Advertisement

ರಫೇಲ್‌: ಕಾಂಗ್ರೆಸ್‌ನಿಂದ ಪ್ರಧಾನಿ ಪದಚ್ಯುತಿ ಸಂಚು

04:30 AM Sep 25, 2018 | Karthik A |

ಹೊಸದಿಲ್ಲಿ /ಜೈಪುರ: ರಫೇಲ್‌ ಯುದ್ಧ ವಿಮಾನ ಖರೀದಿ ಡೀಲ್‌ಗೆ ಸಂಬಂಧಿಸಿ ಕಾಂಗ್ರೆಸ್‌ ನಡೆಸುತ್ತಿರುವ ಆರೋಪಗಳು ಕೇವಲ ಗ್ರಹಿಕೆಯದ್ದು. ಈ ಎಲ್ಲದರ ಹಿಂದೆ ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕು ಎಂಬ ಸಂಚು ಇದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಗಂಭೀರ ಆರೋಪ ಮಾಡಿದ್ದಾರೆ. ಇನ್ನೊಂದೆಡೆ, ಅಮೇಠಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾತನಾಡಿ, ಪ್ರಧಾನಿ ಮೋದಿ ‘ಯೋಧರ, ರೈತರ, ಹುತಾತ್ಮರ ಜೇಬಿನಿಂದ ಪಡೆದುಕೊಂಡ 20 ಸಾವಿರ ಕೋಟಿ ರೂ. ಮೊತ್ತವನ್ನು ಉದ್ಯಮಿ ಅಂಬಾನಿ ಕೈಗೆ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.

Advertisement

ಬಹುಕೋಟಿ ಮೌಲ್ಯದ ರಫೇಲ್‌ ಖರೀದಿ ಸಂಬಂಧ ಕಾಂಗ್ರೆಸ್‌ ಗ್ರಹಿಕೆಯ ಯುದ್ಧ ನಡೆಸುತ್ತಿದೆ. ಅದನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. “ಎಎನ್‌ಐ’ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ಅವರು, ಕಾಂಗ್ರೆಸ್‌ ಕೇಂದ್ರ ಸರಕಾರದ ಮಟ್ಟದಲ್ಲಿ ಅಪಪ್ರಚಾರ ನಡೆಸುತ್ತಿದೆ. ಒಪ್ಪಂದ ರದ್ದು ಮಾಡಲು, ದೇಶದ ಯೋಧರ ನೈತಿಕ ಸ್ಥೈರ್ಯ ಕುಗ್ಗಿಸಲು ಪ್ರಯತ್ನಗಳು ನಡೆಯುತ್ತಿವೆ. ಅದರ ಹಿಂದೆ ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಧೋರಣೆ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಅದಕ್ಕಾಗಿ ಕಾಂಗ್ರೆಸ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಜೋಡಿಸಿದೆ ಎಂದೂ ಆರೋಪಿಸಿದ್ದಾರೆ.

ವಾದ್ರಾ ಲಿಂಕ್‌: ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವ ಗಜೇಂದ್ರ ಸಿಂಗ್‌ ಚೌಹಾಣ್‌ ಮಾತನಾಡಿ, ಸೋನಿಯಾ ಅಳಿಯ ರಾಬರ್ಟ್‌ ವಾದ್ರಾರ ಕಂಪೆನಿಗೆ ರಫೇಲ್‌ ಡೀಲ್‌ ನೀಡುವ ಪ್ರಯತ್ನ ನಡೆದಿತ್ತು. ಅದಕ್ಕಾಗಿ ಶಸ್ತ್ರಾಸ್ತ್ರ ದಳ್ಳಾಳಿ ಸಂಜಯ ಭಂಡಾರಿ ಪ್ರಯತ್ನ ನಡೆಸಿದ್ದ ಎಂದು ದೂರಿದ್ದಾರೆ. ಆ ಕುರಿತ ದಾಖಲೆಗಳನ್ನು ಶೀಘ್ರ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ.

ಮತ್ತೂಮ್ಮೆ ಆರೋಪ: ಸ್ವಕ್ಷೇತ್ರ ಅಮೇಠಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ “ದೇಶದ ಕಾವಲುಗಾರ (ಪಿಎಂ ಮೋದಿ) ಸೈನಿಕರು, ಹುತಾತ್ಮರು, ರೈತರಿಂದ ಪಡೆದುಕೊಂಡ 20 ಸಾವಿರ ಕೋಟಿ ರೂ.ಗಳನ್ನು ಉದ್ಯಮಿ ಅನಿಲ್‌ ಅಂಬಾನಿ ಕೈಗೆ ನೀಡಿದ್ದಾರೆ. ವಿಮಾನದ ದರ ಯಾಕೆ ಬಹಿರಂಗ ಮಾಡಲಾಗಿಲ್ಲ ಮತ್ತು ಅನಿಲ್‌ ಅಂಬಾನಿಯವರ ಸಂಸ್ಥೆಗೇ ಯಾಕೆ ಗುತ್ತಿಗೆ ನೀಡಲಾಯಿತು’ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಫ್ರಾನ್ಸ್‌ ಮಾಜಿ ಅಧ್ಯಕ್ಷರೇ ಸ್ಪಷ್ಟನೆ ನೀಡಿದ್ದಾರೆ ಎಂದಿದ್ದಾರೆ.

