ಕಾಪು: ದಿನಬೆಳಗಾದರೆ ಕಡಲಿನ ಅಲೆಗಳನ್ನು ನೋಡುತ್ತ ಬದುಕಿದವರು ನಾವು. ಮಳೆಗಾಲ ಬಂದರೆ ಸಾಕು ನಾವು ಮನೆ ಬಿಟ್ಟು ಬದುಕಬೇಕಾದ ಪರಿಸ್ಥಿತಿ. ಕಡಲು ಯಾವಾಗ ಪ್ರಕ್ಷುಬ್ಧಗೊಳ್ಳುವುದೋ ಅನ್ನೋ ಭಯ. ಒಪ್ಪತ್ತಿನ ಊಟಕ್ಕೂ ನಾವು ಕಡಲ ಕಸುಬನ್ನು ಅವಲಂಬಿಸುವವರು.ಅಲೆಗಳ ಅಬ್ಬರಕ್ಕೆ ಬ್ರೇಕ್ ಹಾಕಲು ಏನಾದರೊಂದು ಮಾಡಿಕೊಡಿ ಅಂತಾ ಹಲವಾರು ವರ್ಷಗಳಿಂದ ಕಾಡಿಬೇಡಿ ದ್ದೇವೆ ಆದ್ರೆ ಪರಿಹಾರ ಮಾತ್ರ ಶೂನ್ಯ. ಹೀಗೆ ಅಳಲನ್ನು ಹೇಳಿಕೊಂಡವರು ಮಟ್ಟು ಪ್ರದೇಶದ ನಿವಾಸಿ ಅಶೋಕ್.
ಈ ಭಾಗದ ಜನರಿಗೆ ಮಳೆಗಾಲದಲ್ಲಿ ಕಡಲ ಕೊರೆತದ ಭಯ ಇದ್ದೇ ಇರುತ್ತದೆ. ಕಡಲ ಕಸುಬು ಮಾಡಿಕೊಂಡು ಜೀವನ ಸಾಗಿಸೋ ಇಲ್ಲಿನ ಜನರು ಮುಂಜಾನೆ ಬೆಳಕು ಹರಿಯುವ ಮೊದಲೇ ದುಡಿಮೆ ಆರಂಭಿಸುತ್ತಾರೆ. ಆದರೆ ಕಡಲು ಮನೆ ತನಕ ಬಂದು ಮನೆಯನ್ನು ಆಕ್ರಮಿಸಿಕೊಂಡರೆ ಅನ್ನೋದು ಎಂಬ ಕಡಲವಾಸಿಗಳನ್ನು ಕಾಡುತ್ತಲೇ ಇರುತ್ತದೆ.
ವರ್ಷಂಪ್ರತಿ ಜನಪ್ರತಿನಿಧಿಗಳಿಗೆ ಕಡಲ ಕೊರೆತಕ್ಕೊಂದು ಶಾಶ್ವತ ಪರಿಹಾರ ಒದಗಿಸಿಕೊಡಿ ಅಂತ ಬೇಡಿದಾಗ ಜಿಲ್ಲಾಡಳಿತದೊಂದಿಗೆ ಸೇರಿಕೊಂಡು ಕಡಲಿಗೆ ಆಹಾರದಂತೆ ಕಲ್ಲು ತಂದು ಸುರಿದು ಕಿಸೆ ತುಂಬಿಸಿಕೊಂಡವರೇ ಹೆಚ್ಚು. ಆದ್ರೆ ಶಾಶ್ವತ ಪರಿಹಾರದ ಬಗ್ಗೆ ಯಾರೂ ಚಿಂತಿಸಿಲ್ಲ. ಈ ಬಾರಿ ನಮ್ಮ ಜನಪ್ರತಿನಿಧಿ ಅನಿಸಿಕೊಂಡ ನಮ್ಮ ಭಾಗದ ಶಾಸಕರು ನಮ್ಮ ಕಷ್ಟವನ್ನು ಅರಿತು ಸ್ಪಂದಿಸಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿ ಕಡಲ ಮಕ್ಕಳ ನೋವಿಗೆ ದನಿಯಾಗಿದ್ದಾರೆ. ನದಿ ತೀರದ ಪ್ರದೇಶದ ಜನರು ಕೂಡ ನದಿ ಕೊರೆತದಿಂದಾಗಿ ಸಮಸ್ಯೆಗೆ ಒಳಗಾಗಿದ್ದು ಇದೀಗ ಈ ಪ್ರದೇಶದಲ್ಲಿ ಸುತ್ತಲೂ ತಡೆಗೋಡೆ ಮತ್ತು ರಸ್ತೆ ನಿರ್ಮಾಣಗೊಂಡು ಜನರಿಗೆ ಬಹಳಷ್ಟು ಅನುಕೂÇವಾಗಿದೆ.
ಈ ಬಾರಿ ಜನಪ್ರತಿನಿಧಿಯೊಬ್ಬರು ಕಡಲಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಂಡಿಕೊಂಡಿದ್ದಾರೆ. ಜಪಾನ್ ಮಾದರಿಯಲ್ಲಿ ಕಡಲ ಕೊರೆತ ತಡೆಗೋಡೆ ನಿರ್ಮಾಣ ಮಾಡುವ ಮೂಲಕ ಕಡಲ ಮಕ್ಕಳಲ್ಲಿ ನೆಮ್ಮದಿ ಮೂಡಿಸಿದ್ದಾರೆ. ಜಪಾನ್ ಮಾದರಿಯ ತಂತ್ರಜ್ಞಾನದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕಾರ್ಯ ಕಾಪುವಿನ ಮಟ್ಟು ಉದ್ಯಾವರದ ವರೆಗೂ ನಡೆಯುತ್ತಿದೆ.