Advertisement
ನಗರದ ಪಾದಾಚಾರಿ ಮಾರ್ಗ, ರಾಜಕಾಲುವೆ, ಧಾರ್ಮಿಕ ಕೇಂದ್ರಗಳು, ರುದ್ರಭೂಮಿ, ವಸತಿ ಕಟ್ಟಡಗಳು ಹೀಗೆ ಎಲ್ಲೆಂದರಲ್ಲಿ ಅಳವಡಿಸಿರುವ ಹೋರ್ಡಿಂಗ್‌ಗಳಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಜತೆಗೆ ಜಾಹೀರಾತು ಫಲಕಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂಬ ಆರೋಪಗಳಿವೆ. ಆ ಹಿನ್ನೆಲೆಯಲ್ಲಿ ಜಾಹೀರಾತು ಫಲಕಗಳನ್ನು ಶಾಶ್ವತವಾಗಿ ನಿಷೇಧಿಸುವ ಮೂಲಕ ಬೆಂಗಳೂರಿನ ಅಂದ ಹೆಚ್ಚಿಸುವತ್ತ ಹಾಗೂ ಜನರ ಪ್ರಾಣ ರಕ್ಷಿಸುವತ್ತ ದಿಟ್ಟ ಹೆಜ್ಜೆ ಇರಿಸಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ.
Related Articles
Advertisement
ಈ ಸೌಂದರ್ಯವನ್ನು ಹೀಗೇ ಮುಂದುವರಿಸಿಕೊಂಡು ಹೋಗುವಂತೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ, ಸಲಹೆಗಳು ಬಂದಿವೆ. ಆ ಹಿನ್ನೆಲೆಯಲ್ಲಿ ಸರ್ಕಾರಿ ಜಾಹೀರಾತು ಫಲಕಗಳನ್ನು ಹೊರತುಪಡಿಸಿ ಉಳಿದೆಲ್ಲ ರೀತಿಯ ಜಾಹೀರಾತು ಫಲಕಗಳು, ಪ್ರದರ್ಶನವನ್ನು ಶಾಶ್ವತವಾಗಿ ನಿಷೇಧಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪಾಲಿಕೆಯ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಸ್ಕೈವಾಕ್, ಬಸ್‌ಶೆಲ್ಟರ್ ಗೊಂದಲ: ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ ಹಾಗೂ ಪ್ರದರ್ಶನವನ್ನು ಶಾಶ್ವತವಾಗಿ ನಿಷೇಧಿಸಲು ಪಾಲಿಕೆ ನಿರ್ಧರಿಸಿದ ಬೆನ್ನಲ್ಲೇ ಹೊಸ ಗೊಂದ ಶುರುವಾಗಿದೆ. ಆದರೆ, ಈಗಾಗಲೇ ನಗರದ ನೂರಾರು ಕಡೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ನಿರ್ಮಿಸಿದ ಸ್ಕೈವಾಕ್ ಹಾಗೂ ಬಸ್ ಶೆಲ್ಟರ್‌ಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡುವ ಕುರಿತಂತೆ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಪಾಲಿಕೆ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಬಳಿಕ ಆಯುಕ್ತರು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಜಾಹೀರಾತು ಫಲಕಗಳು ಸೇಫ್!: ಪಾಲಿಕೆಯ ವ್ಯಾಪ್ತಿಯಲ್ಲಿ ಈಗಾಗಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂರಾರು ಅಧಿಕೃತ ಜಾಹೀರಾತು ಫಲಕಗಳಿವೆ. ಸರ್ಕಾರದ ವಿವಿಧ ಯೋಜನೆ, ಕಾರ್ಯಕ್ರಮಗಳ ಕುರಿತು ಜನರಿಗೆ ಮಾಹಿತಿ ನೀಡಲು ಈ ಫಲಕಗಳನ್ನು ಬಳಸಲಾಗುತ್ತಿದೆ. ಜತೆಗೆ ಪಲ್ಸ್ ಪೋಲಿಯೋ, ಇಂದ್ರ ಧನುಷ್ ಲಸಿಕೆ, ಜಂತುಹುಳ ಅಭಿಯಾನ, ಸ್ವತ್ಛ ಭಾರತ ಅಭಿಯಾನ ಸೇರಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತಹ ಜಾಹೀರಾತುಗಳನ್ನು ಮಾತ್ರ ಪ್ರಕಟಿಸಲಾಗುತ್ತಿದೆ. ಹೀಗಾಗಿ ಇಂತಹ ಫಲಕಗಳಿಗೆ ವಿನಾಯಿತಿ ನೀಡಲು ಪಾಲಿಕೆ ತೀರ್ಮಾನಿಸಿದೆ ಎನ್ನಲಾಗಿದೆ.
* ವೆಂ. ಸುನೀಲ್ ಕುಮಾರ್