Advertisement

ಅತ್ಯಾಧುನಿಕ ಕೃಷಿ ಯಂತ್ರಗಳ ಪ್ರದರ್ಶನ

11:27 AM Nov 14, 2017 | |

ಬೆಂಗಳೂರು: ಬೆಂಗಳೂರು ಕೃಷಿ ಮೇಳಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಮೇಳದಲ್ಲಿ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿ ಕಾರ್ಮಿಕರ ಕೊರತೆಯಿಂದ ವ್ಯವಸಾಯ ಚಟುವಟಿಕೆಗಳ ಮೇಲಾಗುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಹೊಸ ಹೊಸ ಕೃಷಿ ಉಪಕರಣಗಳ ಬಳಕೆಯನ್ನ ರೈತರಿಗೆ ಮೇಳದಲ್ಲಿ ಪರಿಚಯಿಸಲಾಗುತ್ತದೆ.

Advertisement

ಗ್ರಾಮೀಣ ಭಾಗದಲ್ಲಿ ಕಾರ್ಮಿಕರು ಲಭ್ಯವಿಲ್ಲದೇ ಕೃಷಿ ಚಟುವಟಿಕೆ ಕುಂಠಿತಗೊಳ್ಳುತ್ತಿರುವುದಕ್ಕೆ ಪ್ರತಿಯಾಗಿ ಯಂತ್ರೋಪಕರಣಗಳನ್ನು ಬಳಸಿ ಕೃಷಿ ನಡೆಸುವ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಕೃಷಿ ವಿವಿ ಈ ಕ್ರಮ ಕೈಗೊಂಡಿದೆ. ಇದಲ್ಲದೆ, ಸಿರಿಧಾನ್ಯ ಮತ್ತು ಅದರ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಹಾಗೂ ಸಮಗ್ರ ಕೃಷಿ ಪದ್ಧತಿ ಜಾರಿಗೆ ಆದ್ಯತೆ ನೀಡಲು ಮುಂದಾಗಿರುವ ಕೃಷಿ ವಿವಿ, ಜಿಕೆವಿಕೆ ಆವರಣದಲ್ಲಿ ನ.16ರಿಂದ 19ರವರೆಗೆ ನಡೆಯಲಿರುವ ಕೃಷಿ ಮೇಳವನ್ನು ವಿಭಿನ್ನವಾಗಿ ಆಯೋಜಿಸಲಿದೆ. 

ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಈ ಮೇಳದಲ್ಲಿ ಸುಮಾರು 175ಕ್ಕೂ ಹೆಚ್ಚು ಮಳಿಗೆಗಳನ್ನು ಮೀಸಲಿಡಲಾಗಿದೆ. ಜಾನ್‌ ಡೀರ್‌ ಮಹೇಂದ್ರ ಆ್ಯಂಡ್‌ ಮಹೇಂದ್ರ ಸೇರಿದಂತೆ ರಾಷ್ಟ್ರದ ಅನೇಕ ಕೃಷಿ ಯಂತ್ರೋಪಕಗಳ ಕಂಪನಿಗಳು ಕೃಷಿ ಮೇಳದಲ್ಲಿ ಪಾಲ್ಗೊಳ್ಳಲಿವೆ. ಕೃಷಿ ವಿವಿ ವ್ಯಾಪ್ತಿಯ ರಾಜ್ಯ, ರಾಷ್ಟ್ರದ ಹಲವಡೆಗಳಿಗೆ ಲಕ್ಷಾಂತರ ರೈತರು ಮೇಳಕ್ಕೆ ಆಗಮಿಸಲಿದ್ದಾರೆ. 

