Advertisement

ಪ್ರೌಢಿಮೆ ಮೆರೆದ ಅಂಬಲಪಾಡಿ ಯಕ್ಷಗಾನ ಸಂಘದವರ ಪ್ರದರ್ಶನ

12:30 AM Feb 08, 2019 | |

ಶ್ರದ್ಧೆಯಿಂದ ಪ್ರದರ್ಶಿಸಿದರೆ ಹವ್ಯಾಸಿ ಸಂಘದವರು ವೃತ್ತಿ ಮೇಳದ ಕಲಾವಿದರಿಗೂ ಸರಿಸಮನಾಗ ಬಲ್ಲರೆಂಬುದನ್ನು ದೃಢಪಡಿಸಿತು. ಬಾಲಕಲಾವಿದರ ಪ್ರಬುದ್ಧ ಪ್ರೌಢಿಮೆಯಿಂದ ಯಕ್ಷಗಾನವು ಮುಂದಿನ ಜನಾಂಗದಲ್ಲೂ ಗಟ್ಟಿಯಾಗಿ ನೆಲೆಗೊಳ್ಳುವುದರ ಭರವಸೆ ಹುಟ್ಟಿಸಿತು.

Advertisement

ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯವರು ಇತ್ತೀಚಿಗೆ ಅಂಬಲಪಾಡಿಯಲ್ಲಿ 61ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರದರ್ಶಿಸಿದ ಸುಧನ್ವಕಾಳಗ- ಹಿಡಿಂಬಾ ವಿವಾಹ – ಅಂಗಾರವರ್ಮ ಕಾಳಗ ಶ್ರದ್ಧೆಯಿಂದ ಯಕ್ಷಗಾನ ಪ್ರದರ್ಶಿಸಿದರೆ ಹವ್ಯಾಸಿ ಸಂಘದವರು ವೃತ್ತಿ ಮೇಳದ ಕಲಾವಿದರಿಗೂ ಸರಿಸಮನಾಗಬಲ್ಲರೆಂಬುವುದನ್ನು ದೃಢಪಡಿಸಿತು.

 

ಮೊದಲ ದಿನ ಪ್ರದರ್ಶಿಸಿದ ಸುಧನ್ವ ಕಾಳಗ ಪ್ರಸಂಗ ಬಾಲಕಲಾವಿದರ ಪ್ರಬುದ್ಧ ಪ್ರೌಢಿಮೆಯಿಂದ ಯಕ್ಷಗಾನವು ಮುಂದಿನ ಜನಾಂಗದಲ್ಲೂ ಗಟ್ಟಿಯಾಗಿ ನೆಲೆಗೊಳ್ಳುವುದರ ಭರವಸೆ ಹುಟ್ಟಿಸಿತು. ಸುಗರ್ಭ (ದೀಪಾ), ಕುವಲೆ(ಮಾನ್ಯ) ಪಾತ್ರಧಾರಿಗಳು ಪಾತ್ರಗಳಿಗೆ ನ್ಯಾಯ ಒದಗಿಸಿದರು. ಸುಧನ್ವ ಪಾತ್ರಧಾರಿ (ಕೆ.ಜಿ. ದೀಪ್ತ) ಪ್ರವೇಶದಿಂದಲೇ ಆಸಕ್ತಿ ಬೆಳೆಸಿದರಲ್ಲದೆ ಪ್ರಸಂಗದುದ್ದಕ್ಕೂ ಚಪ್ಪಾಳೆ ಗಿಟ್ಟಿಸಿಕೊಂಡರು. ಪ್ರಭಾವತಿ(ದೀಕ್ಷಾ) ಸುಧನ್ವನ ಮನಗೆಲ್ಲುವಲ್ಲಿ ಯಶಸ್ವಿಯಾಗುವಂತೆ ಅಭಿನಯಿಸಿದ್ದಲ್ಲದೆ ಪ್ರಭಾವತಿ ಸುಧನ್ವರ ಸಂವಾದ ಪ್ರಸಂಗದ ಗೆಲುವಿಗೆ ಕಾರಣವಾಯಿತು. ಅರ್ಜುನ (ಅರವಿಂದ) ತಮ್ಮ ಗತ್ತುಗಾರಿಕೆಯಿಂದ ಹಿರಿಯ ಕಲಾವಿದರನ್ನು ನೆನಪಿಗೆ ತಂದರು. ಅರ್ಜುನ ಹಾಗೂ ಸುಧನ್ವರ ಯುದ್ಧ ಸಂದರ್ಭದ ನೃತ್ಯ ಸಂಭಾಷಣೆ ಬಹುಕಾಲ ನೆನಪಿನಲ್ಲಿರುವಂತೆ ಮಾಡಿತು. ಕೃಷ್ಣ ಪಾತ್ರಧಾರಿಯ ಪ್ರವೇಶದಿಂದ ಪ್ರಸಂಗಕ್ಕೆ ಇನ್ನಷ್ಟು ಗೌರವ ಬಂದಿತಲ್ಲದೆ ಕೊನೆಗೆ ಭಾರೀ ಚಪ್ಪಾಳೆ ಬಾಲಕಲಾವಿದರು ಯಶಸ್ವಿಯಾದುದಕ್ಕೆ ಸಾಕ್ಷಿ ನೀಡಿತು. ಬಾಲಕಲಾವಿದರಿಗೆ ಉತ್ತಮ ತರಬೇತಿ ನೀಡಿದ ಕೆ.ಜೆ. ಗಣೇಶ್‌ರವರ ಭಾಗವತಿಕೆ, ಕೆ.ಜೆ. ಸುಧೀಂದ್ರರ ಮದ್ದಳೆ , ಕೆ.ಜೆ. ಕೃಷ್ಣರವರ ಚೆಂಡೆ ಮುದ ನೀಡಿತು.ಆರಂಭಕ್ಕೆ ಮುನ್ನ ಪ್ರದರ್ಶಿಸಿದ ಪೂರ್ವರಂಗ, ಒಡ್ಡೋಲಗ ಕುಣಿತ ಮರೆಯಾಗುತ್ತಿರುವ ಕಲಾಪ್ರಕಾರವನ್ನು ಮತ್ತೆ ನೆನಪಿಸಿತು. 

