ಅಂಕೋಲಾ: ಕೇಂದ್ರ ಸರಕಾರ ಮತ್ತ್ಯಕ್ರಾಂತಿ ಯೋಜನೆಯಡಿ 20 ಸಾವಿರ ಕೋಟಿ ಬಿಡುಗಡೆ ಮಾಡುವ ನಿರೀಕ್ಷೆ ಇದ್ದು ಇದರನ್ವಯ ರಾಜ್ಯ ಸರಕಾರಕ್ಕೆ 3500 ಕೋಟಿ ಬರುವ ನೀರಿಕ್ಷೆ ಇದೆ. ಇದರಿಂದ ರಾಜ್ಯದಲ್ಲಿ ಮುಂದಿನ 5 ವರ್ಷ ಮೀನುಗಾರಿಕೆಗೆ ಅಭಿವೃದ್ಧಿಗೆ ಶಾಶ್ವತ ಯೋಜನೆ ರೂಪಿಸಲು ಚರ್ಚೆ ನಡೆಸಲಾಗುವುದು ಎಂದು ಮೀನುಗಾರಿಕೆ ಹಾಗೂ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ತಾಲೂಕಿನ ಬೆಳಂಬಾರ, ಕೇಣಿ, ಬೇಲೆಕೇರಿ ಕಡಲ ಕೊರೆತ ಪ್ರದೆಶಗಳಿಗೆ ಭೇಟಿ ನೀಡಿ ಕಡಲ ಕೊರೆತದಿಂದ ಆಗಿರುವ ಹಾನಿ ವೀಕ್ಷಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಾಲೂಕಿನ ಬೆಳಂಬಾರದಲ್ಲಿ 140 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಜಟ್ಟಿ ನಿರ್ಮಾಣ ಮಾಡುವ ಪ್ರಸ್ತವಾನೆಯನ್ನು ಸಚಿವ ಸಂಪುಟದ ಗಮನಕ್ಕೆ ತಂದು ಶೀಘ್ರದಲ್ಲೇ ಯೋಜನೆ ಜಾರಿಗೆ ತರಲಾಗುವುದು ಎಂದರು. ಬೆಳಂಬಾರ ಜಟ್ಟಿ ನಿರ್ಮಾಣದಿಂದ 500 ಸಾಂಪ್ರದಾಯಿಕ ಬೋಟ್, 250 ಯಾಂತ್ರಿಕ ಬೋಟ್ ನಿಲುಗಡೆ ಮಾಡಿ ಮೀನುಗಾರಿಕೆಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಬಹುದು ಎಂದರು.
ತಡೆಗೊಡೆಗೆ ಹಣ ಬಿಡುಗಡೆ ಬೆಳಂಬಾರ ಮಧ್ಯ ಖಾರ್ವಿವಾಡಾ 80 ಲಕ್ಷ, ದಕ್ಷಿಣ ಖಾರ್ವಿ ವಾಡಾ 120 ಲಕ್ಷ, ಹಂದಗೋಡ 60 ಲಕ್ಷ, ಹರಿಕಂತ್ರ ಕೇಣಿಗೆ ಶಾಸಕಿ ರೂಪಾಲಿ ನಾಯ್ಕ ಪ್ರಸ್ತಾವನೆ ಮೇರೆಗೆ 5.5 ಕೋಟಿ ರೂ. ತಡೆಗೊಡೆಗೆ ಬಿಡುಗಡೆ ಮಾಡಲಾಗಿದೆ. ಗಾಭಿತಕೇಣಿಯಲ್ಲಿ ರಸ್ತೆ ದುರಸ್ತಿ ಮತ್ತು ತಡೆಗೊಡೆಗೆ ಶೀಘ್ರದಲ್ಲಿಯೆ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಶಾಶ್ವತ ತಡೆಗೊಡೆ: ಕರಾವಳಿ ಕಿನಾರೆಯಲ್ಲಿ ಸಮುದ್ರ ಕೊರೆತ ತಡೆಗೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಲು ಉಳ್ಳಾಲದಿಂದ ಕಾರವಾರದವರೆಗೆ ನಬಾರ್ಡ್ ಯೋಜನೆಯಲ್ಲಿ ಈ ಹಿಂದೆ 950 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈಗಾಗಲೇ ಉಳ್ಳಾಲದಲ್ಲಿ 250 ಕೋಟಿ ರೂ. ತಡೆಗೋಡೆ ನಿರ್ಮಾಣ ನಡೆದಿದೆ. ಅದನ್ನು ಅಧ್ಯಯನ ಮಾಡಿ ಮುಂದಿನ ಹಂತವನ್ನು ಕಾರ್ಯಗತ ಮಾಡಲಾಗುವುದು. ತಡೆಗೋಡೆ ಕಾಮಗಾರಿಯಲ್ಲಿ ಅವ್ಯವಹಾರ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಲ್ಲುಗಳನ್ನೆ ಹಾಕಲಾಗಿದೆ. ಅದೇ ಕಲ್ಲುಗಳನ್ನು ಪುನಃ ಶಾಶ್ವತ ತಡೆಗೊಡೆ ನಿರ್ಮಾಣ ಸಂದರ್ಭದಲ್ಲಿ ಬಸಳಸಿಕೊಳ್ಳಲಾಗುವುದು ಎಂದರು.
ಶಾಸಕಿ ರೂಪಾಲಿ ನಾಯ್ಕ ಜಿಪಂ ಸದಸ್ಯ ಜಗದೀಶ ನಾಯಕ ಭಾಸ್ಕರ್ ನಾರ್ವೇಕರ, ಸಂಜಯ ನಾಯ್ಕ, ಪ್ರಶಾಂತ ನಾಯಕ, ಗಣಪತಿ ಮಾಂಗ್ರೆ ಮೀನುಗಾರಿಕೆ ಇಲಾಖೆ ಉಪನಿರ್ದೆಶಕ ನಾಗರಾಜ ಉಪಸ್ಥಿತರಿದ್ದರು.