ಕೊಲೊಂಬೊ: ಶ್ರೀಲಂಕಾದ ಬಿಗ್ ಹಿಟ್ಟಿಂಗ್ ಆಲ್‌ರೌಂಡರ್ ತಿಸರ ಪೆರೆರ ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.
2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಪೆರೆರ ಈ 12 ವರ್ಷಗಳ ಅವಧಿಯಲ್ಲಿ ಒಟ್ಟು 6 ಟೆಸ್ಟ್, 166 ಏಕದಿನ (2,338 ರನ್, 175 ವಿಕೆಟ್), 84 ಟಿ20 (1,204 ರನ್, 51 ವಿಕೆಟ್) ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದಾರೆ.
“ದೇಶವನ್ನು ಏಳು ಬಾರಿ ವಿಶ್ವಕಪ್‌ಗ್ಳಲ್ಲಿ ಪ್ರತಿನಿಧಿಸಿದ್ದು ಹೆಮ್ಮೆಯ ಸಂಗತಿ. 2014ರ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಗೆಲುವಿನಲ್ಲಿ ನನ್ನ ಪಾತ್ರವನ್ನು ಎಂದಿಗೂ ಮರೆಯಲಾರೆ. ಇನ್ನುಳಿದ ಅವಧಿಯಲ್ಲಿ 12 ವರ್ಷಗಳ ಕ್ರಿಕೆಟ್ ಜೀವನವನ್ನು ಆನಂದಿಸುತ್ತ ಇರುತ್ತೇನೆ’ ಎಂದು ಪೆರೆರ ಹೇಳಿದ್ದಾರೆ.
ಹ್ಯಾಟ್ರಿಕ್ ಹೀರೋ :
ಬಿರುಸಿನ ಬ್ಯಾಟಿಂಗ್ ಮೂಲಕ ಏಕಾಂಗಿಯಾಗಿ ಪಂದ್ಯವನ್ನು ಗೆದ್ದು ಕೊಡುವ ಸಾಮರ್ಥ್ಯ ಹೊಂದಿದ್ದ ತಿಸರ ಪೆರೆರ, ಮಧ್ಯಮ ವೇಗದ ಬೌಲಿಂಗ್ ಮೂಲಕವೂ ಮ್ಯಾಚ್ ವಿನ್ನರ್ ಎನಿಸಿದ್ದರು. ಏಕದಿನ ಹಾಗೂ ಟಿ20 ಪಂದ್ಯಗಳೆರಡರಲ್ಲೂ ಹ್ಯಾಟ್ರಿಕ್ ಸಾಧಿಸಿದ ಹೆಗ್ಗಳಿಕೆ ಈ ಸವ್ಯಸಾಚಿಯದ್ದು. 2017ರಲ್ಲಿ ಟಿ20 ತಂಡದ ನಾಯಕನಾಗಿಯೂ ಕರ್ತವ್ಯ ನಿಭಾಯಿಸಿದ್ದರು.