Advertisement

ಪುತ್ತೂರಿನ ಸರಕಾರಿ ಕನ್ನಡ ಶಾಲೆಗೆ ಶಾಶ್ವತ ಬೀಗ!

01:09 PM May 23, 2017 | Harsha Rao |

ಪುತ್ತೂರು: ಕಳೆದ ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿ ಕಟ್ಟಡ ಅಸುರಕ್ಷಿತ ಎಂಬ ಕಾರಣವೊಡ್ಡಿ ಬೀಗ ಜಡಿದಿದ್ದ ನಗರದ ಸರಕಾರಿ ಕನ್ನಡ ಶಾಲೆ ಶಾಶ್ವತವಾಗಿ ಬಾಗಿಲು ಮುಚ್ಚಲು ಅಣಿಯಾಗಿದೆ!

Advertisement

ತಾ.ಪಂ. ಕೆಡಿಪಿ ಸಭೆಯ ಸೂಚನೆಯಂತೆ ಕಟ್ಟಡ ಗುಣಮಟ್ಟ ಪರಿಶೀಲಿಸಿದ ಪಂಚಾಯತ್‌ರಾಜ್‌ ಇಲಾಖಾ ಎಂಜಿನಿಯರ್‌ಗಳು, ತರಗತಿ ನಡೆಸಲು ಕಟ್ಟಡ ಸೂಕ್ತವಲ್ಲ ಎಂದು ವರದಿ ನೀಡಿದ್ದಾರೆ. ಹೀಗಾಗಿ 52 ವರ್ಷಗಳ ಇತಿಹಾಸದ ವಿದ್ಯಾಸಂಸ್ಥೆಯೊಂದು ಇತಿಹಾಸದ ಪುಟ ಸೇರಲಿದೆ.

ಸರಕಾರಿ ಕನ್ನಡ ಶಾಲೆ
ನಗರದ ಶ್ರೀ ಮಹಾಲಿಂಗೇಶ್ವರ ದೇಗುಲ ವಠಾರದ ದ.ಕ. ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆ ಆರಂಭದಿಂದಲೂ ಮೂಲಸೌಕರ್ಯ ಕೊರತೆಯಿಂದ ಬಳಲಿತ್ತು. ಕಳೆದ ಶೈಕ್ಷಣಿಕ ವರ್ಷದ ಜನವರಿಯಲ್ಲಿ ಹೆತ್ತವರು, ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆದು, ಕೊನೆಗೆ 23 ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ವರ್ಗಾಯಿಸಿ, ಶಾಲೆಗೆ ಬೀಗ ಜಡಿಯಲಾಗಿತ್ತು. ಟಿ.ಸಿ. ಕೊಟ್ಟು ಬೇರೆಡೆ ಕಳುಹಿಸಿದಾಗ ಏಳೆಂಟು ಮಕ್ಕಳ ಹೆತ್ತವರು ಇದಕ್ಕೆ ವಿರೋಧಿಸಿ ತಮ್ಮ ಮಕ್ಕಳನ್ನು ಇದೇ ಶಾಲೆಗೆ ಕಳುಹಿಸಿದ್ದರು. ನಮಗೆ ಇದೇ ಶಾಲೆ ಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಹೊಸ ಶೈಕ್ಷಣಿಕ ವರ್ಷದಲ್ಲಿ ಶಾಲೆ ಮತ್ತೆ ತೆರೆಯುವ ನಿರೀಕ್ಷೆಯೊಂದಿಗೆ ಹೆತ್ತವರ ವಿರೋಧವೂ ತಣ್ಣಗಾಗಿತ್ತು.

