Advertisement

ಮತದಾನ ಮುಗಿದರೂ ಅನುಮತಿ ಕಡ್ಡಾಯ!

03:15 AM Apr 18, 2019 | Sriram |

ಉಡುಪಿ: ಉಡುಪಿಯೂ ಸೇರಿದಂತೆ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಎ.18 ಮತ್ತು ಎ. 23ಕ್ಕೆ ಪೂರ್ಣಗೊಂಡರೂ ಧಾರ್ಮಿಕ – ಖಾಸಗಿ ಸಮಾರಂಭಗಳಿಗೆ ಅನುಮತಿ ಪಡೆಯ ಬೇಕಾದ ಪ್ರಮೇಯ ಮೇ 23ರ ವರೆಗೂ ಮುಂದುವರಿಯಲಿದೆ!

Advertisement

ದೇಶದ ಬೇರೆಬೇರೆ ಭಾಗಗಳಲ್ಲಿ ಮೇ 19ರ ವರೆಗೆ ಮತದಾನ ನಡೆಯುತ್ತದೆ. ಮಾದರಿ ನೀತಿ ಸಂಹಿತೆ ಮೇ 23ರ ವರೆಗೂ ಇರುತ್ತದೆ. ಜಿಲ್ಲೆಯಲ್ಲಿ ಅನ್ಯ ರಾಜ್ಯಗಳ ಮತದಾರರು ಇರುವ ಸಾಧ್ಯತೆಯಿದ್ದು, ರಾಜಕೀಯ ಪಕ್ಷಗಳು, ವ್ಯಕ್ತಿಗಳು ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆಯೇ ಈ ನಿರ್ಧಾರಕ್ಕೆ ಕಾರಣ.

ಬಿಗಿಯಾದ ನಿಯಮ
ಕಳೆದ ವರ್ಷ ವಿಧಾನಸಭೆ ಚುನಾವಣೆಯ ಸಂದರ್ಭ ಆರಂಭಗೊಂಡು ಉಡುಪಿಯಲ್ಲಿ ಕಟ್ಟು ನಿಟ್ಟಾಗಿ ಅನುಸರಿಸಲ್ಪಟ್ಟ “ಖಾಸಗಿ ಕಾರ್ಯಕ್ರಮಗಳ ಅನುಮತಿ ಪ್ರಕ್ರಿಯೆ’ ಈ ಬಾರಿಯ ಚುನಾವಣೆಯಲ್ಲಿ ಮತ್ತಷ್ಟು ಬಿಗಿಯಾಯಿತು. ಈ ಚುನಾವಣೆಯಲ್ಲಿ ಸಿಂಗಲ್‌ ವಿಂಡೋ ಸಿಸ್ಟಂ ಮೂಲಕ ಅನುಮತಿ ನೀಡಲಾಗಿದೆ. ಮುಖ್ಯವಾಗಿ ಈ ಬಾರಿ ಕಾರ್ಯಕ್ರಮ ಆಯೋಜಕರ ಬ್ಯಾಂಕ್‌ ಪಾಸ್‌ ಪುಸ್ತಕದ ದಾಖಲೆ ಯನ್ನು ಪಡೆಯಲಾಗಿದೆ. ಜಿಲ್ಲೆಯಲ್ಲಿ ರಾಜಕೀಯ ಕಾರ್ಯಕ್ರಮ, ಸಮಾವೇಶಗಳನ್ನು ಹೊರತುಪಡಿಸಿ ಮದುವೆ, ಗೃಹಪ್ರವೇಶ, ಯಕ್ಷಗಾನ, ಜಾತ್ರೆ, ಉತ್ಸವ, ನೇಮ ಮೊದಲಾದವಕ್ಕೆ ಇದುವರೆಗೆ 2,000ದಷ್ಟು ಅನುಮತಿ ನೀಡಲಾಗಿದೆ. ಆದರೆ ಮೇ 23ರ ತನಕ ಖಾಸಗಿ ಕಾರ್ಯಕ್ರಮಗಳಿಗೂ ಅನುಮತಿ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸಡಿಲಿಕೆ?
ಉಡುಪಿ ಜಿಲ್ಲೆಗೆ ಹೋಲಿಸಿದರೆ ಚಿಕ್ಕಮಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯ ಅಷ್ಟಾಗಿ ಕಂಡುಬರಲಿಲ್ಲ. ಆರಂಭದ ಕೆಲವು ದಿನ ಕೆಲವರು ಮಾತ್ರ ಅನುಮತಿ ಪಡೆದುಕೊಂಡಿದ್ದರು. ಅನಂತರ ಅಂತಹ ಕಾರ್ಯಕ್ರಮಗಳಿಗೆ ಅನುಮತಿ ಬೇಕಾಗಿಲ್ಲ ಎಂದು ಅಧಿಕಾರಿಗಳು ನಿರ್ಧರಿಸಿದ್ದರಿಂದ ಖಾಸಗಿ ಕಾರ್ಯಕ್ರಮಗಳು ಅವುಗಳ ಪಾಡಿಗೆ ನಡೆ ದಿವೆ. ಕೆಲವೊಂದರ ಮೇಲೆ ಆಯೋಗ ಕಣ್ಣಿಟ್ಟಿತ್ತು.

