Advertisement

ಶಿಕ್ಷಕಿಯಾದೆ, ಐಸಿಎಸ್‌ ಕೂಡ ಮಾಡಿದೆ!

10:13 AM Apr 01, 2020 | Suhan S |

ಅಪ್ಪ, ಅಮ್ಮ ಇಬ್ಬರೂ ಬ್ಯಾಂಕ್‌ ಉದ್ಯೋಗಿಗಳಾಗಿದ್ದುದರಿಂದ, ನಾನು-ನನ್ನ ತಂಗಿ ಅಜ್ಜಿ ಮನೆಯಲ್ಲಿ ಬೆಳೆದೆವು. ಅದು ಹಳ್ಳಿಯಾದ್ದರಿಂದ, ಐದನೇ ತರಗತಿಯವರೆಗೆ ಕನ್ನಡ ಶಾಲೆ ಇತ್ತು. ಬರೀ ಮೂರು ಶಿಕ್ಷಕರು ಇದ್ದರು. ಐದನೇ ತರಗತಿಗೆ ಬಂದಾಗ ಒಂದನೇ ತರಗತಿಗೆ ಅಆಇಈ ಕಲಿಸುವಷ್ಟು ಬುದ್ಧಿವಂತಿಕೆ ನನಗೆ ಇತ್ತು.

Advertisement

ಹಾಗಾಗಿ, ಚಿಕ್ಕಂದಿನಿಂದಲೂ ಮುಂದೆ ನಾನು ಶಿಕ್ಷಕಿ ಆಗಬೇಕು ಎಂಬ ಕನಸು ಕಾಣುತ್ತಿದ್ದೆ. ಆರನೇ ತರಗತಿಗೆ ಬಂದಾಗ, ಅಪ್ಪ- ಅಮ್ಮನ ಜೊತೆ ಇರುವ ಅವಕಾಶ ಸಿಕ್ಕಿತು. ಉಡುಪಿಯ ಕಾನ್ವೆಂಟ್‌ನಲ್ಲಿ ಹತ್ತನೇ ತರಗತಿಯವರೆಗೆ ಓದಿದೆ. ಅಲ್ಲಿಯ ಸಿಸ್ಟರ್ಸ್‌ರವರ ಶ್ರದ್ಧಾಪೂರ್ವಕ ಕೆಲಸ ನೋಡಿ ನನಗಂತೂ ಶಿಕ್ಷಕಿ ಆಗಲೇಬೇಕು ಎಂಬ ಆಸೆ ಮತ್ತಷ್ಟು ಗಟ್ಟಿಯಾಯಿತು. ಮನೆಗೆ ಬಂದ ನೆಂಟರು,ದೊಡ್ಡವಳಾದ ಮೇಲೆ ಏನಾಗುತ್ತೀಯಾ ಎಂದಾಕ್ಷಣ ಟೀಚರ್‌ ಎನ್ನುತ್ತಿದ್ದೆ. ಅಷ್ಟರಲ್ಲಿ ನಮ್ಮ ಅಪ್ಪಾಜಿ, ಮಧ್ಯೆ ಬಾಯಿ ಹಾಕಿ… ಇವಳಿಂದ ಐ.ಸಿ.ಎಸ್‌. ಮಾಡಿಸುತ್ತೇನೆ ಎಂದು ಹೇಳಿ ಮುಗುಳು ನಗುತ್ತಿದ್ದರು. ಅದೇನೋ ಏನೋ ದೊಡ್ಡ ಹುದ್ದೆ ಅಂತ ನಾನು ಅಂದು ಕೊಂಡದ್ದೆ.  ನಿಜ ಏನೆಂದರೆ, ಐ.ಸಿ.ಎಸ್‌. ಎಂಬುದರ ಅರ್ಥ, ಇಂಡಿಯನ್‌ ಕುಕಿಂಗ್‌ ಸರ್ವಿಸ್‌!.

