ಕೊಲಂಬೊ: ಕ್ರಿಕೆಟ್ ನ ಅತ್ಯಂತ ಅಪ್ರತಿಮ ಬೆಂಬಲಿಗರಲ್ಲಿ ಒಬ್ಬರಾದ, ‘ಅಂಕಲ್ ಪರ್ಸಿ’ ಎಂದು ಕರೆಯಲ್ಪಡುತ್ತಿದ್ದ ಶ್ರೀಲಂಕಾದ ಪರ್ಸಿ ಅಬೆಸೆಕರ ಅವರು ದೀರ್ಘ ಕಾಲದ ಅನಾರೋಗ್ಯದ ನಂತರ ಸೋಮವಾರ (ಅಕ್ಟೋಬರ್ 30) ನಿಧನರಾದರು.
ಶ್ರೀಲಂಕಾ ಕ್ರಿಕೆಟ್ ತಂಡದ ದೊಡ್ಡ ಚೀಯರ್ ಲೀಡರ್ ಆಗಿದ್ದ ಅಂಕಲ್ ಪರ್ಸಿ ಅವರು ಹಲವು ವರ್ಷಗಳ ಕಾಲ ವಿವಿಧ ಕ್ರಿಕೆಟ್ ಪ್ರವಾಸಗಳಿಗೆ ಲಂಕಾ ತಂಡದೊಂದಿಗೆ ಪ್ರಯಾಣಿಸುತ್ತಿದ್ದರು.
ಪ್ರಪಂಚದಾದ್ಯಂತದ ಕ್ರೀಡಾಂಗಣಗಳಲ್ಲಿ ಶ್ರೀಲಂಕಾದ ರಾಷ್ಟ್ರಧ್ವಜವನ್ನು ಬೀಸುತ್ತಿರುವ ಅಂಕಲ್ ಪರ್ಸಿ ಅವರು ಕ್ರೀಡೆ ಪ್ರೇಮಿಗಳಿಗೆ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. 2022 ರವರೆಗೆ ಅಂಕಲ್ ಪರ್ಸಿ ಲಂಕಾದ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಹಾಜರಾಗುತ್ತಿದ್ದರು.
ಪರ್ಸಿ ಅಬೇಶೇಖರ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 2023 ಸೆಪ್ಟೆಂಬರ್ ನಲ್ಲಿ, ಶ್ರೀಲಂಕಾ ಕ್ರಿಕೆಟ್ ಅವರ ಯೋಗಕ್ಷೇಮ ಮತ್ತು ವೈದ್ಯಕೀಯ ವೆಚ್ಚಗಳನ್ನು ಭರಿಸಲು 5 ಮಿಲಿಯನ್ ರೂ ನೀಡಿತ್ತು. ಕಳೆದ ಏಷ್ಯಾ ಕಪ್ ವೇಳೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಶ್ರೀಲಂಕಾದಲ್ಲಿ ಅಂಕಲ್ ಪರ್ಸಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.
1979 ರ ವಿಶ್ವಕಪ್‌ನಿಂದ, ಶ್ರೀಲಂಕಾ ಕ್ರಿಕೆಟ್ ತಂಡವನ್ನು ಹುರಿದುಂಬಿಸಲು ಪರ್ಸಿ ಅಬೆಸೆಕೆರಾ ಸ್ಟೇಡಿಯಂನಲ್ಲಿ ರಾಷ್ಟ್ರ ಧ್ವಜವನ್ನು ಬೀಸುತ್ತಿದ್ದರು. ಆದರೆ, ಅನಾರೋಗ್ಯದ ಕಾರಣ 2023ರ ವಿಶ್ವಕಪ್ ಗೆ ಭಾರತಕ್ಕೆ ಆಗಮಿಸಲಿಲ್ಲ.
ಶ್ರೀಲಂಕಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ, ಮಾಜಿ ಆಲ್‌ರೌಂಡರ್ ರಸೆಲ್ ಅರ್ನಾಲ್ಡ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.