ಸುಧಾರಿತ ರಾಸುಗಳ ಆಕರ್ಷಣೆ: ಸುಮಾರು 60 ಮಳಿಗೆಗಳಲ್ಲಿ ಹೈನುಗಾರಿಕೆ, ಮೇಕೆ, ಕುರಿ, ಕೋಳಿ, ಹಂದಿ ಮತ್ತು ಮೊಲದ ವಿವಿಧ ತಳಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರಲಿದೆ. ಕುರಿಗಳಲ್ಲಿ ಸುಧಾರಿತ ಸ್ಥಳೀಯ ರಾಸುಗಳಾದ ಡೆಕ್ಕಣಿ, ಕೆಂಗುರಿ,ಹಾಗೂ ವಿದೇಶಿ ತಳಿಗಳಾದ ರ್‍ಯಾಂಬುಲೆ, ಡಾಫ‌ರ್‌ ಮತ್ತು ಮೆರಿನೋ, ಮೇಕೆಯಲ್ಲಿ ಬ್ಲಾಕ್‌ ಬೆಂಗಾಲ್‌, ಜಮ್ನಪಾರಿ, ಶಿರೋಹಿ ಮತ್ತು ಬೀತಲ್‌ ತಳಿಗಳು ಮತ್ತು ಕೋಳಿಗಳಲ್ಲಿ ಕಾವೇರಿ, ಗಿರಿರಾಣಿ, ಸ್ವರ್ಣದಾರ, ಗಿರಿರಾಜ ಹಾಗೂ ನಾಟಿ ತಳಿಗಳ ಜತೆಗೆ ಹೆಚ್ಚು ಮಾಂಸವುಳ್ಳ ಮತ್ತು ರಕ್ತ ಕಪ್ಪು ಬಣ್ಣವಿರುವ ಖಡಕ್‌ನಾಥ್‌ ತಳಿಯ ಪ್ರದರ್ಶನ ಮಾರಾಟ ಇರಲಿದೆ.

ಸುಧಾರಿತ ತಳಿಗಳ ತಾಕು: ಹುರಳಿ, ನೆಲಗಡಲೆ, ಚೆಂಡು ಹೂವು, ಹನಿ ನೀರಾವರಿಯಲ್ಲಿ ದೊಣ್ಣೆ ಮೆಣಸಿನಕಾಯಿ, ತೊಗರಿ, ಹರಳು, ಪ್ಲಾಸ್ಟಿಕ್‌ ಹೊದಿಕೆಯಲ್ಲಿ ಬದನೆ, ನವಣೆ, ರಾಗಿ, ಸೂರ್ಯಕಾಂತಿ, ಅಲಸಂಡೆ, ಅರೆ ನೀರಾವರಿ ಭತ್ತದ ತಾಕುಗಳ ಪ್ರದರ್ಶನವೂ ಇದೆ. 

Advertisement

ನಾಡಿನ ಸಾಂಸ್ಕೃತಿಕ ಮತ್ತು ಜಾನಪದ ಕಲೆಗಳ ಪ್ರದರ್ಶನ ಕೃಷಿ ಮೇಳದಲ್ಲಿ ನಡೆಯಲಿದ್ದು, ಮೇಳಕ್ಕೆ ಆಗಮಿಸುವವರಿಗೆ ಸಾಂಸ್ಕೃತಿಕ ರಸದೌತಣ ನೀಡಲಿವೆ. ಕೋಲಾಟ, ಯಕ್ಷಗಾನ, ಗೊಂಬೆಯಾಟ, ತೊಗಲು ಗೊಂಬೆಯಾಟ, ಜನಪದ ಗೀತೆ ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 

ವಿವಿಧ ಪ್ರಶಸ್ತಿಗಳ ಪ್ರದಾನ: ಮೇಳದಲ್ಲಿ ರಾಜ್ಯಮಟ್ಟದ ಕೃಷಿ ಪ್ರಶಸ್ತಿಗಳಾದ ಸಿ.ಭೈರೇಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿ, ಡಾ.ಎಂ.ಎಚ್‌.ಮರಿಗೌಡ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಡಾ.ಆರ್‌.ದ್ವಾರಕಾನಾಥ್‌ ಅತ್ಯುತ್ತಮ ರೈತ ಪ್ರಶಸ್ತಿ,ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಕೆನರಾ ಬ್ಯಾಂಕ್‌ ಪ್ರಾಯೋಜಿತ ಕ್ಯಾನರಾ ಬ್ಯಾಂಕ್‌ ಅತ್ಯುತ್ತಮ ರೈತ ಮತ್ತು ರೈತ ಮಹಿಳಾ ಪ್ರಶಸ್ತಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರಶಸ್ತಿಗಳ ಪ್ರದಾನ ನಡೆಯಲಿದೆ.

