Advertisement

ಬಂದರು ಮೇಲ್ದರ್ಜೆಗೆ ಶಾಶ್ವತ ಯೋಜನೆ

03:37 AM Feb 24, 2021 | Team Udayavani |

ಮಂಗಳೂರು : ನಗರದ ಮೀನುಗಾರಿಕಾ ಬಂದರನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮೀನುಗಾರ ಬಂಧುಗಳು, ಬಂದರು ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಜತೆಗೆ ವಿಶೇಷ ಸಭೆ ನಡೆಸಿ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಖಾತೆ ಸಚಿವ ಎಸ್‌. ಅಂಗಾರ ಹೇಳಿದರು.

Advertisement

ಮೀನುಗಾರಿಕಾ ಸಚಿವರಾದ ಬಳಿಕ ಮೊದಲ ಬಾರಿಗೆ ಮಂಗಳೂರು ಬಂದರಿಗೆ ಮಂಗಳವಾರ ಭೇಟಿ ನೀಡಿದ ಅವರು ಬಂದರು ವ್ಯಾಪ್ತಿಯ ಸಮಸ್ಯೆ-ಸವಾಲುಗಳ ಬಗ್ಗೆ ಪರಿಶೀಲಿಸಿ, ಮೀನುಗಾರಿಕೆ ಇಲಾಖೆ ವತಿಯಿಂದ ನಡೆದ “ಎಫ್‌ಎಫ್‌ಪಿಒ’ ಕುರಿತ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ದಕ್ಕೆಯಲ್ಲಿ ಬೋಟುಗಳು ನಿಲ್ಲಲು ಸಮಸ್ಯೆ ಆಗುತ್ತಿರುವುದರಿಂದ 3ನೇ ಹಂತದ ಜೆಟ್ಟಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಮೀನುಗಾರ ಕಾರ್ಮಿಕರ ಶ್ರಮ ಕಡಿಮೆ ಮಾಡುವ ನಿಟ್ಟಿನಲ್ಲಿಯೂ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಸರಕಾರದ ಅನುದಾನ ಇಲ್ಲವಾದರೂ ಇತರ ಮೂಲಗಳಿಂದ ಯೋಜನೆ ಜಾರಿಗೊಳಿಸುವ ಬಗ್ಗೆ ಒತ್ತು ನೀಡಬೇಕಿದೆ ಎಂದರು.

ಗಡಿ ಸಮಸ್ಯೆ
ಅಧ್ಯಕ್ಷತೆ ವಹಿಸಿ ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, 3ನೇ ಹಂತದ ಜೆಟ್ಟಿ ವಿಸ್ತರಣೆಗೆ ಶೀಘ್ರದಲ್ಲಿ ಸಚಿವ ಸಂಪುಟ ಅನುಮೋದನೆ ದೊರೆಯಲಿದೆ. ಮೀನು ಗಾರರಿಗೆ ಕೇರಳ, ಮಹಾರಾಷ್ಟ್ರಗಳ ಗಡಿ ಸಮಸ್ಯೆಯಿಂದ ಕರಾವಳಿಯ ಮೀನುಗಾರರಿಗೆ ಬಹುದೊಡ್ಡ ಸಮಸ್ಯೆ ಆಗುತ್ತಿದ್ದು ಅವರು ದೊಡ್ಡ ಮೊತ್ತದ ದಂಡ ಪಾವತಿಸುವ ಪ್ರಮೇಯವಿದೆ. ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರಕಾರದ ಗಮನಸೆಳೆಯುವ ಪ್ರಯತ್ನ ನಡೆಯಲಿದೆ ಎಂದು ಹೇಳಿದರು.

3ನೇ ಜೆಟ್ಟಿ-ತಾತ್ಕಾಲಿಕ ಕಾಮಗಾರಿ ಉದ್ದೇಶ
ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌ ಮಾತನಾಡಿ, 3ನೇ ಹಂತದ ಜೆಟ್ಟಿ ನಿರ್ಮಾಣ ನಿಧಾನವಾದ ಕಾರಣ ತಾತ್ಕಾಲಿಕವಾಗಿ ಅಗತ್ಯ ಕೆಲಸ ಪೂರ್ಣ ಮಾಡಲು ಅಂದಾಜು 22 ಕೋ.ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಒಪ್ಪಿಗೆ ದೊರೆತರೆ ಬಹುತೇಕ ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.