ಕಾಪುವಿನಲ್ಲಿ ಅತ್ಯಧಿಕ
ಮಾದರಿ ನೀತಿಸಂಹಿತೆ ಜಾರಿಯಾದ ಅನಂತರ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಅಂದರೆ, ಒಟ್ಟು 487 ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಇದರಲ್ಲಿ 65 ರಾಜಕೀಯವಾದರೆ 422 ಮದುವೆ, ಉತ್ಸವ ಇತ್ಯಾದಿ. ಕಾರ್ಕಳದಲ್ಲಿ 33 ರಾಜಕೀಯ, 385 ಧಾರ್ಮಿಕ ಸೇರಿದಂತೆ ಒಟ್ಟು 418, ಉಡುಪಿಯಲ್ಲಿ 34 ರಾಜಕೀಯ ಮತ್ತು 447 ಖಾಸಗಿ ಸೇರಿ ಒಟ್ಟು 481, ಕುಂದಾಪುರದಲ್ಲಿ 34 ರಾಜಕೀಯ ಮತ್ತು 662 ಖಾಸಗಿ ಸೇರಿ 696 ಅನುಮತಿ ನೀಡಲಾಗಿದೆ.

Advertisement

ಅಲ್ಲಿ ಮುಕ್ತಾಯ… ಇಲ್ಲಿ ಮುಂದುವರಿಕೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನುಮತಿ ನೀಡುವ ಪ್ರಕ್ರಿಯೆ ಮಂಗಳವಾರ ಕೊನೆಗೊಂಡಿದೆ. ಆದರೆ ಉಡುಪಿಯಲ್ಲಿ ಅನುಮತಿ ನೀಡುವ ಚುನಾವಣ ಅಧಿಕಾರಿಗಳ ಕಚೇರಿ ತೆರೆದೇ ಇದೆ. ರಾಜಕೀಯ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ. ಆದರೆ ಖಾಸಗಿ ಕಾರ್ಯಕ್ರಮಗಳಿಗೆ ಇಲ್ಲಿ ಅನುಮತಿ ಪಡೆಯಲೇಬೇಕು. ಕಚೇರಿಗಳು ಮೇ 23ರ ವರೆಗೂ ತೆರೆದಿರುತ್ತವೆ ಎನ್ನುತ್ತಾರೆ ಅಧಿಕಾರಿಗಳು. ವಿಚಿತ್ರವೆಂದರೆ ನೀತಿ ಸಂಹಿತೆ ಇರುವುದು ರಾಜಕೀಯ ಪಕ್ಷಗಳನ್ನು ಹದ್ದುಬಸ್ತಿನಲ್ಲಿಡಲು. ಎ. 18ರ ಬಳಿಕ ಚುನಾವಣ ರಾಜಕೀಯ ಚಟುವಟಿಕೆ ಇಲ್ಲದಿದ್ದರೂ ಖಾಸಗಿ ಕಾರ್ಯಕ್ರಮಗಳು ನೀತಿ ಸಂಹಿತೆ ಪಾಲಿಸಬೇಕಾಗಿದೆ.

