Advertisement

ಆನೆ ಹಾವಳಿ ಶಾಶ್ವತ ತಡೆ: ಪ್ರಸ್ತಾವನೆಗೆ ಸೂಚನೆ

06:00 AM Dec 05, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಆನೆ ದಾಳಿಯಿಂದ ಜನರ ಸಾವು-ನೋವು ಸಂಭವಿಸುವುದನ್ನು ತಡೆಯಲು ಶಾಶ್ವತ ಪರಿಹಾರ ಕಾರ್ಯಗಳ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಗಳಲ್ಲಿ ಕಾಡಾನೆ ಹಾವಳಿಯಿಂದ ತೊಂದರೆಗೊಳಗಾದ ರೈತರ ಸಮಸ್ಯೆಗಳು ಹಾಗೂ ಪರಿಹಾರೋ ಪಾಯ ಕುರಿತಂತೆ ಚರ್ಚಿಸಲು ವಿಧಾನಸೌಧದಲ್ಲಿ ಮಂಗಳವಾರ ಆಯೋಜನೆಯಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆ ನೀಡಿದರು. ಆನೆಗಳ ಹಾವಳಿಯಿಂದಾಗಿ ಅಪಾರ ಪ್ರಮಾಣದಲ್ಲಿ ಭತ್ತ, ಬಾಳೆ, ಅಡಿಕೆ, ಕಾಫಿ ಬೆಳೆ ಹಾನಿಯಾಗಿದೆ. ಕೂಡಲೇ ಮಾನವ-ಆನೆ ಸಂಘರ್ಷ ತಪ್ಪಿಸಲು ವೈಜ್ಞಾನಿಕ ಕ್ರಮ ಕೈಗೊಳ್ಳ ಬೇಕೆಂದು ರೈತರು ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು, ದೇಶದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಸುಮಾರು 6,000 ಆನೆಗಳಿವೆ. ಬೆಳೆ ಹಾನಿ ಮಾಡುವ ಆನೆಗಳನ್ನು ಹಿಡಿದು ಶಿಬಿರಗಳಿಗೆ ಕಳುಹಿಸಲು ಹೊರ ರಾಜ್ಯಗಳಿಂದ ತಜ್ಞರನ್ನು ಕರೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಡಾನೆಗಳ ಹಾವಳಿ ತಡೆಗೆ ಈವರೆಗೆ 71
ಕಿ.ಮೀ.ಉದ್ದದ ರೈಲು ತಡೆಗೋಡೆ ನಿರ್ಮಾಣ ವಾಗಿದೆ. ಬಜೆಟ್‌ನಲ್ಲಿ 50 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದ್ದು, ಅದರಲ್ಲಿ
ರಾಜ್ಯದಲ್ಲಿ ಅಗತ್ಯವಿರುವ 400ರಿಂದ 500 ಕಿ.ಮೀ.ಉದ್ದದ ತಡೆಗೋಡೆ ನಿರ್ಮಾಣ ಸಾಧ್ಯವಿಲ್ಲ. ಹಾಗಾಗಿ, ಮೂರ್‍ನಾಲ್ಕು ವರ್ಷಗಳಿಗೆ
ಅಗತ್ಯವಿರುವ ಆರ್ಥಿಕ ನೆರವಿನ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಆದೇಶಿಸಿದರು.

ರೈಲ್ವೆ ಇಲಾಖೆಯಿಂದ ಕಬ್ಬಿಣದ ಕಂಬಿಗಳ ಖರೀದಿ ಬೆಲೆ ದುಬಾರಿಯಾಗಿದೆ. ಬೇರೆ ಪ್ರದೇಶಗಳಿಂದ ಕಂಬಿ ಸಾಗಣೆ ಮಾಡಿದರೆ 
ಹೆಚ್ಚುವರಿ ಸಾರಿಗೆ ವೆಚ್ಚ ಸೇರ್ಪಡೆಯಾಗುತ್ತದೆ. ಹಾಗಾಗಿ, ರಿಯಾಯ್ತಿ ಬೆಲೆಯಲ್ಲಿ ರೈಲು ಕಂಬಿ ನೀಡುವಂತೆ ರೈಲ್ವೆ ಇಲಾಖೆಗೆ ಮನವಿ
ಸಲ್ಲಿಸಬೇಕು. ರೈಲು ತಡೆಗೋಡೆಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ವಿಸ್ತೃತ ಪ್ರಸ್ತಾವ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದರು. ಈ ಸಂಬಂಧ ದೆಹಲಿಗೆ ತೆರಳಿ ಕೇಂದ್ರ ಅರಣ್ಯ ಸಚಿವ ಡಾ.ಹರ್ಷವರ್ಧನ್‌ ಅವರನ್ನು ಭೇಟಿ ಮಾಡಿ ನೆರವು ನೀಡುವಂತೆ ಕೋರಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು. 

ಸಚಿವರಾದ ಎಚ್‌.ಡಿ.ರೇವಣ್ಣ, ಆರ್‌. ಶಂಕರ್‌, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ರೈತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next