Advertisement

ನೀರು-ಒಳಚರಂಡಿ ಕಾಮಗಾರಿ ಏಕಕಾಲಕ್ಕೆ ಮಾಡಿ

04:59 PM Mar 04, 2021 | Team Udayavani |

ಕಲಬುರಗಿ: ಮಹಾನಗರದಲ್ಲಿ ಕೈಗೆತ್ತಿಕೊಂಡಿರುವ 24×7 ಕುಡಿಯುವ ನೀರಿನ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಏಕಕಾಲಕ್ಕೆ ಕೈಗೆತ್ತಿಗೊಳ್ಳುವಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

2014ರಿಂದ 2019ನೇ ಸಾಲಿನ ವರೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕೈಗೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ
ಅವರು, ಒಳಚರಂಡಿ ನಿರ್ಮಾಣ ಕೈಗೊಂಡ ಮೇಲೆ ರಸ್ತೆ ಅಭಿವೃದ್ಧಿಪಡಿಸುವುದು, ತದನಂತರ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳುವುದು, ಇಲ್ಲವೇ
ಕುಡಿಯುವ ನೀರಿನ ಕಾಮಗಾರಿ ಕೈಗೊಂಡ ಮೇಲೆ ರಸ್ತೆ ಅಭಿವೃದ್ಧಿ ಪಡಿಸಿದ ನಂತರ ರಸ್ತೆ ಅಗೆಯುವುದು ನಿರಂತರವಾಗಿ ನಡೆಯುತ್ತಿದೆ. ಹೀಗಾಗಿ ಮಾಡಿದ
ರಸ್ತೆಗಳು ಹಾಳಾಗುತ್ತಿವೆ. ಆದ್ದರಿಂದ ಪ್ರಧಾನಮಂತ್ರಿ ಗ್ರಾಮೀಣ ಸಡಕ್‌ ಯೋಜನೆ (ಪಿಎಂಜಿಎಸ್‌ ವೈ), ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌
ಇಲಾಖೆಗಳು ಸಮನ್ವಯತೆಯಿಂದ ಕಾಮಗಾರಿಗಳನ್ನು ಮಾಡಬೇಕು ಎಂದು ಹೇಳಿದರು.

ಮಹಾನಗರಕ್ಕೆ ನಿರಂತರವಾಗಿ ನೀರು ಪೂರೈಸುವ ಮೊದಲ ಹಂತದ 600ಕೋಟಿ ರೂ. ವೆಚ್ಚದ ಕಾಮಗಾರಿ ಶುರುವಾಗಿದೆ. ಅದೇ ರೀತಿ 250 ಕೋಟಿ ರೂ. ವೆಚ್ಚದ ಒಳಚರಂಡಿ ನಿರ್ಮಾಣ ಕಾಮಗಾರಿ ಶುರುವಾಗಿದೆ. ಇವರೆಡನ್ನು ಏಕಕಾಲಕ್ಕೆ ಕೈಗೊಳ್ಳುವ ಮೂಲಕ ವಿನಾಕಾರಣ ರಸ್ತೆ ಹಾಳಾಗುವುದನ್ನು ತಪ್ಪಿಸಬೇಕು. ಮಹಾನಗರವಲ್ಲದೇ ಸುತ್ತಮುತ್ತಲಿನ ಹೊಸ ಬಡಾವಣೆಗಳಿಗೂ ನೀರು ಕಲ್ಪಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ
ಸೂಚಿಸಿದರು.

