ಪತ್ನಿ ರುಕ್ಮಿಣಿಗೆ ಮಾತು ಕೊಟ್ಟಂತೆ ಕೃಷ್ಣ ಎಂಟು ದಿನಗಳಲ್ಲಿ ಮಗ ಮನ್ಮಥನಿಗೆ ಹೆಣ್ಣು ಹುಡುಕಿ ಮದುವೆ ಮಾಡಬೇಕಾದ ಪರಿಸ್ಥಿತಿ. ಏಳು ದಿನಗಳು ಮುಗಿದು ಇನ್ನೇನು ದಿನವೊಂದು ಕಳೆದರೆ ಪ್ರತಿಜ್ಞೆ ಹಾಳಾಗುತ್ತದೆ ಎಂಬ ವ್ಯಾಕುಲ. ಇದೇ ಚಿಂತೆಯಿಂದ ಮಲಗಿದ್ದ ಕೃಷ್ಣ ತಂಗಿ ದ್ರೌಪದಿಗೆ ವಿಷಯ ತಿಳಿಸಿ ಆಕೆಯನ್ನು ಕನ್ಯಾಶೋಧನೆಗೆ ಕಳುಹಿಸುವಲ್ಲಿಂದ ಬೆಳ್ಳಾರೆಯಲ್ಲಿ ನಡೆದ ಯಕ್ಷಗಾನ ಪ್ರಸಂಗ ರತಿ ಕಲ್ಯಾಣ ಆರಂಭವಾಯಿತು.
ಎಡನೀರು ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಕ್ಷ ದಿಗ್ಗಜರ ಸಮಾವೇಶ ಬೆಳ್ಳಾರೆಯ ಮೇಲೆ ಅಗಾಧ ಪರಿಣಾಮ ಬೀರಿತ್ತು. ಮಧುರ ಕಂಠದ ಭಾಗವತರ ಭಾಗವತಿಕೆಯನ್ನು ಕೇಳುವ ಕಿವಿಗಳಿಗೆ ಬೆಳ್ಳಾರೆಯಲ್ಲಿ ಕೊರತೆಯಾಗದೆಂಬ ನಂಬಿಕೆ ಇಲ್ಲಿದ್ದ ಅಧಿಕ ಸಂಖ್ಯೆಯ ಸಭಿಕರ ಕೂಡುವಿಕೆಯೇ ತಿಳಿಸಿತ್ತು. ಹಾಗಾಗಿ ಆಟ ಪ್ರಾರಂಭವಾಗುವವರೆಗೆ ಕಣ್ಣು ಮಿಟುಕಿಸುತ್ತಿದ್ದ ಮೊಬೈಲುಗಳು ಆಟ ಪ್ರಾರಂಭವಾದಾಗ ನಿದ್ದೆಗೆ ಜಾರಿದ್ದು ಯಕ್ಷ ಪ್ರೇಮವನ್ನು ಸಾರಿತ್ತು.
ದ್ರೌಪದಿಯ ಪ್ರಾಸಭರಿತ ವಾಗ್ಝರಿಗೂ, ಕೃಷ್ಣನ ಸಾಂಧರ್ಬಿಕ ಮಾತುಗಾರಿಕೆಗೂ ಪ್ರೇಕ್ಷಕ ಗಡಣ ತಲೆದೂಗುವಂತಾಯಿತು. ಶ್ರೀಕೃಷ್ಣನಾಗಿ ಮಿಂಚಿದ ಲಕ್ಷ್ಮಣ ಕುಮಾರ್ ಮರಕಡರ ಸಂಭಾಷಣೆ ಅನವಶ್ಯವಾಗಿ ದೀರ್ಘವಾಗದೆ ಕಾಲಮಿತಿಯಲ್ಲಿ ಕತೆಯ ಔಚಿತ್ಯವನ್ನು ಹಾಳುಮಾಡದೆ ನಡೆಸಿಕೊಂಡು ಹೋಗುವಲ್ಲಿ ತಮ್ಮ ಕೊಡುಗೆ ನೀಡಿದಂತಾಯಿತು.
ದ್ರೌಪದಿಗೆ ಎದುರಾಗುವ ಕಾವಲುಗಾರನ ಪಾತ್ರ ನಿರ್ವಹಿಸಿದ ಹಾಸ್ಯಗಾರ ಬಾಲಕೃಷ್ಣ ಮಣಿಯಾಣಿ ಮವ್ವಾರು ಅವರ ಪ್ರಬುದ್ಧ, ಎಲ್ಲೆ ಮೀರದ, ಪ್ರಸಂಗದ ಚೌಕಟ್ಟಿನಲ್ಲಿದ್ದ ಶುದ್ಧ ಹಾಸ್ಯ ಮನರಂಜಿಸಿತು. ದ್ರೌಪದಿಯ ಮಾತುಗಳನ್ನೇ ತಿರುಚಿ ಆಕೆಯನ್ನು ಒಂದೆರೆಕ್ಷಣ ತಬ್ಬಿಬ್ಬುಗೊಳಿಸುವ ಮವ್ವಾರು, ಕಾವಲುಗಾರನ ಅಪಭ್ರಂಶ ಮಾತುಗಳನ್ನು ಸಂಸ್ಕರಿಸಿ ಸಹನೆಯಿಂದ ವರ್ತಿಸುವ ದ್ರೌಪದಿ ಸಂವಾದದ ಭಾಗ ಮನಮುಟ್ಟಿತು. ಮವ್ವಾರು ಹಾಸ್ಯಗಾರರು ನೃತ್ಯದಲ್ಲೂ ತಮ್ಮ ಚಾಕಚಕ್ಯತೆ ಮೆರೆದರು. ಸಾಂಪ್ರದಾಯಿಕವಾಗಿ ನಾಟ್ಯದೊಂದಿಗೆ ರಕ್ಕಸ ವೇಷದಂತೆ ನರ್ತಿಸುವುದು, ಮೊಣಕಾಲಿನಲ್ಲಿ ಕುಣಿತ ಪ್ರದರ್ಶಿಸಿದರೂ ಅಪ್ರಭ್ರಂಶಕ್ಕೆ ಎಡೆ ಮಾಡಲಿಲ್ಲ.