8 ಸುಧಾರಿತ ತಳಿಗಳ ಬಿಡುಗಡೆ: ಕಬ್ಬು (ವಿಸಿಎಫ್ 0517)ತಳಿ, ಮೇವಿನ ಅಲಸಂದೆ (ಎಂಎಫ್ಸಿ-09.1), ಮುಸುಕಿನ ಜೋಳದ ಸಂಕರಣ ತಳಿ (ಎಂಎಎಚ್‌ 14.5), ತೊಗರಿ (ಬಿಆರ್‌ಜಿ 3), ಅಲಸಂದೆ (ಎವಿ 6), ಬೀಜದ ದಂಟು (ಕೆಬಿಜಿಎ 4), ನೇರಳೆ (ಚಿಂತಾಮಣಿ ಸೆಲೆಕ್ಷನ್‌ 1), ಸ್ವೀವಿಯ ರೆಬುಡಿನ: ಮಿಕ್ಸಾಪ್ಲೆ„ಡ್‌ ಎಂಬ ನೂತನ ಸುಧಾರಿತ ತಳಿಗಳನ್ನು ಮೇಳದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 

ಅಲ್ಲದೇ, ಹವಾಮಾನ ವೈಪರೀತ್ಯದ ಕೃಷಿ, ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕೃರಣೆ ಮತ್ತು ಮೌಲ್ಯವರ್ಧನೆ, ಸಾವಯವ ಕೃಷಿ ಪದ್ಧತಿ, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿಗಳು, ಸಣ್ಣ ಸಣ್ಣ ಕೈತೋಟಗಳ ಪರಿಕರಗಳು, ಬಿತ್ತನೆ ಬೀಜ, ಕೃಷಿ ಮತ್ತು ತೋಟಗಾರಿಕೆ ಬೆಳಗಳ ಮಾರಾಟ, ಗಾರ್ಡನಿಂಗ್‌ ಸಸಿಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಪ್ರವೇಶ ಉಚಿತ: ಕೃಷಿ ಮೇಳಕ್ಕೆ ಆಗಮಿಸುವವರಿಗೆ ಮುಕ್ತ ಅವಕಾಶವಿದ್ದು, ಪ್ರವೇಶ ಉಚಿತ. ಜಿಕೆವಿಕೆಯ ಮಹಾದ್ವಾರದಿಂದ ಕೃಷಿ ಮೇಳದ ದಾಖಲಾತಿ ಸ್ಥಳಕ್ಕೆ ತಲುಪಲು ಕೃಷಿ ವಿವಿಯ ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಇದೆ. ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಇದ್ದು, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.

15 ಲಕ್ಷ ಮಂದಿ ಭೇಟಿ!: 2015ರಲ್ಲಿ ಕೃಷಿ ಮೇಳ ನಡೆದಿದ್ದು, ಸುಮಾರು 8ರಿಂದ 9 ಲಕ್ಷ ಮಂದಿ ಮೇಳಕ್ಕೆ ಭೇಟಿ ನೀಡಿದ್ದರು. 2016ರಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಮೇಳಕ್ಕೆ ಬದಲು ಕೇವಲ ವಿವಿಧ ಪ್ರಶಸ್ತಿಗಳ ವಿತರಣೆಗೆ ಕಾರ್ಯಕ್ರಮ ಸೀಮಿತಗೊಂಡಿತ್ತು. 2 ವರ್ಷಗಳ ನಂತರ ನಡೆಯುತ್ತಲಿರುವ ಈ ಬಾರಿಯ ಕೃಷಿ ಮೇಳಕ್ಕೆ ಸುಮಾರು 13ರಿಂದ 15 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ.

* ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next