Advertisement

ಮೀನು ಉತ್ಪಾದಕರ ಸಂಸ್ಥೆ ರಚನೆ
ಮೀನುಗಾರರ ಹಲವು ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಂಗಳೂರು, ಉಡುಪಿ, ಕಾರವಾರ, ಮೈಸೂರು, ಶಿವಮೊಗ್ಗದಲ್ಲಿ ಮೀನು ಉತ್ಪಾದಕರ ಸಂಸ್ಥೆ (ಎಫ್‌ಎಫ್‌ಪಿಒ) ಆರಂಭವಾಗಲಿದೆ. ಮೀನುಗಾರರ ಉತ್ಪನ್ನಗಳಿಗೆ ಉತ್ತಮ ಬೆಲೆ, ಸೂಕ್ತ ಮಾರುಕಟ್ಟೆ, ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಈ ಸಂಸ್ಥೆಯ ಗುರಿ. ಮೀನುಗಾರಿಕೆಗೆ ಬೇಕಾದ ಎಲ್ಲ ಸವಲತ್ತುಗಳನ್ನು ಸಂಸ್ಥೆಯ ಮೂಲಕ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದರು.

ಶಾಸಕ ಡಾ| ವೈ. ಭರತ್‌ ಶೆಟ್ಟಿ, ಮನಪಾ ಸದಸ್ಯ ಅಬ್ದುಲ್‌ ಲತೀಫ್‌, ಮೀನುಗಾರಿಕಾ ಇಲಾಖೆಯ ನಿರ್ದೇಶಕ ಎ. ರಾಮಾಚಾರಿ, ಬಂದರು ಇಲಾಖೆಯ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ, ಕೆಎಫ್‌ಡಿಸಿ ಎಂಡಿ ದೊಡ್ಡಮನಿ, ಪರ್ಸಿನ್‌ ಬೋಟ್‌ ಮಾಲಕರ ಸಂಘದ ಅಧ್ಯಕ್ಷ ಶಶಿಕುಮಾರ್‌ ಬೆಂಗ್ರೆ, ವಿವಿಧ ಸಂಘಗಳ ಪ್ರಮುಖರಾದ ಇಸ್ಮಾಯಿಲ್‌, ಭಾಷಾ, ಬಾಬು ಸಾಲ್ಯಾನ್‌ ಉಪಸ್ಥಿತರಿದ್ದರು.
ದ.ಕ. ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಿ. ಪಾರ್ಶ್ವನಾಥ್‌ ಸ್ವಾಗ  ತಿಸಿದರು. ಮಂಜುಳಾ ಶೆಟ್ಟಿ ನಿರೂ ಪಿಸಿದರು.

ಸೀ ವೀಡ್‌ ಕೃಷಿಗೆ ಉತ್ತಮ ಅವಕಾಶ
ಶಾಸಕ ವೇದವ್ಯಾಸ್‌ ಕಾಮತ್‌ ಮಾತನಾಡಿ, ಪ್ರಧಾನಿ ಮೋದಿ ಅವರು ಕರಾವಳಿ ತಟದಲ್ಲಿ ಸೀವೀಡ್‌ (ಸಮುದ್ರ ಕಳೆ) ಬೆಳೆಸಿ; ಗೊಬ್ಬರವಾಗಿಸಿ ಎಂದು ಹೇಳುವ ಮೂಲಕ ರೈತ ವಲಯದಲ್ಲಿ ಪ್ರಧಾನಿ ಸಂಚಲನ ಸೃಷ್ಟಿಸಿದ್ದರು. ಗುಜರಾತ್‌ನಲ್ಲಿ ಇದರ ಕ್ರಾಂತಿಯೇ ಆಗಿದೆ. ದ.ಕ., ಉಡುಪಿ ಭಾಗದಲ್ಲಿಯೂ ಸೀವೀಡ್‌ ಬೆಳೆಯಲು ಅವಕಾಶವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next