Advertisement

ಹಣಕಾಸು ಆಯೋಗದ ಅನುದಾನ ಬಳಕೆಗೆ ಅನುಮತಿ

10:06 AM Apr 25, 2020 | Sriram |

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಮಹಾಮಾರಿ ಕೋವಿಡ್-19 ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟಲು ಗ್ರಾಮ ಪಂಚಾಯತ್‌ಗಳಿಗೆ 14ನೇ ಹಣಕಾಸು ಆಯೋಗದ ಅನುದಾನ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

Advertisement

ಗ್ರಾ. ಪಂ. ಗಳಿಗೆ 14ನೇ ಹಣಕಾಸು ಆಯೋಗದ 2019-20ನೇ ಸಾಲಿನ ಸಾಮಾನ್ಯ ಮೂಲ ಅನುದಾನವನ್ನು ಕೋವಿಡ್-19 ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಭಾಗವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಒದಗಿಸಲು ಅದರಲ್ಲೂ ಮುಖ್ಯವಾಗಿ ನೈರ್ಮಲ್ಯ ವ್ಯವಸ್ಥೆಯನ್ನು ರೂಪಿಸಲು ಆದ್ಯತೆಯ ಮೇರೆಗೆ ವೆಚ್ಚ ಮಾಡುವುದಕ್ಕಾಗಿ ಅವಕಾಶ ಕಲ್ಪಿಸಲಾಗಿದೆ.

ರಾಜ್ಯದ 6,021 ಗ್ರಾ.ಪಂ.ಗಳಿಗೆ 14ನೇ ಹಣಕಾಸು ಆಯೋಗದ 2019-20ನೇ ಸಾಲಿನ ಸಾಮಾನ್ಯ ಮೂಲ ಅನುದಾನ 1,251 ಕೋ.ರೂ. ಗಳಂತೆ 2019ರ ಜೂ.13 ಮತ್ತು ನ.4ರಂದು ಎರಡು ಕಂತುಗಳಲ್ಲಿ ಸುಮಾರು 2,500 ಕೋ.ರೂ.ಗಳನ್ನು ಕೇಂದ್ರ ಸರಕಾರ ಈಗಾಗಲೇ ಬಿಡುಗಡೆ ಮಾಡಿದೆ. ಈ ಅನುದಾನವನ್ನು ಕೋವಿಡ್‌-19 ತಡೆಗಟ್ಟಲು ಆದ್ಯತೆಯ ಮೇಲೆ ಬಳಸಿಕೊಳ್ಳುವಂತೆ ಸೂಚಿಸಿ ಗ್ರಾಮೀಣಾಭಿವೃದ್ಧಿ ಇಲಾಖೆ ಎಲ್ಲ ಗ್ರಾ.ಪಂ.ಗಳಿಗೆ ಸುತ್ತೋಲೆ ಹೊರಡಿಸಿದೆ.

ಈ ಅನುದಾನ ವೆಚ್ಚ ಮಾಡುವ ಅವಧಿಯನ್ನು 2021ರ ಮಾ.31ರ ವರೆಗೆ ವಿಸ್ತರಿಸಲಾಗಿದೆ. ಜತೆಗೆ ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ತಡೆಗಟ್ಟಲು ಅವಶ್ಯವಿರುವ ತುರ್ತು ಕ್ರಮಗಳನ್ನು ಪ್ರಥಮ ಆದ್ಯತೆ ಮೇಲೆ ಕೈಗೊಳ್ಳುವಂತೆ ಅನುಕೂಲವಾಗಲು 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನಕ್ಕೆ ಈಗಾಗಲೇ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದರೆ ಅವುಗಳನ್ನು ಬದಲಾಯಿಸಿ ಮಾರ್ಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.

ಅನುದಾನ ಬಳಕೆ ಹೇಗೆ?
– ರಸ್ತೆ ಮತ್ತು ರಸ್ತೆ ಬದಿಯ ತ್ಯಾಜ್ಯಗಳನ್ನು ಹೊರಗಡೆ ಸಾಗಿಸುವುದು.
– ರಸ್ತೆ ಮತ್ತು ಚರಂಡಿಗಳ ಮೇಲೆ ಕ್ರಿಮಿನಾಶಕ ಹಾಗೂ ವೈರಾಣು ನಾಶಕಗಳನ್ನು ಸಿಂಪಡಿಸುವುದು.
– ಶಾಲಾ ಕಾಲೇಜುಗಳ ಕಟ್ಟಡ, ಅಂಗನವಾಡಿ ಕೇಂದ್ರ, ಗ್ರಂಥಾಲಯ, ಸಮುದಾಯ ಭವನ, ಪಂಚಾಯತ್‌ ಕಚೇರಿ, ಮಾರುಕಟ್ಟೆ, ಅಂಚೆ ಕಚೇರಿ ಮೊದಲಾದೆಡೆ ಕ್ರಿಮಿನಾಶಕ ಸಿಂಪಡಿಸುವುದು.
– ಸ್ವತ್ಛತೆಯನ್ನು ನಿರ್ವಹಿಸುವ ಸ್ವತ್ಛತಾಗಾರರಿಗೆ ಮಾಸ್ಕ್, ಕನ್ನಡಕ, ಗನ್‌ಬೂಟ್‌ ಮತ್ತು ಪ್ರತಿ ರಸ್ತೆಗಳಲ್ಲಿ ಕಸ ಸಂಗ್ರಹಿಸಲು ಡಸ್ಟ್‌ಬಿನ್‌ಗಳನ್ನು ಒದಗಿಸುವುದು.
– ಗ್ರಾ.ಪಂ. ವ್ಯಾಪ್ತಿಯಲ್ಲಿರು ವ ಕ್ವಾರಂಟೈನ್‌ ಮತ್ತು ಐಸೊಲೇಶನ್‌ ಕೇಂದ್ರಗಳ ನಿರ್ವಹಣೆ.
– ಕೋವಿಡ್-19 ವೈರಸ್‌ ಸೋಂಕು ಹರಡುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
– ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಬಡ ಜನರ ಸಹಿತ ಅವಶ್ಯವಿರುವವರಿಗೆ ಆಹಾರ ಪದಾರ್ಥ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು.

Advertisement

ಸೋಂಕು ಹರಡುವುದನ್ನು ತಡೆಯುವ ಗ್ರಾ.ಪಂ.ಗಳ ಪ್ರಯತ್ನಗಳಿಗೆ ಇನ್ನಷ್ಟು ಬಲ ನೀಡಲು 14ನೇ ಹಣಕಾಸು ಆಯೋಗದ ಅನುದಾನ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಕೆ.ಎಸ್‌.ಈಶ್ವರಪ್ಪ,
ಗ್ರಾಮೀಣಾಭಿವೃದ್ಧಿ ಸಚಿವ

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next