ಕಮಲಾವತಿಯ ರಾಜ ಕಮಲಭೂಪ (ರತಿಯ ತಂದೆ -ಪಾತ್ರಧಾರಿ ಕೃಷ್ಣ ಭಟ್ ದೇವಕಾನ) ಗಂಭೀರ ಸಂಭಾಷಣೆ, ಬಲರಾಮನ ಕ್ರೋಧ ಮತ್ತು ಅಪಹಾಸ್ಯದ ಮಾತುಗಳು, ಕೃಷ್ಣನ ಸೌಜನ್ಯ ಇವುಗಳು ಕತೆಯ ಮಧ್ಯೆ ಮಧ್ಯೆ ಕಾಣಸಿಕ್ಕಿ ಒಟ್ಟು ಪ್ರದರ್ಶನಕ್ಕೆ ಕಳೆಕೊಟ್ಟವು. ತನ್ನ ತಂದೆ ಮಧ್ಯರಾತ್ರಿ ಹೆಣ್ಣು ಕೇಳಲು ಬಂದ ದ್ರೌಪದಿಯೊಡನೆ ಬಿನ್ನಾಭಿಪ್ರಾಯ ಹೊಂದಿ ಜಗಳವಾಡುವುದನ್ನು ಕೇಳಿ ರತಿ ಓಡೋಡಿ ತಂದೆಯಲ್ಲಿಗೆ ಪ್ರವೇಶಿಸುವ ಮತ್ತು ತಂದೆಯೊಡನೆ ವಿಷಯ ಕೇಳುವ ಸಂದರ್ಭದಲ್ಲಿ ಕತೆ ಎಳೆಯುವ ಸಲುವಾಗಿ ದೀರ್ಘ ನೃತ್ಯಕ್ಕೆ ಅವಕಾಶ ಕೊಟ್ಟರೇನೋ ಎನ್ನಿಸುವಂತಿದ್ದರೂ ರತಿಯ ನಾಟ್ಯ ಮನಮೋಹಕವಾಗಿತ್ತು. ಕಮಲಭೂಪ ಮರಳಿ ದ್ರೌಪದಿಯನ್ನು ಕರೆಸಿ ದಿಬ್ಬಣ ಕೊಂಡೊಯ್ಯುತ್ತಾನೆ. ಇತ್ತ ಮಾದ್ರಾಧೀಶ ಕೌಂಡ್ಲಿಕ ಕೂಡಾ ರತಿಯ ವಿವಾಹಾಪೇಕ್ಷಿತನಾಗಿರುತ್ತಾನೆ. ಮದುವೆಗೆ ಒಪ್ಪಿಗೆ ಸಿಗದಿದ್ದಾಗ ಮದುವೆ ಮನೆ ರಣಾಂಗಣವಾಗಿ ದ್ರೌಪದಿ ಚಂಡಿಕೆಯಾಗಿ ಕೌಂಡ್ಲಿಕನನ್ನು ವಧಿಸಿ ಅಳಿಯ ಮನ್ಮಥನ ಜತೆ ರತಿಗೆ ವಿವಾಹ ಮಾಡಿಸುತ್ತಾಳೆ.
ಹಿಮ್ಮೇಳನದಲ್ಲಿ ಭಾಗವತರಾಗಿ ಮುರಳೀಕೃಷ್ಣ ತೆಂಕಬೈಲು, ರಮೇಶ ಭಟ್ ಪುತ್ತೂರು, ಚಂಡೆ ಮದ್ದಳೆಯ ವಾದಕರಾಗಿ ದೇಲಂತ ಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ್ ಐಲ, ಲಕ್ಷ್ಮೀಶ ಬೆಂಗ್ರೋಡಿ, ನಿಶ್ಚಿತ್ ಜೋಗಿ ಚಕ್ರತಾಳದಲ್ಲಿ ಕಾಣಿಸಿಕೊಂಡರು. ರಮೇಶ್ ಭಟ್ ಅವರ ಅದ್ಭುತ ಕಂಠಸಿರಿಯಲ್ಲಿ ಶೃಂಗಾರ, ವೀರ, ಕರುಣ ರಸಗಳ ಭಾಗವತಿಕೆ ಯಕ್ಷಗಾನದ ಕೆಲವು ನ್ಯೂನತೆಗಳಿಗೆ ತೆರೆ ಎಳೆದು ಉತ್ತಮ ಪ್ರದರ್ಶನ ಎಂಬ ಹೆಗ್ಗಳಿಕೆ ತಂದುಕೊಟ್ಟಿತು.
ವಾರಿಜಾಕ್ಷಿ ಯಸ್. ಡಮ್ಮಡ್ಕ