ಉಡುಪಿ: ಜಿಲ್ಲೆಯ ಪ್ರವಾಸಿ ತಾಣಗಳ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ವಿವಿಧ ಕಾರ್ಯಯೋಜನೆಗಳು ರೂಪು ಗೊಳ್ಳುತ್ತಿದ್ದು, ಅದರಲ್ಲಿ ವಿಶೇಷವಾಗಿ ಪ್ರಸ್ತುತ ಸಾಲಿನಲ್ಲಿ 60 ಹೋಂ ಸ್ಟೇಗಳಿಗೆ ಅನುಮತಿ ನೀಡಲಾಗಿದೆ. ಉಡುಪಿ ಜಿಲ್ಲೆಗೆ ಪ್ರಕೃತಿದತ್ತ ಕಡಲು ಮತ್ತು ಪಶ್ಚಿಮಘಟ್ಟದ ಸೌಂದರ್ಯವಿದ್ದರೂ ಕೇರಳ ಮಾದರಿಯಂತೆ ಪ್ರವಾಸೋದ್ಯಮ ಕೇಂದ್ರವಾಗಿ ವ್ಯವಸ್ಥಿತ ಅಭಿವೃದ್ಧಿ ಹೊಂದಲು ಸಾಧ್ಯವಾಗಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಮತ್ತಷ್ಟು ನೆಲಕಚ್ಚಿದ್ದು, ಜಿಲ್ಲೆಯ ಆರ್ಥಿಕತೆಗೂ ಹೊಡೆತ ನೀಡಿತ್ತು. ಇದೀಗ ಪ್ರವಾಸೋದ್ಯಮ ವಲಯ ಕೊಂಚ ಚೇತರಿಕೆಯತ್ತ ಸಾಗುತ್ತಿದೆ. ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಈ ಹಿಂದೆ ಕಡಲತೀರ ಭಾಗದಲ್ಲಿ ಮಾತ್ರ ಹೋಂ ಸ್ಟೇ ನಿರ್ಮಾಣಕ್ಕೆ ಹೆಚ್ಚಿನ ಒಲವು ಇದ್ದು, ಅನೇಕರು ಅರ್ಜಿ ಸಲ್ಲಿಸುತ್ತಿದ್ದರು.
ಒಂದೂವರೆ ವರ್ಷದ ಹಿಂದೆ ಉಡುಪಿಯಲ್ಲಿ 13 ಹೋಂ ಸ್ಟೇಗಳಿದ್ದವು. ಇದೀಗ ಹೆಬ್ರಿ, ಕಾರ್ಕಳ, ಮಾಳ, ಕುಂದಾಪುರ, ಬೈಂದೂರು, ಹೆಜಮಾಡಿ ಸಹಿತ ಜಿಲ್ಲೆಯ ಎಲ್ಲ ಏಳು ತಾಲೂಕುಗಳಲ್ಲಿಯೂ ಹೋಂ ಸ್ಟೇ ನಿರ್ಮಾಣಕ್ಕೆ ಆಸಕ್ತಿ ಹೆಚ್ಚಿದ್ದು, ಗ್ರಾಮಗಳಲ್ಲಿ ಅರಣ್ಯ ಭಾಗ ಹತ್ತಿರವಿರುವ ಕೃಷಿ ಚಟುವಟಿಕೆ, ಮನೆಗಳ ಮಾಲಕರು ಹೋಂ ಸ್ಟೇ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪ್ರವಾಸಿಗರು ಕರಾವಳಿಯ ಕಡಲತೀರದಷ್ಟೆ ಕೃಷಿ, ಅರಣ್ಯ ನಡುವಿನ ಗ್ರಾಮಗಳಲ್ಲಿ ವಾಸ್ತವ್ಯ ಇಷ್ಟ ಪಡುವುದು ಇದಕ್ಕೆ ಕಾರಣ.
