ತಿರುವನಂತಪುರ: ಕೇರಳದ ಪ್ರಸಿದ್ಧ ಆಯುರ್ವೇದ ಸಂಸ್ಥೆಯಾದ ಪಂಕಜಕಸ್ತೂರಿ ಹರ್ಬಲ್ ರಿಸರ್ಚ್ ಫೌಂಡೇಷನ್ ಅಭಿವೃದ್ಧಿ ಪಡಿಸಿರುವ “ಝಿಂಗಿವೀರ್-ಎಚ್’ ಎಂಬ ಆಯುರ್ವೇದ ಔಷಧವನ್ನು ಕೋವಿಡ್-19 ಸೋಂಕಿತ ವ್ಯಕ್ತಿಗಳ ಮೇಲೆ ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸಲು ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ ಆಫ್ ಇಂಡಿಯಾ(ಸಿಟಿಆರ್‌ಐ) ಅನುಮತಿ ನೀಡಿದೆ.
ಉಸಿರಾಟದ ಸೋಂಕು, ವೈರಲ್ ಜ್ವರ, ಶ್ವಾಸನಾಳಗಳ ಗಂಭೀರ ಉರಿಯೂತ ದಂಥ ಸಮಸ್ಯೆಗಳಿಗೆ ಪರಿಣಾಮಕಾರಿ ಯಾಗಿರುವ ಈ ಔಷಧದ ಕುರಿತು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಲಾಗಿದ್ದು, ಇದು ಉಸಿರಾಟಕ್ಕೆ ಸಂಬಂಧಿಸಿದ ಏಕಜೀವಾಣುವಿನ ವೈರಸ್ ವಿರುದ್ಧವೂ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂಬುದನ್ನು ಕಂಡುಕೊಳ್ಳಲಾಗಿದೆ.
ರಾಜೀವ್ ಗಾಂಧಿ ಬಯೋಟೆಕ್ನಾಲಜಿ ಕೇಂದ್ರದಲ್ಲಿ ಈ ಔಷಧದ ಪ್ರಯೋಗ ನಡೆಸಲಾಗಿದ್ದು, ಇದು ಮಾನವನ ಕೋಶದ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬುದು ದೃಢಪಟ್ಟಿದೆ.
ಹೀಗಾಗಿ ಇನ್‌ಸ್ಟಿಟ್ಯೂಷನಲ್ ಎಥಿಕ್ಸ್ ಕಮಿಟಿ(ಐಇಸಿ)ಯು ಔಷಧವನ್ನು ಮಾನವನ ಮೇಲೆ ಪ್ರಯೋಗಿಸಲು ಅನುಮತಿ ನೀಡಿತ್ತು. ಅದರ ಆಧಾರದಲ್ಲಿ ಈಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯಡಿ ಬರುವ ಕೇಂದ್ರ ಸರಕಾರದ ಸಿಟಿಆರ್‌ಐ ಸಂಸ್ಥೆ ಕೂಡ “ಝಿಂಗಿವೀರ್- ಎಚ್’ ಟ್ಯಾಬ್ಲೆಟ್‌ನ ಪ್ರಯೋಗಕ್ಕೆ ಒಪ್ಪಿಗೆ ನೀಡಿದೆ.
ಅದರಂತೆ ದೇಶದ ವಿವಿಧ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿರುವ ವಯಸ್ಕ ಕೋವಿಡ್-19 ಸೋಂಕಿತರಿಗೆ “ಝಿಂಗಿವೀರ್- ಎಚ್’ ಗುಳಿಗೆಯನ್ನು ನೀಡುವ ಮೂಲಕ ಅದರ ಪರಿಣಾಮಕಾರಿತ್ವ ಮತ್ತು ಗುಣಮಟ್ಟವನ್ನು ಸಾಬೀತು ಪಡಿಸಲಾಗುತ್ತದೆ. ಮೇ ಎರಡನೇ ವಾರದಲ್ಲಿ ಇದರ ಮೊದಲ ಫಲಿತಾಂಶ ಬರಲಿದೆ.
“ನಾವಂದುಕೊಂಡಂತೆಯೇ ಇದು ಫಲಿತಾಂಶ ಕೊಟ್ಟರೆ, ಅಂತಾರಾಷ್ಟ್ರೀಯ ಸಮುದಾಯಕ್ಕೆ ಆಯುರ್ವೇದವು ಮೌಲ್ಯಯುತ ಕೊಡುಗೆಯನ್ನು ನೀಡಿದಂತಾಗಲಿದೆ’ ಎಂದು ಪಂಕಜಕಸ್ತೂರಿ ಹರ್ಬಲ್ ರಿಸರ್ಚ್ ಫೌಂಡೇಷನ್ ಸ್ಥಾಪಕರಾದ ಡಾ| ಜೆ. ಹರೀಂದ್ರನ್ ನಾಯರ್ ಹೇಳಿದ್ದಾರೆ .