ಉಡುಪಿ: ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಕಾರಿನಲ್ಲಿ (ಆಗುಂಬೆ ಹೆಬ್ರಿ ಕಡೆಯಿಂದ ಬರುತ್ತಿದ್ದ) ಅಕ್ರಮವಾಗಿ ಸಾಗಿಸುತ್ತಿದ್ದ 6 ಲಕ್ಷ ರೂ. ಮೌಲ್ಯದ 20 ಕೆ.ಜಿ. ಗಾಂಜಾ ಸಹಿತ ಮೂವರು ಆರೋಪಿಗಳನ್ನು ಶನಿವಾರ ಸೆನ್ ಅಪರಾಧ ಪೊಲೀಸರ ತಂಡ ಬಂಧಿಸಿದೆ.
ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಮಂಜುನಾಥ್ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳೆಲ್ಲರೂ ಚಿಕ್ಕಮಗಳೂರು ಜಿಲ್ಲೆೆಯವರಾಗಿದ್ದಾರೆ.
ಹರಾವರಿ ಕಟ್ಟಿನಮನೆ ನಿವಾಸಿ ವಿಜಯಕುಮಾರ್ .ಎಸ್ (23), ಎನ್‌ಆರ್‌ಪುರ ಬೆಲೂರು ನಿವಾಸಿ ನಿಕ್ಷೇಪ್ ಎಸ್. ವಿ (24), ಕೊಪ್ಪ, ಗುಣವಂತೆ ನಿವಾಸಿ ನಿತೇಶ್ ಕುಮಾರ್ (22) ಬಂಧಿತ ಆರೋಪಿಗಳು.
ಆರೋಪಿಗಳ ವಶದಲ್ಲಿದ್ದ ಪರವಾನಿಗೆ ಇಲ್ಲದೆ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 20 ಕಿಲೋ 614 ಗ್ರಾಂ ತೂಕದ ಗಾಂಜಾ. ಇದರ ಅಂದಾಜು ಮೌಲ್ಯ 6,09,000 ರೂ., ಗಿರಾಕಿ ಕುದುರಿಸಲು ಬಳಸುವ 3 ಮೊಬೈಲ್ ಹ್ಯಾಂಡ್ ಸೆಟ್‌ಗಳು, 9 ಲಕ್ಷ ರೂ., ಮೌಲ್ಯದ ಟೊಯೊಟಾ ಗ್ಲಾನ್ಜಾ ಕಾರು, 6 ಸಾವಿರ ರೂ., ನಗದು ಹಣ ಸೇರಿದಂತೆ ಒಟ್ಟು 15,30,000 ರೂ. ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೆನ್ ಪೊಲೀಸ್ ಠಾಣೆ ಎ.ಎಸ್.ಐ ಕೇಶವ ಗೌಡ, ಸಿಬ್ಬಂದಿಗಳಾದ ನಾಗೇಶ, ರಾಘವೇಂದ್ರ ಬ್ರಹ್ಮಾವರ, ಕೃಷ್ಣಪ್ರಸಾದ್, ನಾಗೇಶ್, ಪ್ರವೀಣ್, ಜೀವನ್, ಪ್ರಶಾಂತ್, ನಿಲೇಶ್, ದೀಕ್ಷಿತ್,ಮಾಯಪ್ಪ, ನವೀನ್ ಚಂದ್ರ ಮತ್ತು ತಾಂತ್ರಿಕ ವಿಭಾಗದ ದಿನೇಶ್ ಕಾರ್ಯಾಚರಣೆ ತಂಡದಲ್ಲಿದ್ದರು.