Advertisement

ದಾನಕ್ಕೂ ಬೇಕು ಜಿಲ್ಲಾಡಳಿತ ಅನುಮತಿ

03:34 PM Apr 21, 2020 | Team Udayavani |

ಚಿಕ್ಕಬಳ್ಳಾಪುರ: ಕೋವಿಡ್‌-19 ಸೋಂಕು ತಡೆಯುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಆದೇಶದಂತೆ ಜಿಲ್ಲಾಡಳಿತ ಲಾಕ್‌ಡೌನ್‌ ಘೋಷಣೆ ಮಾಡಿದೆ. ಇದರ ನಡುವೆ ಬಡವರಿಗೆ, ನಿರ್ಗತಿಕರಿಗೆ ಬೇಕಾದ ದಿನಸಿ, ಆಹಾರ ವಿತರಣೆಗೆ ಜಿಲ್ಲಾಡಳಿತದ ಅನುಮತಿ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

ಅಸಮಾಧಾನಕ್ಕೆ ಕಾರಣ: ಲಾಕ್‌ಡೌನ್‌ ಘೋಷಿಸಿದ ನಂತರ ಜನ ಸಾಮಾನ್ಯರಿಗೆ ಅದರಲ್ಲೂ ಬಡವರಿಗೆ ದಾನಿಗಳು ಮುಂದೆ ಬಂದು ಅಗತ್ಯ ಆಹಾರ, ದಿನಸಿ ಕಿಟ್‌ ಸೇರಿ ದಂತೆ ಮಾಸ್ಕ್, ಸ್ಯಾನಿಟೈಸರ್‌ ಉಚಿತವಾಗಿ ನೀಡುವ ಮೂಲಕ ಸರ್ಕಾರದ ಜೊತೆಗೆ ಕೈಜೋಡಿಸಿವೆ. ಆದರೆ ಜಿಲ್ಲಾಡಳಿತ ಸೋಮವಾರ ಹೊರಡಿಸಿರುವ ಆದೇಶವೊಂದು ದಾನಿಗಳಲ್ಲಿ ನಿರಾಶೆ ಮೂಡಿಸಿದೆ. ಯಾವುದೇ ಸಂಘ, ಸಂಸ್ಥೆ ಅಥವಾ ವ್ಯಕ್ತಿಗಳು ಏನೇ ದಾನ ಮಾಡುವ ಮೊದಲು ಜಿಲ್ಲಾಡಳಿತದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕೆಂದು ಹೊರಡಿಸಿರುವ ಆದೇಶ ದಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಜನರ ಓಡಾಟ ಕಡಿಮೆ ಮಾಡಲು ಜಿಲ್ಲಾಡಳಿತ ಈ ಆದೇಶ ಹೊರಡಿಸಿದ್ದರೂ, ಈವರೆಗೆ ಯಾವುದೇ ಪ್ರತಿಫ‌ಲ ಅಪೇಕ್ಷಿಸದೇ ಜನರಿಗೆ ಸಹಾಯವಾಗುತ್ತಿದ್ದವರ ಕಾರ್ಯಕ್ಕೆ ಇದರಿಂದ ನಿರಾಸೆಯಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ತಹಶೀಲ್ದಾರ್‌, ಆಯುಕ್ತರಿಗೆ ಪತ್ರ: ಜಿಲ್ಲೆಯಲ್ಲಿ ಯಾರೇ ಆಹಾರ, ದಿನಸಿ ಕಿಟ್‌ ಸೇರಿದಂತೆ ಅತ್ಯವಶ್ಯಕ ವಸ್ತುಗಳನ್ನು ಜನರಿಗೆ ವಿತರಿಸುವ ಮುನ್ನ ಅನುಮತಿ ಪಡೆದಿರುವ
ಕುರಿತು ಪರಿಶೀಲನೆ ನಡೆಸುವಂತೆ ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ನಗರಸಭೆಗಳ, ಪುರಸಭೆಗಳ ಆಯುಕ್ತರಿಗೆ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದೆ.

ಆದೇಶದಲ್ಲಿ ಏನಿದೆ?
ಜಿಲ್ಲೆಯಲ್ಲಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಲವು ಸಂಘ, ಸಂಸ್ಥೆಗಳು ಸ್ವಯಂ ಘೋಷಣೆಯಿಂದ ಉಚಿತವಾಗಿ ವಿತರಣೆ ಮಾಡುತ್ತಿರುವುದು ಒಳ್ಳೆಯ ಉದ್ದೇಶ. ಆದರೆ ಸದ್ಯ ಸೀಲ್‌ಡೌನ್‌ ಇರುವ ಕಾರಣ ದಿನಸಿ ಮತ್ತಿತರ ವಸ್ತುಗಳನ್ನು ಹಂಚುವ ಮೊದಲು ಜಿಲ್ಲಾಡಳಿತದ ಅನುಮತಿ ಪಡೆಯಬೇಕು. ಇಲ್ಲದೇ ಹೋದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲೆಯ ಅಪರ
ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಖಡಕ್‌ ಆಗಿ ಎಚ್ಚರಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತದ ಆದೇಶ ಸ್ವಾಗತಾರ್ಹವಾದರೂ ದಾನಿಗಳ ಸಹಾಯ ಬಡವರ ಕೈ ತಪ್ಪದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಡಳಿತವೇ ದಾನಿಗಳ ನೆರವು ಪಡೆದು ಅಗತ್ಯವುಳ್ಳವರಿಗೆ ಹಂಚಬೇಕು.
● ಬಿ.ಎನ್‌.ಮುನಿಕೃಷ್ಣಪ್ಪ, ಜಿಲ್ಲಾಧ್ಯಕ್ಷರು, ಪ್ರಾಂತ ರೈತ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next