ದಾಖಲಾತಿ ಆಗುತ್ತಿಲ್ಲ
ಹೊಸ ಶೈಕ್ಷಣಿಕ ವರ್ಷ ಆರಂಭವಾಗಲು ಇನ್ನಿರುಧಿವುದು ಕೇವಲ ಎಂಟು ದಿನ. ಆದರೆ ಈ ಶಾಲೆ ಬಾಗಿಲು ಹಾಕಿಕೊಂಡಿದೆ. ಹೊಸ ಸೇರ್ಪಡೆಧಿಗೆಂದು ಮಕ್ಕಳು ಬಂದರೆ ಅವರನ್ನು ಸೇರಿಸಿಧಿಕೊಳ್ಳುವ ವ್ಯವಸ್ಥೆ ಇಲ್ಲಿಲ್ಲ. ಕಳೆದ ವರ್ಷ ಇಲ್ಲಿ ಓದುತ್ತಿದ್ದ ಮಕ್ಕಳಿಗೆ ಆಗಲೇ ವರ್ಗಾವಣೆ ಪ್ರಮಾಣ ಪತ್ರ ಕೊಟ್ಟು ಬೇರೆ ಶಾಲೆಧಿಗಳಿಗೆ ಕಳುಹಿಸಿಕೊಡಲಾಗಿದೆ. ಇಲ್ಲಿ ಹೊಸ ದಾಖಲಾತಿಯೇ ಆಗದ ಪರಿಣಾಮ ಶಾಲೆ ಮುಚ್ಚುವುದು ನಿಶ್ಚಿತ.

ಸಮಸ್ಯೆಯ ಸರಮಾಲೆ
1965ರಲ್ಲಿ ಮಂಜೂರುಗೊಂಡ ಈ ಶಾಲೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ, ದೇವಸ್ಥಾನದ ಕಟ್ಟಡದಲ್ಲಿ ಆರಂಭಗೊಂಡಿತು. ದೇಗುಲ ವಠಾರ ಶಾಲೆ ಎಂದೇ ಇದು ಪ್ರತೀತಿ. 50 ವರ್ಷಧಿಗಳ ಬಳಿಕವೂ ಆರಂಭದ ದಿನಗಳ ಸಮಸ್ಯೆಧಿಯಿಂದ ಈ ಶಾಲೆಗೆ ಮುಕ್ತಿ ಸಿಗಲೇ ಇಲ್ಲ. 2016ರ ಮಳೆಗಾಲದಲ್ಲಿ ಮಳೆಯ ಅವಾಂತರ ಹೆಚ್ಚಾದಾಗ ತರಗತಿಧಿಯನ್ನೇ ಪಕ್ಕದಲ್ಲಿರುವ ದೇವಸ್ಥಾನ ಭೋಜನಧಿಶಾಲೆಗೆ ವರ್ಗಾಯಿಸಲಾಗಿತ್ತು. ಕಳೆದ ವರ್ಷ ಶಾಲೆಯಲ್ಲಿ ಮಕ್ಕಳಿಗೆ ಅಸುರಕ್ಷತೆ ಇರುವ ಕಾರಣ ವಿದ್ಯಾರ್ಥಿಗಳನ್ನು ಬೇರೆಡೆಗೆ ಸೇರಿಸಲಾಗಿತ್ತು.

Advertisement

10 ಸೆಂಟ್ಸ್‌ ಜಾಗ ಮಂಜೂರಾಗಿತ್ತು
ಈ ಶಾಲೆಯ ಜಮೀನು ಮತ್ತು ಕಟ್ಟಡ ಎಲ್ಲವೂ ದೇವಾಲಯದ ಸೊತ್ತಾಗಿರುವ ಕಾರಣ ಪುರಸಭಾ ಅವಧಿಯಲ್ಲಿ ಶಾಲೆಗೆಂದೇ ಕೊಂಬೆಟ್ಟುವಿನಲ್ಲಿ ಹತ್ತು ಸೆಂಟ್ಸ್‌ ಸ್ಥಳ ಕಾದಿರಿಸಲಾಗಿತ್ತು. ಕಟ್ಟಡ ಕಟ್ಟಲು ಅನುದಾನ ಮಂಜೂರಾಗಿತ್ತು. ಆದರೆ ಅಲ್ಲಿ ಕಟ್ಟಡ ನಿರ್ಮಾಣ ಆಗಲಿಲ್ಲ. ಹೆತ್ತವರು ಕೂಡ ದೇಗುಲದ ವಠಾರದ ಕಟ್ಟಡದಲ್ಲೇ ಮಕ್ಕಳನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಆದರೆ ಈ ಕಟ್ಟಡದಲ್ಲಿ ಮಕ್ಕಳಿಗೆ ಅಸುರಕ್ಷಿತ ಪರಿಸ್ಥಿತಿ ಇರುವ ಕಾರಣ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಹೀಗಾಗಿ ಈಗಿರುವ ಕಟ್ಟಡದಲ್ಲಿ ಶಾಲೆ ನಡೆಸುವುದು ಅಸಾಧ್ಯ ಅನ್ನುವುದು ಶಿಕ್ಷಣ ಇಲಾಖೆಯ ವಾದ.

