ಧಾರವಾಡ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಎರಡು ಸ್ಥಾನ ಹೆಚ್ಚಳವಾಗಿದ್ದು ಸಂತಸ ತಂದಿದೆ. ಜಿಲ್ಲೆಯ ಶಿಕ್ಷಕರು ಹಾಗೂ ಖಾಸಗಿ ಸಂಘ-ಸಂಸ್ಥೆಗಳು ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಕ್ಕಾಗಿ ಇಂದು ಉತ್ತಮ ಸ್ಥಾನಗಳಿಸಲು ಸಹಾಯಕವಾಗಿವೆ ಎಂದು ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಬಾರಿ ಟಾಪ್ 5 ಸ್ಥಾನದಲ್ಲಿ ಧಾರವಾಡ ಜಿಲ್ಲೆ ಗುರುತಿಸಿಕೊಳ್ಳುವಂತೆ ಈಗಿನಿಂದಲೇ ಶ್ರಮವಹಿಸಿ ಶಿಕ್ಷಕರೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 25 ನೇ ಸ್ಥಾನದಲ್ಲಿದ್ದ ಜಿಲ್ಲೆ ಕಳೆದ ವರ್ಷ 10 ನೇ ಸ್ಥಾನಕ್ಕೆ ಏರಿತ್ತು. ಈ ಬಾರಿ ಇನ್ನಷ್ಟು ಉತ್ತಮ ಪ್ರಯತ್ನಗಳೊಂದಿಗೆ 8 ನೇ ಸ್ಥಾನಕ್ಕೇರಿದೆ. ಅದರಲ್ಲೂಧಾರವಾಡ ಗ್ರಾಮೀಣ ಕ್ಷೇತ್ರವು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿರುವುದು ಸಂತಸದ ಸಂಗತಿ. ಈ ವರ್ಷದಿಂದ ಪಿಯುಸಿ ಫಲಿತಾಂಶ ಸುಧಾರಣೆಗೆ ಒತ್ತು ನೀಡಲಾಗುವುದು ಎಂದರು.
ಪ್ರಸಕ್ತ ಸಾಲಿನ ಪಿಯು ಫಲಿತಾಂಶದಲ್ಲಿ ಜಿಲ್ಲೆ ಕೆಳ ಹಂತಕ್ಕೆ ಕುಸಿದಿರುವುದು ನೋವು ತಂದಿದೆ ಎಂದರು. ಕೃಷಿ ಹೊಂಡ ಯೋಜನೆಗೆ ಜಿಲ್ಲೆ ಹಾಗೂ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತಪಡಿಸುವ ಮೂಲಕ ರೈತರು ಅನುಕೂಲ ಪಡೆಯುತ್ತಿದ್ದಾರೆ ಎಂದರು.
ಮಳೆಹಾನಿಗೆ ಪರಿಹಾರ: ಈ ಬಾರಿ ವರುಣನ ಕೃಪೆಯಿಂದ ಉತ್ತಮ ಮಳೆಯಾಗುವ ಲಕ್ಷಣಗಳಿವೆ. ರವಿವಾರ ರಾತ್ರಿ ಮತ್ತು ಸೋಮವಾರ ನಸುಕಿನ ಜಾವ ಸುರಿದ ಮಳೆ ಗಾಳಿಗೆ ಸಾಕಷ್ಟು ಪ್ರಮಾಣದಲ್ಲಿ ಫಸಲಿಗೆ ಬಂದಿದ್ದ ಬಾಳೆ ಹಾನಿಯಾಗಿದೆ.
ಈ ಬೆಳೆಗೆ ವಿಮೆ ಇಲ್ಲದಿರುವುದರಿಂದ ತೋಟಗಾರಿಕೆ ಸಚಿವರು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು. ಶಿವಳ್ಳಿ ಗ್ರಾಮದಲ್ಲಿ ಮನೆ, ಶಾಲೆಯ ಕಟ್ಟಡಗಳಿಗೆ ಆಗಿರುವ ಹಾನಿಯ ವರದಿ ಪಡೆದು ಪರಿಹಾರ ಒದಗಿಸಲಾಗುವುದು ಎಂದರು.