ದೇವನಹಳ್ಳಿ: ರಾಜ್ಯದಲ್ಲಿ ಅಂತರ್ಜಲ ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅಧಿಸೂಚಿತ ಪ್ರದೇಶಗಳಲ್ಲಿ ಹೊಸ ಕೊಳವೆ ಬಾವಿ ಕೊರೆಯದಂತೆ ಕರ್ನಾಟಕ ಅಂತರ್ಜಲ ಪ್ರಾಧಿಕಾರ ಸೂಚನೆಹೊರಡಿಸಿದೆ. ಆದರೆ, ಅನಿವಾರ್ಯ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸಮಿತಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದರೆ, ಕ್ರಿಮಿನಲ್ ಮೊಕದ್ಧಮ್ಮೆ ಹಾಗೂ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.
ಅಧಿಸೂಚಿತ ಪ್ರದೇಶ: ರಾಜ್ಯದ 15 ಜಿಲ್ಲೆಗಳ 45 ತಾಲೂಕುಗಳನ್ನು ಅಧಿಸೂಚಿತ ಪ್ರದೇಶಗಳೆಂದು ಗುರುತಿಸಿರುವ ಪಟ್ಟಿಯಲ್ಲಿ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆಸಿದರೆ, ಜಿಲ್ಲಾ ಸಮಿತಿ ಅನುಮತಿ ಜತೆಗೆ ನೋಂದಣಿ ಮಾಡಿಸಬೇಕು. ಇಲ್ಲದಿದ್ದರೆ, ಸರ್ಕಾರದಿಂದ ನೀಡುವ ಪ್ರೋತ್ಸಾಹದಾಯಕ ಯೋಜನೆಗಳು ಮತ್ತು ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡುವುದಿಲ್ಲ. ಹಾಗೂ ಕೊಳವೆ ಬಾವಿ ಕೊರೆಸುವ ಭೂ ಮಾಲೀಕರು ಮತ್ತು ಕೊಳವೆ ಬಾವಿ ಯಂತ್ರದ ಮಾಲೀಕರನ್ನು ಅಪರಾಧಿಗಳೆಂದು ಪ್ರಕರಣ ದಾಖಲಿಸುವ ಕಾನೂನು ರೂಪಿಸಲಾಗಿದೆ.
ಅಲ್ಪ ಸ್ವಲ್ಪ ನೀರು: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 38 ಸಾವಿರ ಕೃಷಿ ಮತ್ತು ಕೃಷಿಯೇತರ ಕೊಳವೆ ಬಾವಿಗಳಿದ್ದು, ಈ ಪೈಕಿ 12,300 ಕೊಳವೆ ಬಾವಿಗಳಲ್ಲಿ ನೀರಿಲ್ಲ. 5,201 ಕೊಳವೆ ಬಾವಿಗಳಿಗೆ ಭೂ ಮಾಲೀಕರು ವಿದ್ಯುತ್ ಸಂಪರ್ಕ ಕಡಿತಗೊಳಿಸಿಕೊಂಡಿದ್ದಾರೆ. ಕನಿಷ್ಠ 10 ಕೊಳವೆ ಬಾವಿ ಕೊರೆಸಿದರೆ, 4-5 ರಲ್ಲಿ ನೀರು ಅಲ್ಪ ಸ್ವಲ್ಪ ಸಿಗಲಿದೆ ಎಂದು ಅಂತರ್ಜಲ ನಿರ್ದೇಶನಾಲಯ ಹಾಗೂ ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಅಂತರ್ಜಲ ಮಟ್ಟ ಕುಸಿತ: ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ 2011ನೇ ಸಾಲಿನಿಂದ ಅನುಮತಿ ಇಲ್ಲದೆ, ಯಾವುದೇ ಕೊಳವೆ ಬಾವಿ ಕೊರೆಯುವಂತಿಲ್ಲ. ಈ ಭಾಗದಲ್ಲಿ ಫ್ಲೋರೈಡ್‌ಯುಕ್ತ ಅಂಶ ಹೆಚ್ಚಳವಾಗಿದೆ. ಜನಜಾನುವಾರು ಹಾಗೂ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಜಿಲ್ಲೆಯಲ್ಲಿ ಯಾವುದೇ ನದಿ ಮೂಲಗಳು ಇಲ್ಲದೆ, ಮಳೆಯಾಶ್ರೀತ ಮತ್ತು ಕೊಳವೆ ಬಾವಿಗಳ ಮೂಲಕವೇ ಕೃಷಿ ಚಟುವಟಿಕೆ ಕೈಗೊಳ್ಳ ಬೇಕಿದೆ. ಜಿಲ್ಲೆಯಲ್ಲಿ 1,200 ರಿಂದ 1,800 ಅಡಿ ವರೆಗೆ ಕೊಳವೆ ಬಾವಿ ಕೊರೆಸಿದರೂ, ನೀರು ಸಿಗದ ಪರಿಸ್ಥಿತಿ ಇದೆ. ಅಂತ ರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ಆ. 5,2020 ರಿಂದ ಜಾರಿಗೆ ಬರುವಂತೆ ಈ ಹಿಂದೆ ಪ್ರಾಧಿಕಾರ ನಿರ್ದೇಶನಾಲಯ ಹಾಗೂ ಸದಸ್ಯ ಕಾರ್ಯದರ್ಶಿಗಳ ಕಚೇರಿ ಯಿಂದ ಅಧಿಸೂಚನೆ ಹೊರಡಿಸಲಾಗಿದೆ. ಈ ಕಾನೂನಿನಂತೆ ಮುಂಬ ರುವ ದಿನಗಳಲ್ಲಿ ಕೊಳವೆ ಬಾವಿ ಕೊರೆಯಲು ಜಿಲ್ಲಾ ಮಟ್ಟದ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಪ್ರಸ್ತುತ ಬಳಕೆಯಲ್ಲಿರುವ ಬಳಕೆದಾರರು ತಮ್ಮ ಹೆಸರನ್ನು ಅಂತರ್ಜಲ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಅನು ಮತಿ ಪಡೆಯದಿದ್ದರೆ, ಯಾವುದೇ ಸರ್ಕಾರದ ಸೌಲಭ್ಯ ಪಡೆಯಲು ಅನರ್ಹರಾಗಿರುತ್ತಾರೆ.
ಸರ್ಕಾರದ ಗೊಂದಲದ ಆದೇಶಗಳು ರೈತರನ್ನು ಕತ್ತು ಹಿಸುಕುತ್ತಿವೆ. ಅಂತರ್ಜಲ ಅಭಿವೃದ್ಧಿಗೆ ಅಗತ್ಯವಾದ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುವಲ್ಲಿ ಸರ್ಕಾರಗಳು ವಿಫಲವಾಗಿವೆ. ಇಂತಹ ತಲೆಕೆಟ್ಟ ಆದೇಶಗಳು ರೈತರಿಗೆ ಮಾರಕವೇ ಹೊರತು ಒಳಿತಲ್ಲ. ಇಂತಹ ಕೆಲಸಕ್ಕೆ ಕೈ ಹಾಕಬಾರದು. ಸಣ್ಣ ನೀರಾವರಿ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಕೊಳವೆ ಬಾವಿ ಕೊರೆಸಲು ಅನುಮತಿಗೆ ಮಾನದಂಡ ತಿಳಿಸಿಲ್ಲ.
–ವೆಂಕಟನಾರಾಯಣಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ
ಪ್ರತಿ 2 ವರ್ಷಕ್ಕೊಮ್ಮೆ ಅಂತರ್ಜಲ ಮೌಲ್ಯೀಕರಣವನ್ನು ಇಲಾಖೆ ಮಾಡುತ್ತಿದೆ. ಇನ್ನು ಮುಂದೆ ಸರ್ಕಾರ ಘೋಷಣೆ ಮಾಡಿರುವ ಕಾನೂನಿನ ಪ್ರಕಾರ ಕೈಗಾರಿಕೆಗಳು, ಕೃಷಿ ಚಟುವಟಿಕೆಗೆ ರೈತರು, ಸಾರ್ವಜನಿಕರು ಕೊಳವೆ ಬಾವಿ ಕೊರೆಸಲು ಅನುಮತಿ ಕಡ್ಡಾಯವಾಗಿದೆ.
–ಪಲ್ಲವಿ, ಜಿಲ್ಲಾ ಅಂತರ್ಜಲ ನಿರ್ದೇಶನಾಲಯ ಹಿರಿಯ ಭೂ ವಿಜ್ಞಾನಿ
ಅಂತರ್ಜಲ ಪ್ರಾಧಿಕಾರದ ಗಮನಕ್ಕೆ ತಂದು ಇನ್ನು ಮುಂದೆ ಸಾರ್ವಜನಿಕರು ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗಬೇಕು. ಇಲ್ಲದಿದ್ದರೆ ಅಗತ್ಯ ಕ್ರಮವನ್ನು ಇಲಾಖೆ ಕೈಗೊಳ್ಳುತ್ತದೆ.
–ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ
–ಎಸ್.ಮಹೇಶ್