ವರದಿಗೆ ಸೂಚನೆ
ಕಳೆದ ಶೈಕ್ಷಣಿಕ ವರ್ಷದಲ್ಲಿ ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸಿದ್ದು ನಿಜ. ಹಾಗೆಂದು ದೇಗುಲ ವಠಾರ ಶಾಲೆಯನ್ನು ಅಧಿಕೃತವಾಗಿ ಮುಚ್ಚಲಾಗಿಲ್ಲ. ಈ ಹೊಸ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಸೇರ್ಪಡೆಯಾಗುವ ಮಕ್ಕಳಿದ್ದಾರೆಯೇ? ಇದ್ದರೆ ಅವರನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ತತ್‌ಕ್ಷಣ ವರದಿ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ತಾ.ಪಂ ಇಒ ಕಳೆದ ತಾ.ಪಂ. ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಂಚಾಯತ್‌ ರಾಜ್‌ ಇಲಾಖೆ ಎಂಜಿನಿಯರ್‌ ಕಟ್ಟಡ ಪರಿಶೀಲಿಸಿ ಕಟ್ಟಡ ಅಸುರಕ್ಷಿತವಾಗಿದೆ ಎಂದು ತಾ.ಪಂ.ಗೆ ವರದಿ ಸಲ್ಲಿಸಿದೆ.

ಘಟಾನುಘಟಿಗಳಿದ್ದೂ  ಏನು ಪ್ರಯೋಜನ?
ಪುತ್ತೂರಿನಿಂದ ಜನಪ್ರತಿನಿಧಿಗಳಾಗಿ ಆಯ್ಕೆಯಾದವರೂ ಉನ್ನತ ಸ್ಥಾನಕ್ಕೇರಿದ್ದಾರೆ. ಕೇಂದ್ರ, ರಾಜ್ಯ ಸರಕಾರದಲ್ಲಿ ಗುರುತರ ಸ್ಥಾನದಲ್ಲಿದ್ದಾರೆ. ಜತೆಗೆ ತಾಲೂಕು ಜಿಲ್ಲಾ ಕೇಂದ್ರವಾಗುವ ಉತ್ಸಾಹದಲ್ಲಿದೆ. ಇಷ್ಟೆಲ್ಲ ಇದ್ದರೂ ಸರಕಾರಿ ಶಾಲೆಗೊಂದು ಸ್ವಂತ ಜಾಗ, ಕಟ್ಟಡ ನಿರ್ಮಿಸಲು ಪುತ್ತೂರಿನಿಂದ ಆಯ್ಕೆಗೊಂಡ ಯಾವ ಜನಪ್ರತಿನಿಧಿಗೂ ಸಾಧ್ಯವಾಗದಿರುವುದು ಖೇದದ ಸಂಗತಿ ಅನ್ನುತ್ತಾರೆ ಶಿಕ್ಷಣಾಭಿಮಾನಿಗಳು.

ವರದಿ ನೀಡಿದ್ದಾರೆ
ಕಳೆದ ಕೆಡಿಪಿ ಸಭೆಯಲ್ಲಿ ಶಾಲೆಯ ಬಗ್ಗೆ ಚರ್ಚೆ ನಡೆದಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗೂ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಪಂಚಾಯತ್‌ ರಾಜ್‌ ಇಲಾಖೆ ಎಂಜಿನಿಯರ್‌ ಕಟ್ಟಡ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕಟ್ಟಡ ಸುರಕ್ಷಿತವಾಗಿಲ್ಲ ಎಂದು ವರದಿ ನೀಡಿದ್ದಾರೆ. ಶಿಕ್ಷಣ ಇಲಾಖೆಯಿಂದ ತಾ.ಪಂ. ಕಚೇರಿಗೆ ಆ ವರದಿ ಸಲ್ಲಿಸಲಾಗಿದೆ.     

– ಜಗದೀಶ್‌ ಎಸ್‌., ಕಾರ್ಯನಿರ್ವಾಹಕ ಅಧಿಕಾರಿ, ಪುತ್ತೂರು  ತಾ.ಪಂ.

–  ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next