ಮಹಾನಗರದಲ್ಲಿ ಸತತ ನೀರು ಪೂರೈಸುವ ಕಾಮಗಾರಿಯನ್ನು ಎಲ್‌ ಆ್ಯಂಟ್‌ ಟಿ ಕಂಪನಿಯವರು ನಿರ್ವಹಿಸುತ್ತಿದೆ. ಮಹಾನಗರಕ್ಕೆ ಹೊಂದಿಕೊಂಡಿರುವ
ಬಡಾವಣೆಗಳಿಗೂ 24ಗಿ7 ನೀರು ಪೂರೈಕೆ ಮಾಡಲು ಕ್ರಿಯಾ ಯೋಜನೆ ರೂಪಿಸಿ. ಜತೆಗೆ ಅಮೃತ ಯೋಜನೆಯಡಿ ಉಳಿದಿರುವ ಕಾಮಗಾರಿಗಳ
ಪೂರ್ಣದ ಕಡೆಗೂ ಲಕ್ಷ್ಯ ವಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಒಳಚರಂಡಿ ದುರಸ್ತಿಗೊಳಿಸುವ ವೇಳೆ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣವಾಗಿದೆ. ಹೀಗಾಗಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸವಾಗಬೇಕು. ಪೊಲೀಸರು ಸಮರ್ಪಕ ಆರೋಪ ಪಟ್ಟಿ ಸಲ್ಲಿಸಬೇಕು. ಸಂಬಂಧವಿಲ್ಲದ ವರದಿ ನೀಡಬೇಡಿ ಎಂದರು.

Advertisement

ಕೃಷಿ ಇಲಾಖೆ ಅಧಿಕಾರಿಗಳು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸುವಂತೆ ಮನವೊಲಿಸಲು ಮುಂದಾಗಬೇಕು. ಪಕ್ಕದ ಬೀದರ್‌ ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಬೆಳೆವಿಮೆ ಮಾಡಿಸುತ್ತಿರುವಾಗ ನಮ್ಮಲ್ಲಿ ಏಕೆ ಆಗೋದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರನ್ನು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ಪ್ರಶ್ನಿಸಿದರು. ಎಲ್ಲ ಅಧಿಕಾರಿಗಳು ಮುಂದಿನ ಸಲ ಸಭೆಗೆ ಬರುವಾಗ, ಸಮಗ್ರ ವಿವರಣೆ ತರಬೇಕು ಎಂದು ಎಚ್ಚರಿಕೆ ನೀಡಿದರು. ಸಭೆಗೆ ಗೈರಾದ ಸೇಡಂ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರಿಗೆ ನೋಟಿಸ್‌ ನೀಡಲು ಸೂಚಿಸಲಾ ಯಿತು. ಕೆಕೆಆರ್‌ಡಿಬಿ ಕಾರ್ಯದರ್ಶಿ ಡಾ| ಎನ್‌.ವಿ.
ಪ್ರಸಾದ, ಶಾಸಕರಾದ ಎಂ.ವೈ. ಪಾಟೀಲ, ಖನೀಜಾ ಫಾತೀಮಾ, ಜಿ.ಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಜಿಲ್ಲಾಧಿಕಾರಿ ವಿ.ವಿ. ಜೋತ್ಸಾ °, ಜಿ.ಪಂ ಸಿಇಒ ದಿಲೀಶ ಸಸಿ, ಡಿಸಿಪಿ ಕಿರೋಶಬಾಬು ಮುಂತಾದವರಿದ್ದರು.

ಲೋಕೋಪಯೋಗಿ ನಿಧಾನಗತಿಗೆ ಸಿಡಿಮಿಡಿ
ಲೋಕೋಪಯೋಗಿ ಇಲಾಖೆಯು 2018-19ನೇ ಸಾಲಿನ 14 ಕಾಮಗಾರಿಗಳಿಗೆ ಇಂದಿನ ದಿನದವರೆಗೂ ಆಡಳಿತಾತ್ಮಕ ಒಪ್ಪಿಗೆ ಪಡೆದಿಲ್ಲ. ಅಲ್ಲದೇ ಒಟ್ಟಾರೆ 148 ಕಾಮಗಾರಿಗಳಿಗೆ ಆಡಳಿತಾತ್ಮಕ ಒಪ್ಪಿಗೆ ಪಡೆಯದಿರುವುದನ್ನು ಗಮನಿಸಿದರೆ ಅಧಿಕಾರಿಗಳ ನಿರ್ಲಕ್ಷತ್ಯನ ಎದ್ದು ಕಾಣುತ್ತದೆ. ಹೀಗೆ ಕೆಲಸ ಮಾಡಿದರೆ ಅನುದಾನ ತರೋದು ಹೇಗೆ? ಕೆಲಸ ಮಾಡದಿದ್ದರೆ ಬೇರೆ ಜಿಲ್ಲೆಗಳಿಗೆ ಹೋಗಿ ಕೆಲಸ ಮಾಡಿ. ಸ್ಥಳಿಯವರೇ ಆಗಿದ್ದರೂ ಎರಡೂ¾ರು ವರ್ಷ ಕಳೆದರೂ ಕಾಮಗಾರಿಯೇ ಪ್ರಾರಂಭವಾಗದಿರುವುದು ನಿಜಕ್ಕೂ ದುರ್ದೈವ. ಬೇರೆ ಜಿಲ್ಲೆಯವರು ಇಲ್ಲಿಗೆ ಬಂದು ಅನುಮತಿ ಪಡೆದು ಕಾಮಗಾರಿ ಪೂರ್ಣಗೊಳಿಸಿರುವಾಗ
ನೀವ್ಯಾಕೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ದತ್ತಾತ್ರೇಯ ಪಾಟೀಲ ಲೋಕೋಪಯೋಗಿ,
ಪಿಎಂಜಿಎಸ್‌ವೈ, ಪಿಆರ್‌ಇಡಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

