Advertisement
ಸಿಂಡಿಕೇಟ್ ಬ್ಯಾಂಕಿನ ಎದುರು ಕೊಳಚೆ ನೀರು ಶೇಖರಣೆಯಾಗಿದ್ದು, ಬ್ಯಾಂಕಿನ ಗ್ರಾಹಕರು, ಸಿಬಂದಿ, ಪರಿಸರದ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.ಈ ಕುರಿತು ಸ್ಥಳೀಯರು ಸಂಬಂಧಪಟ್ಟ ಅಧಿಕಾರಿ ಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ; ಸ್ವತ್ಛತೆ ಭಾಷಣಕ್ಕೆ ಮಾತ್ರ ಸೀಮಿತವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಇಲ್ಲಿ ಹಿಂದಿನಿಂದಲೂ ಕೊಳಚೆ ನೀರನ್ನು ನೇರವಾಗಿ ಮಳೆ ನೀರಿನ ಚರಂಡಿಗೆ ಹರಿದು ಬಿಡಲಾಗುತ್ತಿತ್ತು. ಆದರೆ ಚರಂಡಿಯ ಸುತ್ತ ಹುಲ್ಲು, ಪೊದೆಗಳು ಆವರಿಸಿದ್ದರಿಂದ ಕೊಳಚೆ ಯಾರ ಗಮನಕ್ಕೂ ಬರುತ್ತಿರಲಿಲ್ಲ; ತೀವ್ರತರದ ಸಮಸ್ಯೆ ಎನಿಸಿರಲಿಲ್ಲ. ಆದರೆ ಕಳೆದ ವರ್ಷ ರಾ.ಹೆ. 169ಎ ವಿಸ್ತರಣೆ ಸಂದರ್ಭ ಮಳೆ ನೀರಿನ ಚರಂಡಿಯನ್ನು ಅಗೆದು ಪರಿಸರವನ್ನೆಲ್ಲ ಸಮತಟ್ಟು ಮಾಡಲಾಗಿತ್ತು. ನಗರಸಭೆಯಾಗಲೀ ಪೇಟೆಯ ಹೊಟೇಲ್, ಅಂಗಡಿಯವರಾಗಲಿ ತ್ಯಾಜ್ಯ ನೀರಿನ ವಿಲೇವಾರಿಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲ. ರಾತ್ರಿ ವೇಳೆ ಕೊಳಚೆ ನೀರಿನ ಹರಿವು ಹೆಚ್ಚಿರುತ್ತದೆ. ಹೆದ್ದಾರಿ ಬದಿ ಪಾಚಿಕಟ್ಟಿದೆ. ಹುಳಗಳು ಹುಟ್ಟಿ ಕೊಂಡು ಸಾಂಕ್ರಾಮಿಕ ರೋಗದ ಭೀತಿಯೂ ಇದೆ. ಸಾರ್ವಜನಿಕರು ನಡೆದಾಡುವಾಗ ಮೂಗು ಮುಚ್ಚಿ ಕೊಳ್ಳಬೇಕಿದೆ. ಬ್ಯಾಂಕ್ ಗ್ರಾಹಕರಂತೂ ಕೊಳಚೆಯ ಪ್ರವಾಹವನ್ನು ಜಿಗಿದೇ ದಾಟಬೇಕಿದೆ.
Related Articles
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕೊಳಚೆ ನೀರು ರಸ್ತೆ ಬದಿಯಲ್ಲೇ ಹರಿಯುತ್ತಿದೆ. ಮಳೆಗಾಲದಲ್ಲಿ ಹರಿಯುವ ನೀರಿನೊಂದಿಗೆ ಕೊಳಚೆ ನೀರೂ ಬೆರತು ಹೋಗುತ್ತಿತ್ತು. ಆದರೆ ಇದೀಗ ಬೇಸಗೆಯಲ್ಲಿ ಕೊಳಚೆ ನೀರು ರಸ್ತೆಯ ಬದಿಯಲ್ಲಿ ನಿಂತು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಮನ ಹರಿಸಬೇಕು.
-ಗುರುರಾಜ್ ಶೆಟ್ಟಿ,ಪರ್ಕಳ ನಿವಾಸಿ
Advertisement
ಗಮನಕ್ಕೆ ಬಂದಿದೆಪರ್ಕಳ ಪೇಟೆಯಲ್ಲಿ ಕೊಳಚೆ ನೀರನ್ನು ರಸ್ತೆಗೆ ಹರಿ ಬಿಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ನಗರಸಭೆ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
-ಸುಮಿತ್ರಾ ನಾಯಕ್, ನಗರಸಭೆ ಪರ್ಕಳ ವಾರ್ಡ್ ಸದಸ್ಯೆ,ಉಡುಪಿ