ರಬಕವಿ-ಬನಹಟ್ಟಿ: ಜೂ.13ರಂದು ವಿಧಾನ ಪರಿಷತ್ ವಾಯವ್ಯ ಮತಕ್ಷೇತ್ರದ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಕ್ಕೆ ನಡೆಯವ ಚುನಾವಣೆ ಸಂದರ್ಭದಲ್ಲಿ ಮತಗಟ್ಟೆ ಅಧಿ ಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಉಪ ತಹಶೀಲ್ದಾರ್ ಮತ್ತು ಚುನಾವಣಾಧಿಕಾರಿ ಎಸ್.ಎಲ್. ಕಾಗಿಯವರ ತಿಳಿಸಿದರು.
ತಹಶೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚುನಾವಣೆ ಸಿಬ್ಬಂದಿ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ರಬಕವಿ ಬನಹಟ್ಟಿ ತಾಲೂಕಿನಲ್ಲಿ ಒಟ್ಟು ಏಳು ಮತಗಟ್ಟೆ ನಿರ್ಮಾಣ ಮಾಡಲಾಗಿದೆ. ರಬಕವಿ ಬನಹಟ್ಟಿಯಲ್ಲಿ 3, ತೇರದಾಳ 2, ಮಹಾಲಿಂಗಪುರ ಮತ್ತು ಸೈದಾಪುರಗಳಲ್ಲಿ ತಲಾ ಒಂದು ಮತಗಟ್ಟೆ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಶಿಕ್ಷಕ ಎಚ್.ವೈ. ಆಲಮೇಲ ತರಬೇತಿ ನೀಡುತ್ತ, ಮತಗಟ್ಟೆ ಅಧಿಕಾರಿಗಳು ಮುಕ್ತ, ನ್ಯಾಯ ಸಮ್ಮತ, ಶಾಂತಿಯುತ ಮತದಾನ ನಡೆಯುವಂತೆ, ಅನವಶ್ಯಕವಾದ ದೂರುಗಳಿಗೆ ಅವಕಾಶವಿಲ್ಲದಂತೆ ವಿಧಾನ ಪರಿಷತ್ ಚುನಾವಣೆ ನೀತಿ ನಿಯಮಗಳಿಗೆ ಅನುಸಾರವಾಗಿ ಮತ್ತು ಬದಲಾಗುತ್ತಿರುವ ವಿಧಾನ ಮತ್ತು ಕಾನೂನುಗಳ ಬಗ್ಗೆ ತಿಳಿದುಕೊಂಡು ಕರ್ತವ್ಯ ನಿರ್ವಹಿಸಬೇಕು. ಮತಗಟ್ಟೆಯಲ್ಲಿ ಮೊಬೈಲ್ ಗಳಿಗೆ ಅವಕಾಶವಿಲ್ಲ. ಅದೇ ರೀತಿಯಾಗಿ ಮತದಾನ ಮಾಡಲು ಆಯೋಗವು ನೀಡಿದ ಪೆನ್‌ಗಳನ್ನು ಬಳಸುವಂತೆ ನೋಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಈ ವೇಳೆ ಎಂ.ಎಂ. ಮುಗಳಖೋಡ, ರಾಜಕುಮಾರ ಹೊಸೂರ, ಇರ್ಫಾನ್ ಝಾರೆ, ಬಿ. ಎಸ್. ಮಠದ, ಶೋಭಾ ಹೊಸಮನಿ, ಗದಗೆನ್ನವರ, ಸೇರಿದಂತೆ ಇತರರಿದ್ದರು.