ಕೊರೊನಾ ಹಿನ್ನೆಲೆಯಲ್ಲಿ ಈಗಷ್ಟೇ ಅನುದಾನ ಬಿಡುಗಡೆಯಾಗಿದೆ. ಹೀಗಾಗಿ ಮುಂದಿನ 2021-22ರ ಸಾಲಿನ ಕ್ರಿಯಾ ಯೋಜನೆಯನ್ನು ಬರುವ ಏಪ್ರಿಲ್‌ ಅಂತ್ಯದೊಳಗೆ ಸಲ್ಲಿಸಿ, ಒಮ್ಮೆಲೆ ಎರಡು ವರ್ಷದ ಕಾಮಗಾರಿಗಳನ್ನು ಕೈಗೊಳ್ಳುವ ಸವಾಲು ನಮ್ಮ ಮುಂದಿದೆ. ಎಲ್ಲರೂ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕು.
ದತ್ತಾತ್ರೇಯ ಪಾಟೀಲ, ಅಧ್ಯಕ್ಷ, ಕೆಕೆಆರ್‌ಡಿಬಿ

ಜಿಲ್ಲೆಯಲ್ಲಿ 10 ಕೋಟಿ ರೂ.ಗೂ ಹೆಚ್ಚು ಕಾಮಗಾರಿಗಳು ಪೂರ್ಣಗೊಂಡಿದ್ದರೂ ಅಧಿಕಾರಿಗಳು ಬಿಲ್‌ ಪಾವತಿಗಾಗಿ ಮುಂದಾಗದಿರುವುದನ್ನು ನೋಡಿದರೆ ಕಾಮಗಾರಿಗೆ ಗುತ್ತಿಗೆದಾರರೇ ದಾನಿಗಳೆಂದು ಬೋರ್ಡ್‌ ಹಾಕಿಸುವುದು ಸೂಕ್ತವೆನಿಸುತ್ತಿದೆ. ಮುಗಿದ ಕಾಮಗಾರಿಗೆ ಬಿಲ್‌ ಪಡೆಯುತ್ತಿಲ್ಲ, ಜತೆಗೆ ಕಾಮಗಾರಿ ಪೂರ್ಣವಾದ ಕುರಿತು ದಾಖಲಾತಿ ಸಲ್ಲಿಸುತ್ತಿಲ್ಲ. ಹೀಗಾಗಿ ಇಲಾಖೆ ವೆಬ್‌ಸೈಟ್‌ನಲ್ಲಿ ಕಾಮಗಾರಿಗಳ ಪೆಂಡಿಂಗ್‌ ತೋರಿಸುತ್ತಿದೆ.
ಡಾ| ಎನ್‌.ವಿ. ಪ್ರಸಾದ, ಕಾರ್ಯದರ್ಶಿ ಕೆಕೆಆರ್‌ಡಿಬಿ

Advertisement

Udayavani is now on Telegram. Click here to join our channel and stay updated with the latest news.

Next