ಎರಡನೇ ದಿನ ಪ್ರದರ್ಶಿತವಾದ ಹಿಡಿಂಬಾ ವಿವಾಹ- ಅಂಗಾರವರ್ಮ ಕಾಳಗ ಪ್ರಸಂಗವು ಸಂಘದ ಬಗ್ಗೆ ಗೌರವವನ್ನು ಇನ್ನಷ್ಟು ಹೆಚ್ಚಿಸಿತು. ಪಾಂಡವರ ಪರಂಪರಾಗತ ಒಡ್ಡೋಲಗದಿಂದಲೇ ಪ್ರರಂಭವಾದ ಕಲಾಪ್ರೌಢಿಮೆಯನ್ನು ಪ್ರಸಂಗದುದ್ದಕ್ಕೂ ಎಲ್ಲ ಕಲಾವಿದರು ಅಂತ್ಯದವರೆಗೂ ಉಳಿಸಿಕೊಂಡರು ಪಂಚಪಾಂಡವರ ಪಾತ್ರಧಾರಿಗಳೆಲ್ಲರೂ ತಮ್ಮ ಪಾತ್ರದ ಔಚಿತ್ಯಕ್ಕನುಗುಣವಾಗಿ ಅಭಿನಯಿಸಿದರು. ಅರಗಿನ ಅರಮನೆ ಭಸ್ಮವಾದ ಬಳಿಕ ಭೀಮ (ರಮಣ ಆಚಾರ್ಯ) ತಮ್ಮನವರನ್ನೆಲ್ಲ ಹೊತ್ತುಕೊಂಡು ಹಿಡಿಂಬಾ ವನಕ್ಕೆ ಸಾಗಿಸಿ ಅವರನ್ನೇ ಕಾಯುವ ದೃಶ್ಯಾಭಿನಯವು ಪ್ರೇಕ್ಷಕರ ಕುತೂಹಲ ಹೆಚ್ಚಿಸಿತು. ಹಿಡಿಂಬಾಸುರನ ಪ್ರವೇಶದಿಂದ ಪ್ರಸಂಗಕ್ಕೆ ಹೊಸ ಕಳೆ ಬಂದಿತು. ಹಿಡಿಂಬಾಸುರ ಪಾತ್ರಧಾರಿಯ (ಕೆ. ಅಜಿತ್‌ ಕುಮಾರ್‌) ಅಬ್ಬರದ ಪ್ರವೇಶ ಹಾಗೂ ಪ್ರಸಂಗದುದ್ದಕ್ಕೂ ತೋರಿದ ಅಭಿನಯ ಬಣ್ಣದ ವೇಷದ ಹಿರಿಯ ಕಲಾವಿದರನ್ನು ನೆನಪಿಸಿತು. ಹಿಡಿಂಬೆ (ಪ್ರವೀಣ್‌ ಉಪಾಧ್ಯಾಯ) ಲವಲವಿಕೆಯಿಂದ ಅಭಿನಯಿಸಿ ನೃತ್ಯ ಸಂಭಾಷಣೆಗಳೆರಡರಲ್ಲಿಯೂ ಮನಗೆದ್ದರು. ಮಾಯಾ ಹಿಡಿಂಬೆ (ಜಯ ಕೆ.) ಹಿತಮಿತವನ್ನರಿತು ಅಭಿನಯಿಸಿದರು. ಭೀಮ ಹಾಗೂ ಹಿಡಿಂಬಾಸುರ ಯುದ್ಧ ಕೊನೆಗೆ ಹಿಡಿಂಬೆಯನ್ನು ಭೀಮ ವಿವಾಹವಾಗುವ ಸಂದರ್ಭ ಕಲಾವಿದರ ಪ್ರೌಢಿಮೆ ನಿದರ್ಶನವಾಗಿತ್ತು. ವೇಷ ಮರೆಸಿ ಪಾಂಡವರು