ದೂರು ಬಂದರೆ ಪರವಾನಿಗೆ ರದ್ದು :
ಹೋಂ ಸ್ಟೇಗಳಲ್ಲಿ ಅನೈತಿಕ, ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ. ಪ್ರವಾಸಿಗರಿಗೆ ಗುಣಮಟ್ಟದ ಆತಿಥ್ಯ ಒದಗಿಸುವುದು ಪ್ರಮುಖ ಆದ್ಯತೆಯಾಗಿರುತ್ತದೆ. ಕರಾವಳಿ ಸಂಸ್ಕೃತಿ, ಆಹಾರ ವೈವಿಧ್ಯ ಪೂರಕವಾಗಿರಬೇಕು. ಮಾಲಕರು ಮನೆಯಲ್ಲಿ ನೆಲೆಸಿದ್ದು, ಹೋಂ ಸ್ಟೇ ನೋಡಿಕೊಳ್ಳಬೇಕು. ಸುತ್ತಮುತ್ತಲ ಪರಿಸರ, ಅರಣ್ಯ, ನದಿಗಳಿಗೆ ಹಾನಿಯಾಗುವ ಚಟುವಟಿಕೆ ನಡೆಸುವಂತಿಲ್ಲ. ಸ್ಥಳೀಯರಿಂದ ಈ ಬಗ್ಗೆ ಸಮರ್ಪಕವಾಗಿ ದೂರು ಬಂದಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತಮ ಸೌಕರ್ಯಗಳಿದ್ದಲ್ಲಿ ತಮ್ಮ ಮನೆಗಳನ್ನೇ ಹೋಂ ಸ್ಟೇ ರೂಪಿಸಲು ಅರ್ಜಿ ಸಲ್ಲಿಸಬಹುದು. ಇಲಾಖೆ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪೊಲೀಸ್ ಠಾಣೆ ಮತ್ತು ಗ್ರಾ. ಪಂ.ಗಳಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಅಗತ್ಯವಾಗಿದ್ದು, ಸ್ವಂತ ಮನೆಯ ಮಾಲಕರು ಮತ್ತು ಮನೆಯ ದಾಖಲೆಗಳು ಸಮರ್ಪಕವಾಗಿರುವುದು ಪರಿಶೀಲಿಸಿ ಅನುಮತಿ ನೀಡಲಾಗುತ್ತದೆ.
5 ಹೊಟೇಲ್‌ಗಳಿಗೆ 3 ಕೋಟಿ ರೂ. ಸಬ್ಸಿಡಿ : ಪ್ರವಾಸೋದ್ಯಮ ಇಲಾಖೆ ವತಿಯಿಂದ 2015-20ರ ನೀತಿಯಂತೆ 5 ದೊಡ್ಡ ಹೊಟೇಲ್‌ಗಳಿಗೆ 3 ಕೋ.ರೂ. ಸಹಾಯಧನವನ್ನು ನೀಡಲಾಗಿದ್ದು, ಇದರಲ್ಲಿ ಉಡುಪಿ ಮತ್ತು ಕಾಪುವಿನ ಪ್ರಮುಖ ಹೊಟೇಲ್‌ಗಳು ಸಬ್ಸಿಡಿ ಪಡೆದುಕೊಂಡಿವೆ. 1ರಿಂದ 3 ಕೋಟಿ ವೆಚ್ಚದೊಳಗೆ ಹೊಟೇಲ್ ನಿರ್ಮಿಸಿದವರಿಗೆ ಈ ಸಹಾಯಧನ ದೊರೆಯುತ್ತದೆ. 2020-2025ರ ನೀತಿಯಂತೆ ಸಹಾಯಧನ ನೀಡುವ ಮಾನದಂಡ ಬದಲಾಗಿದ್ದು, ಸಹಾಯಧನ ಪಡೆಯಲು ಗರಿಷ್ಠ 5 ಕೋ.ರೂ. ವೆಚ್ಚದಲ್ಲಿ ಹೊಟೇಲ್ ನಿರ್ಮಿಸಬೇಕು.
ವೆಬ್‌ಸೈಟ್ ಅಪ್‌ಡೇಟ್ ಕೆಲಸ ಪ್ರಗತಿಯಲ್ಲಿ :
ಉಡುಪಿ ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್ ಅಪ್‌ಡೇಟ್ ಕೆಲಸ ಪ್ರಗತಿಯಲ್ಲಿರುವುದರಿಂದ ಸಾರ್ವಜನಿಕರಿಗೆ ಹೊಂ ಸ್ಟೇಗಳ ಮಾಹಿತಿಗಳು ಸದ್ಯಕ್ಕೆ ಲಭ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಮಾಹಿತಿ ಪ್ರವಾಸಿಗರಿಗೆ ಸಿಗಲಿದೆ. ಪ್ರಸ್ತುತ ಹೋಂ ಸ್ಟೇ ಮಾಲಕರು ಸ್ವಂತ ವೆಬ್‌ಸೈಟ್ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಹೋಂ ಸ್ಟೇ ಸೌಕರ್ಯಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯನ್ನು ಪ್ರವಾಸೋದ್ಯಮದಲ್ಲಿ ಬಹುಮುಖ್ಯ ಕ್ಷೇತ್ರವಾಗಿಸಲು ಯೋಜನೆ ರೂಪಿಸಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ 60 ಹೋಂ ಸ್ಟೇಗಳಿಗೆ ಅನುಮೋದನೆ ನೀಡಲಾಗಿದೆ. ಇಲಾಖೆ ಮಾನ್ಯತೆ ಅಡಿಯಲ್ಲಿ 2015-20ರ ಸಾಲಿನಲ್ಲಿ 5 ಹೊಟೇಲ್‌ಗಳಿಗೆ ಸಹಾಯಧನವನ್ನು ವಿತರಿಸಲಾಗಿದೆ.
-ಎಸ್. ಅಂಗಾರ, ಜಿಲ್ಲಾ ಉಸ್ತುವಾರಿ ಸಚಿವ, ಉಡುಪಿ ಜಿಲ್ಲೆ
-ಅವಿನ್ ಶೆಟ್ಟಿ