ಸಿವಿಸಿ ಜತೆ ಭೇಟಿ: ಈ ನಡುವೆ ಹೊಸದಿಲ್ಲಿಯಲ್ಲಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ನೇತೃತ್ವದ ನಿಯೋಗ ಕೇಂದ್ರ ಜಾಗೃತ ದಳ (ಸಿವಿಸಿ) ಆಯುಕ್ತ ಕೆ.ವಿ.ಚೌಧರಿ ಅವರನ್ನು ಭೇಟಿಯಾಗಿ ಡೀಲ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿತು. 

Advertisement

ಕಾಂಗ್ರೆಸ್‌ ವಿಡಿಯೋ ಟ್ವೀಟ್‌
ಬೆಂಗಳೂರಿನಲ್ಲಿರುವ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ.ನಲ್ಲಿಯೇ (ಎಚ್‌ಎಎಲ್‌) 108 ರಫೇಲ್‌ ಯುದ್ಧ ವಿಮಾನಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ಡಸ್ಸಾಲ್ಟ್ ಏವಿಯೇಷನ್‌ ಅಧ್ಯಕ್ಷ ಎರ್ರಿಕ್‌ ಟ್ರಾಪಿಯರ್‌ ಹೇಳಿದ್ದಾರೆ ಎಂದು ಹೇಳಲಾಗಿರುವ ವಿಡಿಯೋವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. 2015ರ ಮಾ.25ರಂದು ಅವರು ಈ ಮಾತುಗಳನ್ನು ಹೇಳಿದ್ದರು. 2015ರ ಎ.10ರಂದು ಪ್ರಧಾನಿ ಮೋದಿ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಹೊಸ ಒಪ್ಪಂದ ಪ್ರಕಟಿಸಿ, ಎಚ್‌ಎಎಲ್‌ ಅನ್ನು ಹೊರಗಿಟ್ಟಿದ್ದರು ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ರಫೇಲ್‌ಗೆ ಸಂಬಂಧಿಸಿ ಫ್ರಾನ್ಸ್‌ ಮಾಜಿ ಅಧ್ಯಕ್ಷ ಫ್ರಾನ್‌ಸ್ವ ಒಲಾಂದ್‌ ಸ್ಪಷ್ಟನೆ ನೀಡಿದ್ದಾರೆ. ಮತ್ತೆ ಅದರ ಬಗ್ಗೆ ಸಂಶಯಪಡುವ ಅಗತ್ಯವೇ ಇಲ್ಲ. ಮುಂದಿನ ಚುನಾವಣೆಗಾಗಿ ಕಾಂಗ್ರೆಸ್‌ ಒಪ್ಪಂದದ ಲಾಭ ಪಡೆಯಲು ಮುಂದಾಗಿದೆ.
– ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

ತಮ್ಮ ಹೇಳಿಕೆಗಳ ಮೂಲಕ ರಾಹುಲ್‌ ಗಾಂಧಿ ಅವರು ಭಾರತದ ವಿರುದ್ಧ ಮಾತನಾಡಲು ಪಾಕಿಸ್ಥಾನಕ್ಕೆ ಅಸ್ತ್ರಗಳನ್ನು ನೀಡುತ್ತಿದ್ದಾರೆ. ಪಾಕಿಸ್ಥಾನದ ನಾಯಕರು 2019ರ ಚುನಾವಣೆಗೆ ರಾಹುಲ್‌ ಪರ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಪಾಕ್‌ಗಾಗಲೀ, ಕಾಂಗ್ರೆಸ್‌ಗಾಗಲೀ ಮೋದಿ ಅವರನ್ನು ಕೆಳಗಿಳಿಸಲಾಗದು.
– ಸಂಬಿತ್‌ ಪಾತ್ರಾ, ಬಿಜೆಪಿ ವಕ್ತಾರ

ಡೀಲ್‌ನಲ್ಲಿ ಉಂಟಾಗಿರುವ ಅವ್ಯವಹಾರದ ಬಗ್ಗೆ ಗಮನಹರಿಸುವುದನ್ನು ಬಿಟ್ಟು ಅದರಲ್ಲಿ ಪಾಕಿಸ್ಥಾನದ ವಿಚಾರ ತರಲು ಪ್ರಯತ್ನಿಸಲಾಗುತ್ತದೆ. ದೇಶಭಕ್ತಿ ಬಗ್ಗೆ ಪಾಠ ಮಾಡುವುದು ಬಿಟ್ಟು ಕೇಳಿದ ಪ್ರಶ್ನೆಗೆ ಕೇಂದ್ರ ಉತ್ತರಿಸಲಿ.
– ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next