ಯಾದಗಿರಿ: ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪಕ್ಷದಮುಖಂಡರು, ಸಾರ್ವಜನಿಕರು ಯಾವುದೇಕಾರ್ಯಕ್ರಮ, ಸಭೆ, ಸಮಾರಂಭ, ಮೆರವಣಿಗೆ ಇತರೆ ಕಾರ್ಯಕ್ರಮಗಳಿಗೆ ಅನುಮತಿ ಪಡೆದುಕೊಳ್ಳಬೇಕು ಹಾಗೂ ಚುನಾವಣೆಯಲ್ಲಿ ಕಾರ್ಯನಿರತ ಅಧಿಕಾರಿ ಮತ್ತು ನೌಕಕರು ಯಾವುದೇ ಸಮಾರಂಭಗಳಲ್ಲಿ ಭಾಗವಹಿಸಬಾರದು ಎಂದು ಜಿಲ್ಲಾ ಕಾರಿ ಡಾ| ರಾಗಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಜಿಲ್ಲಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಕ್ಷಿಪ್ರ ಸಂಚಾರಿ ದಳ, ವಿಡಿಯೋ ಕಣ್ಗಾವಲು ತಂಡ, ಸೆಕ್ಟರ್ ಅಧಿಕಾರಿಗಳು ಮತ್ತು ಅಧಿಕಾರಿಗಳ ವಿವಿಧ ತಂಡಗಳ ತರಬೇತಿ ಸಭೆಯಲ್ಲಿ ಅವರು ಮಾತನಾಡಿದರು.
ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರಕ್ಕೆ ನೇಮಕ ಮಾಡಿದ ಅಧಿಕಾರಿಗಳ ತಂಡಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಿ ಹಾಗೂ ಮತಗಟ್ಟೆಗಳಲ್ಲಿ ಮತದಾನ ದಿನ ಥರ್ಮಲ್ ಸ್ಕ್ರೀನಿಂಗ್, ಸಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಒಟ್ಟು 7 ಮತಗಟ್ಟೆಗಳಿವೆ.ಇಲ್ಲಿಯವರೆಗೆ ಒಟ್ಟು 1970 ಶಿಕ್ಷಕ ಮತದಾರರಿದ್ದಾರೆ. ಅ.28ರಂದು ಮತದಾನ ನಡೆಯಲಿದೆ. ಮತದಾನ ಪ್ರಾರಂಭವಾಗುವುದಕ್ಕಿಂತ 48 ಗಂಟೆಗಳಮುಂಚೆ ಬಹಿರಂಗ ಪ್ರಚಾರ ಮಾಡುವುದು ಕೊನೆಗೊಳ್ಳುತ್ತದೆ. ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951ರ ಪ್ರಕರಣ 126 ಹಾಗೂ ಭಾರತೀಯ ದಂಡ ಸಂಹಿತೆಯ ಪ್ರಕರಣ 171 ರಡಿ ಶಿಕ್ಷಾರ್ಹ ಅಪರಾಧ ಎಂದು ಹೇಳಿದರು.
ಜಿಪಂ ಸಿಇಒ ಶಿಲ್ಪಾಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.