೋಸ್ಪೇಸ್ ಎಂಜಿಯರಿಂಗ್‌ನ ಪ್ರೊ.ಡಾ.ಕೆ.ಪಿ.ಜೆ.ರೆಡ್ಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಾವು ಎಷ್ಟು ಓದಿದ್ದೇವೆ ಎಂಬುದು ಮುಖ್ಯವಲ್ಲ. ವಿದ್ಯಾರ್ಥಿಗಳು ಪುಸ್ತಕಕ್ಕೆ ಸೀಮಿತವಾಗದೇ ದೇಶ ಮತ್ತು ಸಮಾಜದ ಒಳಿತಿಗೆ ವಿಭಿನ್ನ ಯೋಚನೆಗಳನ್ನು ಕೈಗೊಂಡು ದೇಶಕ್ಕೆ ಆಸ್ತಿ ಆಗಬೇಕು ಎಂದರು. ತಂತ್ರಜ್ಞಾನ ಯುಗದಲ್ಲಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಕಲಿಕೆ ವಿಚಾರದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಳ್ಳುವ ಮೂಲಕ ಗುರಿ ಸಾಧಿಸಬೇಕು. ಮಹನೀಯರ ಆದರ್ಶಗಳನ್ನು ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಂದನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಆರ್.ಲತಾ, ಉಪ ವಿಭಾಗಾಧಿಕಾರಿ ರಘುನಂದನ್, ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ಬಿಜಿಎಸ್ ಸಂಶೋಧನಾ ಕೇಂದ್ರ ನಿರ್ದೇಶಕ ಡಾ.ಮುನಿಕೆಂಚೇಗೌಡ, ವೈದ್ಯ ಡಾ.ಶ್ರೀನಿವಾಸ್, ಎಸ್‌ಜೆಸಿಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಂ.ರವಿಕುಮಾರ್ ಉಪಸ್ಥಿತರಿದ್ದರು.
ಬೆಂಗಳೂರು ಟಾಟಾ ಕನ್ಸಲ್‌ಟೆನ್ಸಿ ಸರ್ವಿಸ್‌ನ ಆರ್‌ಎಂಜಿ ಮುಖ್ಯಸ್ಥ ಇ.ಎಸ್.ಚಕ್ರವರ್ತಿ ಮಾತನಾಡಿ, ಸಾಧನೆ ಮಾಡುವವರಿಗೆ ಉನ್ನತ ಶಿಕ್ಷಣ ಬೇಕಾಗಿಲ್ಲ, ಏಕೆಂದರೆ ಪ್ರತಿಯೊಬ್ಬರಲ್ಲೂ ಒಂದೊಂದು ಆವಿಷ್ಕಾರದ ಮನೋಭಾವವಿರುತ್ತದೆ. ಅದನ್ನು ಹೊರ ತೆಗೆಯುವ ಹಾಗೂ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಜಗತ್ತಿನ ವಿವಿಧ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಬಹಳ ಬುದ್ಧಿವಂತ ಜನರಿದ್ದಾರೆ. ಅದನ್ನು ನಾವು ಸದುಪಯೋಗಪಡಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.