Advertisement

ಗ್ರಾಮಗಳಿಗೆ ಶಾಶ್ವತ ಕುಡಿವ ನೀರು ಸರಬರಾಜು

12:57 PM Dec 27, 2019 | Suhan S |

ಬೇಲೂರು: ಯಗಚಿ ಜಲಾಶಯದಿಂದ ಬಂಟೇನ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮ ಗಳಿಗೆ ಶಾಶ್ವತ ಕುಡಿವ ನೀರಿನ ಯೋಜನೆ ರೂಪಿಸಲಾಗುವುದು ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಅವರು ತಿಳಿಸಿದರು.

Advertisement

ತಾಲೂಕಿನ ಬಂಟೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತುಂಬಾ ತೊಂದರೆ ಉಂಟಾಗಿದ್ದು, ನೀರಿನ ಬವಣೆ ನೀಗಿಸಲು ಯಗಚಿ ಜಲಾಶಯದಿಂದ ಶಾಶ್ವತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಕೆರೆ ತುಂಬಿಸುವ ಯೋಜನೆ: ಹನಿಕೆ, ಬಂಟೇನ ಹಳ್ಳಿ, ಹೆಬ್ಟಾಳು, ರಾಜನಶಿರಿ ಯೂರು, ಗ್ರಾಮ ಗಳಿಗೆ ಯಗಚಿ ಜಲಾಶಯದಿಂದ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸುವ ಯೋಜನೆ ರೂಪಿಸಲಾಗಿದ್ದು, ಪಟ್ಟಣದ ಸಮೀಪವಿರುವ ರಾಯಪುರ ಗ್ರಾಮಕ್ಕೆ ಪಟ್ಟಣದ ಹೊಸನಗರ ಬಡಾವಣೆಯಿಂದ ನೀರು ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

20 ಕೋಟಿ ರೂ. ಅನುದಾನ: ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಹಿಂದಿನ ಸಮಿಶ್ರ ಸರ್ಕಾರ 150 ಕೋಟಿ ರೂ. ಅನುದಾನ ಬಿಡುಗಡೆಗೊಳಿತ್ತು. ಅದರೆ ಇಂದಿನ ಬಿಜೆಪಿ ಸರ್ಕಾರ ಅನುದಾನವನ್ನು ತಡೆ ಹಿಡಿದಿದ್ದರಿಂದ ಅಭಿವೃದ್ಧಿ ಕುಂಠಿತಗೊಂಡಿದ್ದು, ಸರ್ಕಾರದಲ್ಲಿ ತಡೆಹಿಡಿದಿರುವ ಅನುದಾನವನ್ನು ಬಿಡುಗಡೆಗೊಳಿಸಿ ಎಂದು ಮನವಿ ಮಾಡಿದ್ದು, ಮನವಿಗೆ ಸ್ಪಂದಿಸಿ 20 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಉಳಿದ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಗೊಳಿಸುವ ವಿಶ್ವಾಸವಿದೆ ಎಂದು ಶಾಸಕರು ಹೇಳಿದರು.

ಅಕ್ರಮ ಸಕ್ರಮ ಯೋಜನೆ: ಗ್ರಾಮೀಣ ಭಾಗದಲ್ಲಿ ವಾಸಕ್ಕೆ ಮನೆ ಇಲ್ಲ ಎಂಬ ಕೂಗು ಎಲ್ಲಡೆ ಕೇಳಿ ಬರುತಿದೆ. ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಕೊಂಡವರಿಗೆ ಅಕ್ರಮ ಸಕ್ರಮ ಯೋಜನೆಯಲ್ಲಿ ಸಕ್ರಮಗೊಳಿಸಿ ಹಕ್ಕು ಪತ್ರ ನೀಡಲಾಗುವುದು. ಆದರೆ ಕೆಲವರು ಮನೆ ನಿರ್ಮಿಸದೇ ಕೇವಲ ಜಾಗವನ್ನು ಬಳಸಿ ಕೊಂಡಿದ್ದರೆ ಅಂತಹವರಿಗೆ ಹಕ್ಕು ಪತ್ರ ನೀಡಲು ಬರುವುದಿಲ್ಲ ಎಂದು ತಿಳಿಸಿದರು.

Advertisement

ಗ್ರಾಮೀಣ ಸಮಸ್ಯೆ ನಿವಾರಿಸಿ: ಜಿಲ್ಲಾ ಪಂಚಾಯಿತಿ ಸದಸ್ಯ ಸೈಯದ್‌ ತೋಫಿಕ್‌ ಮಾತನಾಡಿ, ಬಂಟೇನ ಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಅವರ ಕಾರ್ಯ ವೈಖರಿಗೆ ಪಂಚಾಯಿತಿಗೆ 2 ವರ್ಷದಿಂದ ಗಾಂಧಿ ಪುರಸ್ಕೃತ ಪ್ರಶಸ್ತಿ ಬಂದಿದೆ. ಗ್ರಾಮೀಣ ಭಾಗದ ಸಮಸ್ಯೆ ನಿವಾರಣೆಗೆ ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಾಗಬೇಕು ಎಂದರು.

ತಾಲೂಕು ಪಂಚಾಯಿತಿ ಸದಸ್ಯ ಮಂಜು ನಾಥ್‌ ಮಾತನಾಡಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆ ರೂಪಿಸಿದೆ. ಗಾಮದ ಅಭಿವೃದ್ಧಿ ಜೊತೆಯಲ್ಲಿ ವೈಯಕ್ತಿಕ ಕಾಮಗಾರಿಗಳಿಂದ ಜನರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದ ಅವರು, ಸರ್ಕಾರ ಬಡವರ ಅಭಿವೃದ್ಧಿ ಮತ್ತು ಏಳಿಗೆಗೆ ವಾರ್ಡ್‌ಸಭೆ ಮತ್ತು ಗ್ರಾಮ ಸಭೆಗಳನ್ನು ನಡೆಸುತ್ತಿದೆ. ಸಭೆಗಳಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಇದರ ಉಪಯೋಗವನ್ನು ಗ್ರಾಮೀಣ ಜನರು ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲತೀಫ್, ಉಪಾಧ್ಯಕ್ಷೆ ಚಂದ್ರಮ್ಮ, ತಾಲೂಕು ಮಟ್ಟದ ಅಧಿಕಾರಿಗಳಾದ ರವಿಕುಮಾರ್‌, ಬಸವರಾಜ್‌, ಅಭಿವೃದ್ಧಿ ಅಧಿಕಾರಿ ರಾಜಶೇಖರ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next