Advertisement

ಬಾಕಿ 10 ದಿಬ್ಬಗಳಲ್ಲಿಯೂ ಮರಳುಗಾರಿಕೆಗೆ ಅನುಮತಿ

01:00 AM Mar 12, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಬಾಕಿಯಾಗಿದ್ದ 10 ಬ್ಲಾಕ್‌ಗಳಲ್ಲಿಯೂ ಮರಳುಗಾರಿಕೆ ನಡೆಸಲು 21 ಮಂದಿಗೆ ಪರವಾನಿಗೆ ನೀಡಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಗುರುತಿಸಲಾಗಿರುವ ಎಲ್ಲ 22 ಮರಳು ದಿಬ್ಬಗಳಲ್ಲೂ (ಬ್ಲಾಕ್‌) ಅನುಮತಿ ಲಭ್ಯವಾಗಿದ್ದು, ಶೀಘ್ರದಲ್ಲೇ ಮರಳುಗಾರಿಕೆ ಚಟುವಟಿಕೆಗಳು ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ.

Advertisement

12 ದಿಬ್ಬಗಳಲ್ಲಿ 72 ಮಂದಿ ಗುತ್ತಿಗೆದಾರರಿಂದ ಈಗಾಗಲೇ ಮರಳುಗಾರಿಕೆ ನಡೆಯುತ್ತಿದೆ. ಉಳಿದ 10 ದಿಬ್ಬಗಳಲ್ಲೂ ಮರಳು ತೆಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ದೊರಕಿದ್ದು ಪ್ರಥಮ ಹಂತದಲ್ಲಿ ಬಾಕಿಯುಳಿದಿರುವ ಅರ್ಹ ಗುತ್ತಿಗೆದಾರರಿಗೆ ಇದನ್ನು ವಹಿಸಿಕೊಡಲು ನಿರ್ಧರಿಸ ಲಾಗಿತ್ತು. ಅದರಂತೆ 21 ಮಂದಿಗೆ ಪರವಾನಿಗೆ ನೀಡಲಾಗಿದ್ದು ಮುಂದಿನ ಹಂತದಲ್ಲಿ ಇನ್ನಷ್ಟು ಮಂದಿ ಆರ್ಹ ಗುತ್ತಿಗೆದಾರರನ್ನು ಗುರುತಿಸಿ ಪರವಾನಿಗೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. 

ನಾನ್‌ಸಿಆರ್‌ಝಡ್‌ ವಲಯ
ನಾನ್‌ ಸಿಆರ್‌ಝಡ್‌ ವಲಯದಲ್ಲಿ ಸುಳ್ಯದಲ್ಲಿ 2, ಪುತ್ತೂರಿನಲ್ಲಿ 4, ಬಂಟ್ವಾಳ ದಲ್ಲಿ 1 ಸೇರಿ 7 ಬ್ಲಾಕ್‌ಗಳಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಫೈನಾನ್ಶಿಯಲ್‌ ಬಿಡ್‌ ಆಗಿದ್ದು ಶೀಘ್ರದಲ್ಲೇ ಮರಳುಗಾರಿಕೆ ಆರಂಭಗೊಳ್ಳಲಿದೆ. ಈಗಾಗಲೇ ಎರಡು ಬ್ಲಾಕ್‌ಗಳಲ್ಲಿ ಈ ಹಿಂದೆಯೇ ಅನುಮತಿ ದೊರಕಿ ಮರಳುಗಾರಿಕೆ ನಡೆಯುತ್ತಿದೆ.ನಾನ್‌ಸಿಆರ್‌ ಝಡ್‌ ವಲಯದಲ್ಲಿ 5 ವರ್ಷಗಳವರೆಗೆ ಮರಳು ತೆಗೆಯಲು ಅನುಮತಿ ನೀಡಲಾಗುತ್ತಿದೆ. ನಾನ್‌ ಸಿಆರ್‌ಝಡ್‌ ವಲಯದ ನೇತ್ರಾವತಿ, ಕುಮಾರಧಾರಾ ಹಾಗೂ ಗುಂಡ್ಯ ನದಿ ಪಾತ್ರಗಳಲ್ಲಿನ 15 ಬ್ಲಾಕ್‌ಗಳಿಗೆ ಮರಳುಗಾರಿಕೆಗೆ ನ. 15ರಂದು ಟೆಂಡರ್‌ ಪ್ರಕಟನೆ ಹೊರಡಿಸಲಾಗಿತ್ತು.

ನಿಯಮ ಸಡಿಲಿಕೆ
ನಾನ್‌ ಸಿಆರ್‌ಝಡ್‌ ವಲಯದ‌ಲ್ಲಿ ಗುತ್ತಿಗೆ ಅನುಮೋದನೆಗೆ ಸಾಂಪ್ರದಾಯಿಕ ಮರಳುಗಾರಿಕೆಯಲ್ಲಿ ಗುತ್ತಿಗೆದಾರರು ಕನಿಷ್ಠ 5 ವರ್ಷ ನಿರತರಾಗಿರಬೇಕು ಎಂಬ ಷರತ್ತಿನಿಂದ ಹಿನ್ನಡೆಯಾಗಿತ್ತು. ಇದೀಗ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದ್ದು 3 ವರ್ಷಕ್ಕಿಳಿಸಲಾಗಿದೆ. ನ. 15ರಂದು ಮೂರನೇ ಬಾರಿಗೆ ಕರೆದಿರುವ ಟೆಂಡರ್‌ನಲ್ಲಿ ಗುತ್ತಿಗೆ ಕೋರಿ 15 ಮಂದಿ ಟೆಂಡರ್‌ ಸಲ್ಲಿಸಿದ್ದರು.ಇದರಲ್ಲಿ ಕೇವಲ 6 ಮಂದಿ ಮಾತ್ರ 5 ವರ್ಷ ಸಾಂಪ್ರದಾಯಿಕ ಮರಳುಗಾರಿಕೆ ನಡೆಸಿದ್ದು ಗುತ್ತಿಗೆ ಅರ್ಹತೆ ಹೊಂದಿದ್ದರು. ಉಳಿದ 9 ಮಂದಿ 4 ವರ್ಷವಷ್ಟೇ ಸಾಂಪ್ರದಾಯಿಕ ಮರಳು ಗಾರಿಕೆ ನಡೆಸಿರುವುದರಿಂದ ಗುತ್ತಿಗೆ ವಹಿಸಿಕೊಳ್ಳಲು ಅರ್ಹರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿಯಮ ಸಡಿಲ ಗೊಳಿಸಬೇಕು ಎಂಬ ಪ್ರಸ್ತಾವನೆಯನ್ನು ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಲ್ಲಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next