ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರ ಆರು ತಿಂಗಳ ಸರ್ಕಾರದ ಸಾಧನೆ ಶೂನ್ಯ. ಬರೀ ಹೇಳಿಕೆ, ಜಾಹಿರಾತಿಗೆ ಸೀಮಿತವಾಗಿದೆ. ಇವರು ಕೇಂದ್ರದಿಂದ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ, ರಾಜ್ಯದಲ್ಲಿ ಸಂಪನ್ಮೂಲ ಕ್ರೋಢೀಕರಿಸುವಲ್ಲೂ ವಿಫಲರಾಗಿದ್ದಾರೆ. ಅಭಿವೃದ್ಧಿ ಇವರ ಕಾಲದಲ್ಲಿ ಹಿಂದಕ್ಕೆ ಹೋಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕೆ ಸಾಲ ಪಡೆಯುವ ವ್ಯವಸ್ಥೆ ಜಾರಿಯಾಗಿತ್ತು. ವಿದ್ಯಾಸಿರಿ ಯೋಜನೆ ಮೂಲಕ ನೆರವು ಕೊಡುತ್ತಿದ್ದೆವು. ಅದನ್ನು ಈಗ ನಿಲ್ಲಿಸಿದ್ದಾರೆ. ವಿದ್ಯಾನಿಧಿ ಪೂರ್ಣ ಪ್ರಮಾಣದಲ್ಲಿ ಅನುಕೂಲವಾಗುತ್ತಿಲ್ಲ ಎಂದರು.
ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಏನೋ ಕ್ರಾಂತಿ ಆಗುತ್ತದೆಂದು ಹೇಳಿದ್ದರು. 2019-20 ರಲ್ಲಿ 650 ಕೋಟಿ ರೂ.ಇದ್ದ ಎಪಿಎಂಸಿಗಳ ಆದಾಯ ಈ ವರ್ಷದ ಜನವರಿಗೆ 106 ಕೋಟಿ ರೂ. ಗೆ ಕುಸಿದಿದೆ. ಇದು ಇವರ ಕ್ರಾಂತಿಕಾರಕ ಸುಧಾರಣೆಯ ಫಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಇದನ್ನೂ ಓದಿ:ನಾನು ಕಪಾಳಕ್ಕೆ ಹೊಡೆದಿಲ್ಲ, ಅವರೇ ಕುಡಿದಿರಬೇಕು: ಎಂ.ಪಿ.ಕುಮಾರಸ್ವಾಮಿ ಸ್ಪಷ್ಟನೆ
ಎಪಿಎಂಸಿ ಗೆ ಬರುವ ಆದಾಯ ರೈತರ ಸಂಕಷ್ಟ ಸಮಯದಲ್ಲಿ ಬೆಂಬಲ ಬೆಲೆಗೆ ನೆರವಾಗುತ್ತಿತ್ತು. ಈಗ ಎಪಿಎಂಸಿ ಕುತ್ತಿಗೆ ಕೊಯ್ದು ರೈತರಿಗೂ ಕಷ್ಟ ತಂದಿಟ್ಟಿದರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.