ಉದ್ದೇಶವೇನು?
ದೇಶದ ಬೇರೆ ಭಾಗಗಳಲ್ಲಿ ಮೇ 19ರ ವರೆಗೂ ಮತದಾನ ನಡೆಯುತ್ತದೆ. ಬೇರೆ ರಾಜ್ಯಗಳ ಮತದಾರರು ಉಡುಪಿ ಜಿಲ್ಲೆಯಲ್ಲಿ ಇರುವ ಸಾಧ್ಯತೆ ಇದ್ದು, ಅವರ ಮೇಲೆ ಪ್ರಭಾವ ಬೀರಬಹುದು ಎಂಬ ಹಿನ್ನೆಲೆಯಲ್ಲಿ ಅನುಮತಿ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ ಎನ್ನುತ್ತಾರೆ ಓರ್ವ ಅಧಿಕಾರಿ.

2 ಸೀಸನ್‌ಗಳಲ್ಲಿ ಹೊಡೆತ
ಇದು ಕರಾವಳಿಯಲ್ಲಿ ಮದುವೆ, ಉತ್ಸವಗಳ ಸೀಸನ್‌. ಚುನಾವಣೆಯ ಬ್ಯಾನರ್‌, ಫ್ಲೆಕ್ಸ್‌ಗೆ ನಿಷೇಧವಿದ್ದುದರಿಂದ ಈ ಉದ್ಯಮ, ಕೆಲಸದಲ್ಲಿ ತೊಡಗಿಕೊಂಡವರಿಗೆ ನಷ್ಟವಾಗಿದೆ. ಜಾತ್ರೆ, ಉತ್ಸವಗಳ ಬ್ಯಾನರ್‌ಗಳು ಕೂಡ ಕೈ ತಪ್ಪಿ ಮತ್ತಷ್ಟು ಹೊಡೆತ ಬಿದ್ದಿದೆ. ಕಳೆದ ವರ್ಷ ಇದೇ ಸಮಯದಲ್ಲಿ ವಿಧಾನಸಭಾ ಚುನಾವಣೆ ಇತ್ತು. ಇದು ಸತತ ಎರಡನೇ ಸೀಸನ್‌ ಮೇಲಿನ ಹೊಡೆತ. ಉಡುಪಿಯಲ್ಲಿ ನೀತಿಸಂಹಿತೆ ಒಂದಷ್ಟು ಹೆಚ್ಚು ಬಿಗಿಯಾಗಿದೆ ಅನ್ನಿಸುತ್ತಿದೆ. ಈಗ ಮೇ 23ರ ವರೆಗೂ ಅನುಮತಿ ಬೇಕು ಎನ್ನಲಾಗುತ್ತಿದೆ. ಆಯೋಗದ ನಿರ್ದೇಶನವಾಗಿರುವುದರಿಂದ ಅನುಸರಿಸುವುದು ಅನಿವಾರ್ಯ ಎಂದು ಸಂಘಟಕರಲ್ಲೋರ್ವರಾದ ಶಶಿಧರ ಅಮೀನ್‌ ಪ್ರತಿಕ್ರಿಯಿಸುತ್ತಾರೆ. ಬ್ಯಾನರ್‌, ಫ್ಲೆಕ್ಸ್‌ ನಿಷೇಧದಿಂದ ಪರಿಸರ ಸ್ವತ್ಛವಾಗಿರುವುದು ಒಟ್ಟು ಪ್ರಕ್ರಿಯೆಯ ಧನಾತ್ಮಕ ಆಯಾಮ.

ಅನುಮತಿ ಪ್ರಕ್ರಿಯೆ ಮುಂದುವರಿಯಲಿದೆ
ಚುನಾವಣ ಮಾದರಿ ನೀತಿ ಸಂಹಿತೆ ಮೇ 23ರ ವರೆಗೂ ಜಾರಿಯಲ್ಲಿರುವುದರಿಂದ ಈಗ ಯಾವ ರೀತಿ ಕಾರ್ಯಕ್ರಮಗಳ ಮಾಹಿತಿ ನೀಡಿ ಅನುಮತಿ ಪಡೆಯಲಾಗುತ್ತದೆಯೋ ಅದೇ ರೀತಿ ಆ ವರೆಗೂ ಅನುಮತಿ ಪಡೆಯಬೇಕಾಗುತ್ತದೆ.
– ಹೆಪ್ಸಿಬಾ ರಾಣಿ ಕೊರ್ಲಪಾಟಿ
ಜಿಲ್ಲಾಧಿಕಾರಿ, ಉಡುಪಿ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next