ಬೆಂಗಳೂರು: ಉಳ್ಳಾಲ, ಸೋಮೇಶ್ವರ, ಉಚ್ಚಿಲ-ಬಟ್ಟಪಾಡಿ ಸಮುದ್ರ ತೀರದಲ್ಲಿ ಉಂಟಾಗುತ್ತಿರುವ ಕಡಲಕೊರೆತ ತಡೆಗಟ್ಟಲು ಶಾಶ್ವತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಮೀನುಗಾರಿಕೆ ಹಾಗೂ ಬಂದರು ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ್ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಸೋಮೇಶ್ವರದಲ್ಲಿ ಸರಪಳಿ 3.600ರಿಂದ 3.900 ಕಿ.ಮೀ. ವರೆಗೆ 2.90 ಕೋಟಿ ರೂ. ಮೊತ್ತದಲ್ಲಿ ಹಾಗೂ ಸರಪಳಿ 4.100ರಿಂದ 4.450ರ ವರೆಗೆ 2.10 ಕೋಟಿ ರೂ. ಮೊತ್ತದ ಸಮುದ್ರ ಕೊರತೆ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಅನುಮೋದನೆ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಬಟ್ಟಪಾಡಿ ಪ್ರದೇಶದಲ್ಲಿ ಮಳೆಗಾಲದಲ್ಲಿ ಉಂಟಾಗಬಹುದಾದ ಹೆಚ್ಚಿನ ಹಾನಿ ತಪ್ಪಿಸಲು ರಾಜ್ಯ ವಿಪತ್ತು ಪರಿಹಾರ ನಿಧಿಯಡಿ 55 ಲಕ್ಷ ರೂ. ವೆಚ್ಚದಲ್ಲಿ 100 ಮೀಟರ್ ಉದ್ದದ ತುರ್ತು ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಉಳ್ಳಾಲ ಮತ್ತು ಸೋಮೇಶ್ವರ ಪ್ರದೇಶದ ಸಮುದ್ರ ಕೊರೆತಕ್ಕೆ ಸಂಬಂಧಿಸಿ ಏಶಿಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಈಗಾಗಲೇ ಸುಸ್ಥಿರ ಕರಾವಳಿ ತೀರ ರಕ್ಷಣೆ ಮತ್ತು ನಿರ್ವಹಣ ಯೋಜನೆ ಚಾಲ್ತಿಯಲ್ಲಿದೆ. ಇದರಡಿ 246 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಉಚ್ಚಿಲ, ಬಟ್ಟಪಾಡಿ, ಮೀನಕಳಿ ಮತ್ತು ಸುರತ್ಕಲ್ ಲೈಟ್‌ಹೌಸ್ ಪ್ರದೇಶದಲ್ಲಿ ಸಂಪರ್ಕ ರಸ್ತೆ ಪುನರ್‌ನಿರ್ಮಾಣಕ್ಕೆ 5 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಪ್ರದೇಶದಲ್ಲಿ ಕಡಲ ಕೊರೆತದಿಂದ ಆಗುವ ಅನಾಹುತಗಳನ್ನು ತಡೆಗಟ್ಟಲು 500 ಮೀಟರ್ ಉದ್ದದ ತಡೆಗೋಡೆ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಸಚಿವರು ತಿಳಿಸಿದರು.
ಮೀನುಗಾರರಿಗೆ 5 ಸಾವಿರ ಮನೆ
ವಸತಿ ರಹಿತ ಮೀನುಗಾರರಿಗೆ 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ 5 ಸಾವಿರ ಮನೆಗಳನ್ನು ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಎಂ. ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2022-23ನೇ ಸಾಲಿನ ಬಜೆಟ್‌ನಲ್ಲಿ 5 ಸಾವಿರ ವಸತಿ ರಹಿತ ಮೀನುಗಾರರಿಗೆ ರಾಜೀವಗಾಂಧಿ ವಸತಿ ನಿಗಮದ ಮೂಲಕ ಮನೆಗಳನ್ನು ನಿರ್ಮಿಸಲು ಹೇಳಲಾಗಿತ್ತು. ಆದರೆ ಯೋಜನೆಯು ರಾಜೀವಗಾಂಧಿ ವಸತಿ ನಿಗಮದಿಂದ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ-ಮಂಗಳೂರು ಇದಕ್ಕೆ ವರ್ಗಾಯಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.