ಅಂದರೆ, ಅಡುಗೆ ಮಾಡುವುದು ಅಂತ ತಿಳಿದು ಕೊಳ್ಳುವುದಕ್ಕೆ ಬಹಳ ವರ್ಷಗಳೇ ಹಿಡಿಯಿತು. ಮುಂದೆ ಡಿಗ್ರಿ ಪೂರೈಸಿ, ಬಿ.ಎಡ್‌. ಮುಗಿಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಿಕ್ಷಕಿ ಆಗಿ ನನ್ನ ಕನಸನ್ನು ಈಡೇರಿಸಿಕೊಂಡೆ. ಅಷ್ಟರಲ್ಲೇ ನೆಂಟಸ್ತಿಕೆ ಕೂಡಿ ಬಂದು ಮದುವೆಯೂ ಆಯಿತು. ನನ್ನ ಯಜಮಾನರು ಕೆಲಸಕ್ಕೆ ಹೋಗಲು ಅನುಮತಿ ಕೊಟ್ಟರು. ಕೆಲವು ದಿನಗಳ ನಂತರ ಏಳನೇ ತರಗತಿಯ ಕ್ಲಾಸ್‌ ಟೀಚರ್‌ ಆಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿತು. ಬಾಲ್ಯದ ಕನಸು ನನಸಾಯಿತು ಎಂಬುದು ನನ್ನ ಖುಷಿ . ಇದು ಜಾಸ್ತಿ ದಿನ ಇರಲಿಲ್ಲ. ಮಕ್ಕಳಾದ ಮೇಲೆ, ಅವರ ಆರೈಕೆಗೋಸ್ಕರ ಕೆಲಸ ಬಿಡಬೇಕಾಯಿತು. ಆದರೇನಂತೆ, ಕಲಿತ ವಿದ್ಯೆಯಿಂದ ನನ್ನ ಮಕ್ಕಳಿಗೆ ಟ್ಯೂಶನ್‌ಗೆ ಕಳುಹಿಸದೇ ವಿದ್ಯಾಭ್ಯಾಸ ಕಲಿಸಲು ಅನುಕೂಲಯಿತು.

ಈಗ ಮಕ್ಕಳಿಗೆ ತರಾವರಿ ಅಡುಗೆ ಮಾಡುವುದರಲ್ಲಿ ಪರಿಣತಿ ಹೊಂದಿದ್ದೇನೆ. ಬಿಡುವಿನ ವೇಳೆಯಲ್ಲಿ ಅಡುಗೆಗಳ ಬಗ್ಗೆ ಬರೆಯುತ್ತೇನೆ. ಬಾಟನಿ ಓದಿದ್ದರಿಂದ ತಾರಸಿ ತೋಟ ಮಾಡಲು ಸಹಾಯವಾಗಿದೆ. ಈಗ ಅತ್ತೆ, ಮಕ್ಕಳು, ಗಂಡನೊಂದಿಗೆ ಸಂತೋಷದಿಂದ ಕಳೆಯುತ್ತಿದ್ದೇನೆ. ಬಗೆಬಗೆಯ ಅಡುಗೆ ಮಾಡುವಾಗ ಅಪ್ಪಾಜಿಯು “ಇವಳನ್ನು ಐ.ಸಿ.ಎಸ್‌. ಮಾಡಿಸ್ತೇನೆ’ ಎಂದಿದ್ದ ಮಾತು ಯಾವಾಗಲೂ ನೆನಪಾಗುತ್ತದೆ. ಅಡುಗೆಯೂ ಒಂದು ಕಲೆ ಎಂದಮೇಲೆ ನಾನು ಐ.ಸಿ.ಎಸ್‌. ಪದವೀಧರೆ ಎನ್ನಲು ಬಹಳ ಸಂತೋಷವೂ ಆಗುತ್ತದೆ.

 

Advertisement

-ಸಹನಾ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next