ಉಡುಪಿ: ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ಪರಿಶುದ್ಧಿಗೆ ಬಹಳ ಮಹತ್ವ ನೀಡುವ ಉದ್ದೇಶದಿಂದ ಗುಹೆ, ಪರ್ವತಗಳಿಗೆ ತೆರಳಿ ತಪಸ್ಸನ್ನಾಚರಿಸುತ್ತಿದ್ದರು. ದೇವಸ್ಥಾನದ ಪಾವಿತ್ರ್ಯಕ್ಕೆ ದೇವಸ್ಥಾನದ ಒಳಗೆ ಮತ್ತು ಹೊರಗೆ ಸ್ವತ್ಛತೆ ಕಾಪಾಡುವುದು ಮುಖ್ಯ. ಬ್ರಹ್ಮಕಲಶೋತ್ಸವ ಸಂದರ್ಭ ನಡೆಯಬೇಕಾದ ಎಲ್ಲ ಧಾರ್ಮಿಕ ಪ್ರಕ್ರಿಯೆಗಳು ಪರಿಶುದ್ಧಿ ಮತ್ತು ಸ್ವತ್ಛತೆಯಿಂದ ನಡೆದರೆ ಅಲ್ಲಿ ದೇವರ ಸಾನ್ನಿಧ್ಯ ಇರುತ್ತದೆ ಎಂದು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು.
ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇಗುಲದಲ್ಲಿ ಬ್ರಹ್ಮಕಲಶೋತ್ಸವ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಪಾದರು ಆಶೀರ್ವಚನ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿ| ಹರಿದಾಸ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿ| ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಪೇಜಾವರ ಮಠದ ದಿವಾನ ಎಂ. ರಘುರಾಮ ಆಚಾರ್ಯ, ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್, ಮಾರ್ಗದರ್ಶಕರಾದ ವಿ| ಮಧುಸೂದನ ತಂತ್ರಿ, ಸುಬ್ರಹ್ಮಣ್ಯ ಅವಧಾನಿ, ಸಮಿತಿ ಸಂಘಟನ ಕಾರ್ಯದರ್ಶಿ ಸದಾನಂದ ಪ್ರಭು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಶ್ರೀಕಾಂತ್ ನಾಯಕ್ ಅಲೆವೂರು ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ್ ನಾಯಕ್ ನಿರೂಪಿಸಿ, ವಂದಿಸಿದರು.
ಇಂದು ಜೀವಕುಂಭಾಭಿಷೇಕ
ಪುಣ್ಯಾಹವಾಚನ, ಗಣಪತಿ ಯಾಗ, ಬೆಳಗ್ಗೆ 9.50ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾಗಣಪತಿ ದೇವರ ಜೀವಕುಂಭಾಭಿಷೇಕ, ಕಲಶಾಭಿಷೇಕ, ಶ್ರೀ ಶಾಸ್ತಾರ, ಶ್ರೀ ನಾಗದೇವರು, ಶ್ರೀ ಭೂತರಾಜರು, ಶ್ರೀ ರಕ್ತೆಶ್ವರೀ ದೇವರ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 5ರಿಂದ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಂಗ ಅಂಕುರಾರೋಪಣ, ದುರ್ಗಾನಮಸ್ಕಾರ ಪೂಜೆ, ಅಸ್ತ್ರಮಂತ್ರ ಹೋಮ, ರಾತ್ರಿ ಪೂಜೆ ನಡೆಯಲಿದೆ. ಸಂಜೆ 5ರಿಂದ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕಾವ್ಯಶ್ರೀ ಆಜೇರು ಮತ್ತು ಬಳಗದವರಿಂದ ಯಕ್ಷ-ಗಾನ-ವೈಭವ ನಡೆಯಲಿದೆ.