ರಾತ್ರಿ ತೆರಳುವ ದೃಶ್ಯವಂತೂ ಮನತಟ್ಟಿತು. ಗಂಧರ್ವ ರಾಜ ಅಂಗಾರವರ್ಮನ (ಜಗದೀಶ ಆಚಾರ್ಯ) ಪ್ರವೇಶ ಪ್ರಸಂಗಕ್ಕೆ ಹೊಸ ಹುಮ್ಮಸ್ಸು ಹುಟ್ಟಿಸಿತು. ಅಂಗಾರವರ್ಮನ ಪಾತ್ರಧಾರಿಯಂತೂ ವಿವಿಧ ಬಗೆಯ ನೃತ್ಯ ಹಾಗೂ ಅಭಿನಯಗಳಿಂದ ಮನಗೆದ್ದರು. ಅಂಗಾರವರ್ಮ ರಾತ್ರಿವೇಳೆ ಭೂಲೋಕಕ್ಕೆ ಬಂದು ಸಖೀಯರೊಂದಿಗೆ ಜಲಕ್ರೀಡೆಯಾಡುವ ಸಂದರ್ಭ ಪ್ರಯಾಣದಲ್ಲಿದ್ದ ಪಾಂಡವರನ್ನು ಕಂಡು ಯುದ್ಧಕ್ಕಿಳಿದಾಗ ಅರ್ಜುನನ (ಮುರಲಿ ಕಡೆಕಾರ್‌) ವಿಶೇಷ ಹಳೆ ಶೈಲಿಯ ನೃತ್ಯ ಹಾಗೂ ಸಂಭಾಷಣೆಗಳಿಂದ ಪ್ರಸಂಗದ ಮುನ್ನಡೆಗೆ ಹೊಸ ಆಯಾಮ ಸಿಕ್ಕಿದಂತಾಯಿತು. ಅರ್ಜುನನ ಕಾಳಗದ ನೃತ್ಯಶೈಲಿ ಸಂಭಾಷಣೆಗಳನ್ನು ಹಿಂದಿನ ಕಲಾ ಬಯಲಾಟದ ಮೇಳಗಳ ಕಲಾವಿದರನ್ನೇ ಜ್ಞಾಪಕಕ್ಕೆ ತಂದಿತು. ಅಂಗಾರವರ್ಮನ ಸೋಲಿನಿಂದ ಮುಕ್ತಾಯಗೊಂಡು ಪಾಂಡವರ ಪ್ರಯಾಣದ ಮುನ್ನಡೆಗೆ ಮಂಗಳ ಹಾಡಿದ ಪ್ರಸಂಗವನ್ನು ಪ್ರೇಕ್ಷಕರು ಕೊನೆಯವರೆಗೂ ವೀಕ್ಷಿಸಿದ್ದು ಪ್ರಸಂಗದ ಯಶಸ್ವಿಗೆ ಸಾಕ್ಷಿಯಾದುದರಲ್ಲಿ ಸಂಶಯವಿಲ್ಲ. ಕೆ.ಜೆ. ಸಹೋದರರ ಹಿಮ್ಮೇಳ ಪ್ರಸಂಗದ ಯಶಸ್ವಿಗೆ ಮುಖ್ಯ ಕಾರಣವಾಗಿತ್ತು.     

ಬಾ. ಸಾಮಗ 

Advertisement
Advertisement

Udayavani is now on Telegram. Click here to join our channel and stay updated with the latest news.

Next