Advertisement

ರಾಜ್ಯದ ಶೇ. 90 ರೈತರು ಸಾಲ ಮುಕ್ತ

09:25 AM Sep 12, 2019 | sudhir |

ಬೆಂಗಳೂರು: ಮೈತ್ರಿ ಸರಕಾರದ ಮಹತ್ವಾಕಾಂಕ್ಷಿ ಸಾಲ ಮನ್ನಾ ಯೋಜನೆಶೇಕಡಾ 90ರಷ್ಟು ಯಶಸ್ವಿಯಾಗಿದ್ದು, ಬಾಕಿ ಉಳಿದಿರುವ ಶೇ. 10ರಷ್ಟು ರೈತರ ಮಾಹಿತಿ ಸರಕಾರದ ಕೈಗೆ ಸಿಕ್ಕಿಲ್ಲ.

Advertisement

ರಾಜ್ಯದ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ಶೇ. 90ರಷ್ಟು ರೈತರ ಸಾಲ ಮನ್ನಾ ಮಾಡಲಾಗಿದ್ದು, ಉಳಿದ ಶೇ. 10ರಷ್ಟು ರೈತರು ನಿಯಮಾವಳಿ ಪ್ರಕಾರ ರೇಶನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಹಾಗೂ ಪಹಣಿ ಪತ್ರ (ಉತಾರ) ದಾಖಲೆಗಳನ್ನು ಸಲ್ಲಿಸದಿರುವುದರಿಂದ ಸಾಲ ಮನ್ನಾ ಪ್ರಯೋಜನದಿಂದ ವಂಚಿತರಾಗಿದ್ದಾರೆ.

2017ರ ಡಿ.31ಕ್ಕೂ ಮೊದಲು ಸುಸ್ತಿ ಸಾಲಗಾರರಾಗಿರುವ ಸಹಕಾರಿ ಬ್ಯಾಂಕ್‌ಗಳ 1 ಲಕ್ಷ ರೂ.ವರೆಗಿನ ಸಾಲ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 2 ಲಕ್ಷ ರೂ.ವರೆಗಿನ ಬೆಳೆ ಸಾಲ ಮನ್ನಾ ಮಾಡಲು ಹಿಂದಿನ ಮೈತ್ರಿ ಸರಕಾರ ತೀರ್ಮಾನಿಸಿತ್ತು. ಎರಡೂ ಮಾದರಿಗಳ ಬ್ಯಾಂಕ್‌ಗಳಲ್ಲಿ ಸುಮಾರು 45 ಲಕ್ಷ ರೈತರು ಸಾಲ ಮನ್ನಾ ವ್ಯಾಪ್ತಿಗೆ ಒಳಪಟ್ಟಿದ್ದು, ಬಹುತೇಕ ರೈತರ ಸಾಲದ ಬಾಕಿ ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡಿದ್ದು, ಋಣಮುಕ್ತರನ್ನಾಗಿ ಮಾಡುವ ಪ್ರಕ್ರಿಯೆ ಮುಂದುವರಿದಿದೆ.

3 ಲಕ್ಷ ರೈತರಿಗೆ ಸಿಗದ ಪ್ರಯೋಜನ

ಸರಕಾರದ ಮಾಹಿತಿಯ ಪ್ರಕಾರ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸುಸ್ತಿದಾರರಾಗಿದ್ದು, ಸಾಲ ಮನ್ನಾ ವ್ಯಾಪ್ತಿಗೊಳಪಡುವ 2 ಲಕ್ಷ ರೈತರು ಸೂಕ್ತ ದಾಖಲೆ ನೀಡದೆ ಯೋಜನೆಯ ಪ್ರಯೋಜನ ಪಡೆಯುವಲ್ಲಿ ವಿಫ‌ಲರಾಗಿದ್ದಾರೆ. ಅದೇ ರೀತಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸುಸ್ತಿದಾರರಾಗಿರುವ ಸುಮಾರು 1 ಲಕ್ಷ ರೈತರು ಸೂಕ್ತ ದಾಖಲೆ ಒದಗಿಸುವಲ್ಲಿ ವಿಫ‌ಲವಾಗಿರುವುದರಿಂದ ಅವರಿಗೂ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ.

Advertisement

ಇನ್ನು ಕೆಲವು ರೈತರು ದಾಖಲೆಯಲ್ಲಿ ನೀಡಿರುವ ವಿಳಾಸದಲ್ಲಿ ಪತ್ತೆಯಾಗದಿರುವುದು ಸರಕಾರಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆದರೂ ಕಂದಾಯ ಇಲಾಖೆಯ ಅಧಿಕಾರಿಗಳು ಇವರನ್ನೆಲ್ಲ ಹುಡುಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.

5.86 ಲಕ್ಷ ರೈತರು ಹೊರಕ್ಕೆ

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಸುಮಾರು 5.86 ಲಕ್ಷ ರೈತರು ಆದಾಯ ತೆರಿಗೆ ಪಾವತಿಸುವ ಹಾಗೂ ಮಾಸಿಕ 15 ಸಾವಿರ ರೂ.ಗಿಂತ ಹೆಚ್ಚಿನ ಸಂಬಳ ಪಡೆಯುವುದರಿಂದ ಅವರನ್ನು ಸಾಲ ಮನ್ನಾ ಯೋಜನೆಯಿಂದ ಕೈಬಿಡಲಾಗಿದೆ. ಅಲ್ಲದೆ 35,261 ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರ ಆಧಾರ್‌ ಕಾರ್ಡ್‌ ಸಂಖ್ಯೆ, ರೇಶನ್‌ ಕಾರ್ಡ್‌ ಮತ್ತು ಪಹಣಿ ಪತ್ರ ಹೊಂದಾಣಿಕೆಯಾಗದಿರುವುದರಿಂದ ಸಾಲ ಮನ್ನಾ ವ್ಯಾಪ್ತಿಯಿಂದ ಕೈಬಿಡಲಾಗಿದೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next