ಬೆಂಗಳೂರು: ಶಾಲೆಗಳಲ್ಲಿ ಪ್ರತಿನಿತ್ಯ ಪ್ರಾರ್ಥನೆಯ ಅವಧಿಯಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿ ಹೇಳುವ ಮತ್ತು ಉಪಸ್ಥಿತರೆಲ್ಲರೂ ಪುನರ್ ಉಚ್ಚರಿಸುವ ವ್ಯವಸ್ಥೆಯನ್ನು ಜಾರಿ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ರಾಜ್ಯ ಸರ್ಕಾರ ಸೂಚಿಸಿದೆ.
ಶಾಲಾ ವ್ಯಾಪ್ತಿಯಲ್ಲಿರುವ ಸಂವಿಧಾನ ತಜ್ಞರನ್ನು ಶಾಲೆಗೆ ಆಹ್ವಾನಿಸಿ ಅವರಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದೆ. ಜತೆಗೆ, ಸಂವಿಧಾನ ದಿನಾಚರಣೆ ಅಭಿಯಾನದ ಕುರಿತು ಚಿಲ್ಡ್ರನ್ ಮೂಮೆಂಟ್ ಫಾರ್ ಸಿವಿಕ್ ಅವೆರ್‌ನೆಸ್(ಸಿಎಂಸಿಎ) ಸಂಸ್ಥೆ ಹೊರತಂದಿದ್ದ ಸಂವಿಧಾನ ದಿನದ ಅಭಿಯಾನ 2019-20 ಕೈಪಿಡಿಯನ್ನು ಸರ್ಕಾರ ಹಿಂದಕ್ಕೆ ಪಡೆದಿದೆ.
ಅಲ್ಲದೆ, ಈ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಈ ಕೈಪಿಡಿಯ ಯಾವುದೇ ಸಾಫ್ಟ್ ಪ್ರತಿ ಅಥವಾ ಹಾರ್ಡ್ ಪ್ರತಿಗಳು ಇದ್ದಲ್ಲಿ ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸಬೇಕು. ಯಾವುದೇ ಕಾರಣಕ್ಕೂ ಅದನ್ನು ಉಪಯೋಗಿಸಬಾರದು. ಈ ಸಂಸ್ಥೆಯ ಸಹಯೋಗದೊಂದಿಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದಂತೆ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಸಿಎಂಸಿಎ ಖಾಸಗಿ ಸಂಸ್ಥೆ ಸಹಯೋಗದೊಂದಿಗೆ ನ.26ರಂದು ಭಾರತ ಸಂವಿಧಾನ ದಿನಾಚರಣೆಯನ್ನು ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಆಚರಿಸಲು ಮುಂದಾಗಿತ್ತು. ಸಿಎಂಸಿಎ ಖಾಸಗಿ ಸಂಸ್ಥೆಯು ಕಾರ್ಯಕ್ರಮದ ರೂಪುರೇಷೆಗಳನ್ನು ಬರೆದಿತ್ತು.
ಈ ಖಾಸಗಿ ಸಂಸ್ಥೆಯ ಬರವಣಿಗೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಒಬ್ಬರೇ ಸಂವಿಧಾನವನ್ನು ಬರೆದಿಲ್ಲ ಎಂದು ತನ್ನ 48ಪುಟಗಳ ಬರವಣಿಗೆಯಲ್ಲಿ ಮೊದಲನೇ ಪುಟದ ಮೊದಲನೇ ಸಾಲಿನಲ್ಲಿ ಈ ಅಂಶವನ್ನು ನಮೂದಿಸಿತ್ತು. ಇದರಿಂದ ಜನರ ಭಾವನೆಗೆ ಧಕ್ಕೆ ಉಂಟಾಗಿ ಹಲವಾರು ಮಂದಿ ಈ ಸಂಸ್ಥೆಯನ್ನು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದೆ.